ಭಾನುವಾರ, ಆಗಸ್ಟ್ 25, 2019
20 °C
ಶಿರೂರು ಪಾರ್ಕ್‌– ಹೊಸೂರು ರಸ್ತೆಯಲ್ಲಿ ಮಾರುದ್ದಕ್ಕೂ ಗುಂಡಿಗಳ ದರ್ಶನ

ರಸ್ತೆಯಲ್ಲಿ ಹೊಂಡವೋ; ಹೊಂಡದಲ್ಲಿ ರಸ್ತೆಯೋ!

Published:
Updated:
Prajavani

ಹುಬ್ಬಳ್ಳಿ: ಈ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಅಥವಾ ನಡೆದುಕೊಂಡು ಒಮ್ಮೆ ಓಡಾಡಿದರೆ, ನಿಮಗೆ ಸ್ನಾನ ಮಾಡಿದ ಅನುಭವವಾಗುತ್ತದೆ. ಬೈಕ್ ಸವಾರರೇನಾದರೂ ಸ್ವಲ್ಪ ಎಚ್ಚರ ತಪ್ಪಿದರೆ, ನೀರಿನಲ್ಲಿ ಮುಳುಗಿ ಏಳಬೇಕು. ಕಾರು ಅಥವಾ ಆಟೊಗಳ ಚಾಲಕರು ಗ್ಯಾರೇಜ್‌ಗೆ ಹಣ ಸುರಿಯುವುದು ಖಚಿತ!

ಶಿರೂರು ಪಾರ್ಕ್ ವೃತ್ತದಿಂದ ಹೊಸೂರು ವೃತ್ತದ ನಡುವಿನ ಒಂದೂವರೆ ಕಿಲೋಮೀಟರ್ ಉದ್ದದ ರಸ್ತೆಯ ಸ್ಥಿತಿ ಇದು. ಈ ರಸ್ತೆಯ ಕೆಲವೆಡೆ ರಸ್ತೆಯಲ್ಲಿ ಹೊಂಡವಿದೆಯೋ ಅಥವಾ ಹೊಂಡದಲ್ಲೇ ರಸ್ತೆ ಇದೆಯೋ ಎಂಬ ಗೊಂದಲ ಕಾಡದೆ ಇರದು. ಅಷ್ಟೊಂದು ಗುಂಡಿಗಳಿಂದ ಆವೃತವಾಗಿದೆ ಈ ರಸ್ತೆ.

ಹೊಸೂರಿನಲ್ಲಿರುವ ನೂತನ ತಾಲ್ಲೂಕು ನ್ಯಾಯಾಲಯ ಸಂಕೀರ್ಣಕ್ಕೆ ಇತ್ತೀಚೆಗಷ್ಟೇ ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಭೇಟಿ ನೀಡಿದ್ದರು. ಆಗ, ಎಲ್ಲಿ ಮರ್ಯಾದೆ ಹೋಗುತ್ತದೊ ಎಂದು ಅಂಜಿದ್ದ ಪಾಲಿಕೆ, ಅವರ ಭೇಟಿಗೂ ಮುಂಚೆ ಹೊಸೂರು ವೃತ್ತದ ಸಿಗ್ನಲ್‌ನಿಂದ ಕೋರ್ಟ್‌ವರೆಗಿನ ರಸ್ತೆ ಗುಂಡಿಗಳಿಗೆ ಸಿಮೆಂಟ್ ಮಿಶ್ರಿತ ಮರಳು ಹಾಕಿ ಮುಚ್ಚಿತ್ತು. ಆದರೆ, ಅವರು ಭೇಟಿ ನೀಡಿ ಹೋದ ಮೂರೇ ದಿನಕ್ಕೆ ಆ ಗುಂಡಿಗಳೂ ಬಾಯ್ತೆರೆದಿವೆ.

ಚಕ್ರ ಮೇಲಕ್ಕೇಳದು: ‘ಕಾರಿನ ಚಕ್ರವನ್ನೇನಾದರೂ ಗುಂಡಿಗೆ ಇಳಿಸಿದರೆ, ತಕ್ಷಣ ಮೇಲಕ್ಕೆ ಬರುವುದಿಲ್ಲ. ಒಂದೆರಡು ಸಲ ಸುತ್ತಿ ನಂತರ ಕಾರು ಮುಂದಕ್ಕೆ ಸಾಗುತ್ತದೆ. ಹಲವು ತಿಂಗಳಿಂದ ಇರುವ ಈ ಗುಂಡಿಯಲ್ಲಿ ಇತ್ತೀಚೆಗೆ ಬಸ್‌ಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಓಡಾಡುವುದರಿಂದ, ಗುಂಡಿಗಳು ಅಗಲವಾಗುವ ಜತೆಗೆ ಆಳವಾಗಿವೆ ಕೂಡ. ಹಾಗಾಗಿ, ಸವಾರರಿಗೆ ಈ ರಸ್ತೆ ನಿಜಕ್ಕೂ ಸಂಕಷ್ಟಕರವಾಗಿದೆ’ ಎಂದು ಸ್ಥಳೀಯರಾದ ವೀರೇಶ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಸ್ತೆ ಪಕ್ಕದ ಚರಂಡಿಗಳು ಕಟ್ಟಿಕೊಂಡಿವೆ. ಹಾಗಾಗಿ, ಮಳೆ ಸುರಿದರೆ ನೀರು ಹರಿದು ಹೋಗಲು ಸಾಧ್ಯವಾಗದೆ ಅಲ್ಲೇ ನಿಲ್ಲುತ್ತದೆ. ಜತೆಗೆ, ರಸ್ತೆಗೂ ನೀರು ಆವರಿಸಿಕೊಂಡಿದೆ. ಹಾಗಾಗಿ, ಎಷ್ಟೋ ವಾಹನ ಸವಾರರು ರಸ್ತೆಯಲ್ಲಿ ನೀರು ನಿಂತಿದೆ ಅಂದುಕೊಂಡು ವಾಹನವನ್ನು ಗುಂಡಿಗೆ ಇಳಿಸಿ, ಹಾನಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಬಿದ್ದವರಿಗೆ ಲೆಕ್ಕವಿಲ್ಲ: ‘ಈ ರಸ್ತೆಯಲ್ಲಿ ಶಾಲಾ–ಕಾಲೇಜುಗಳು ಕೂಡ ಇವೆ. ಹಾಗಾಗಿ, ಒಂದೇ ಬೈಕ್‌ನಲ್ಲಿ ಓಡಾಡುವ ಎಷ್ಟೋ ವಿದ್ಯಾರ್ಥಿಗಳು, ಗುಂಡಿ ತಪ್ಪಿಸಲು ಹೋಗಿ ಬ್ಯಾಲೆನ್ಸ್‌ ತಪ್ಪಿ ಬಿದ್ದಿರುವುದನ್ನು ಕಣ್ಣಾರೆ ಕಂಡಿದ್ದೇವೆ’ ಎಂದು ವ್ಯಾಪಾರಿ ವೀರಭದ್ರಪ್ಪ ಕೆಲ ಘಟನೆಗಳನ್ನು ಮೆಲುಕು ಹಾಕಿದರು.

‘ಇಲ್ಲಿ ಸಿಆರ್‌ಎಫ್ ರಸ್ತೆ ನಿರ್ಮಾಣವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಯಾವಾಗ ಆಗುತ್ತದೊ ಗೊತ್ತಿಲ್ಲ. ಅಲ್ಲಿಯವರೆಗೂ ಈ ರಸ್ತೆಯನ್ನು ದುರಸ್ತಿ ಮಾಡಲು ಪಾಲಿಕೆಯವರಿಗೆ ಏನಾಗಿದೆ. ಸಾರ್ವಜನಿಕರ ದೂರು, ಸಣ್ಣಪುಟ್ಟ ಅಪಘಾತಗಳಾದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗುಂಡಿಗಳಿಂದಾಗಿ ಯಾರಾದರೂ ಜೀವ ಕಳೆದುಕೊಂಡು ಸಾರ್ವಜನಿಕರು ಸಿಡಿದೇಳಲಿ ಎಂದು ಕಾಯುತ್ತಿರಬೇಕು. ನಮ್ಮ ತೆರಿಗೆ ಹಣದಲ್ಲಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದಿದ್ದರೆ, ಪಾಲಿಕೆ ಇದ್ದರೆಷ್ಟು ಬಿಟ್ಟರೆಷ್ಟು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Post Comments (+)