ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ವರ್ಗಗಳಿಗ ಅಭಿವೃದ್ಧಿಯ ಬಜೆಟ್: ಮಹೇಶ ಟೆಂಗಿನಕಾಯಿ

Last Updated 19 ಫೆಬ್ರುವರಿ 2023, 7:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಮಂಡಿಸಿದ ಬಜೆಟ್, ಸರ್ವಸ್ಪರ್ಶಿಯಾಗಿದೆ. ಎಲ್ಲಾ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಯುವಜನರ ಏಳಿಗೆ ಮತ್ತು ಶಿಕ್ಷಣದ ದೂರದೃಷ್ಟಿ ಎದ್ದು ಕಾಣುತ್ತದೆ ಎಂದು ಬಿಜೆಪಿ‌ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಡಬಲ್‌ ಎಂಜಿನ್ ಸರ್ಕಾರದ ಎರಡೂ ಬಜೆಟ್ ಗಳು ಎಲ್ಲಾ ವಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಿವೆ. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿ ಬದ್ಧತೆ ಮೆರೆದಿದೆ. ವಿದ್ಯಾನಿಧಿ ಯೋಜನೆಯನ್ನು ನೇಕಾರರು, ಮೀನುಗಾರರು ಹಾಗೂ ಕ್ಯಾಬ್ ಚಾಲಕರಿಗೆ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ವಿದ್ಯಾ ಶಕ್ತಿ ಯೋಜನೆಯಿಂದ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗೃಹಿಣಿಯರಿಗೆ ಮಾಸಾಶನ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5 ಸಾವಿರ ಕೊಟ್ಟಿರುವುದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ರೈಲು ಮಾರ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರೈತ ಉತ್ಪನ್ನ ಯೋಜನೆ ಘೋಷಿಸಲಾಗಿದೆ ಎಂದು ಬಣ್ಣಿಸಿದರು.

ಸರ್ಕಾರದ ವಿರುದ್ಧ ಟೀಕಿಸುವ ವಿರೋಧ‌ ಪಕ್ಷಗಳು, ಸದನಕ್ಕೆ ಬಂದು ಚರ್ಚೆ ನಡೆಸದೆ ಪಲಾಯನ ಮಾಡುತ್ತಿವೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ತಳಬುಡವಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ತಮ್ಮ ಪಕ್ಷದ ಅಂತರಿಕ ಕಲಹವನ್ನು‌ ಮೊದಲು ಬಗೆಹರಿಸಲಿ. ನಂತರ ಸರ್ಕಾರದ ವಿರುದ್ಧ ಟೀಕಿಸಲಿ ಎಂದು ತಿರುಗೇಟು ನೀಡಿದರು.

ಶಾಸಕ ಜಗದೀಶ ಶೆಟ್ಟರ್ ಅವರು ಇರುವವರೆಗೆ ಸೆಂಟ್ರಲ್ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಬರುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಇನ್ನೂ ಹತ್ತು ಸಲ ಸ್ಪರ್ಧೆ ಮಾಡಿದರೂ ಗೆಲ್ಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಹಾಗೂ ವಕ್ತಾರ ರವಿ ನಾಯಕ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT