ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಗರಿ’ ಸೇವೆ ಉತ್ತಮಪಡಿಸಿ; ಸೌಲಭ್ಯ ಕಲ್ಪಿಸಿ

ಸತೀಶ ಬಿ.
Published 23 ನವೆಂಬರ್ 2023, 4:48 IST
Last Updated 23 ನವೆಂಬರ್ 2023, 4:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಅನುಷ್ಠಾನಗೊಂಡಿರುವ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯಿಂದ (ಬಿಆರ್‌ಟಿಎಸ್‌) ಹುಬ್ಬಳ್ಳಿ–ಧಾರವಾಡವಾಡ ನಡುವೆ ಪ್ರಯಾಣಕ್ಕೆ ಅನುಕೂಲವಾಗುತ್ತಿದ್ದರೂ, ಅನೇಕ ಸಮಸ್ಯೆಗಳು ಪ್ರಯಾಣಿಕರನ್ನು ಹೈರಾಣಾಗಿಸಿದೆ.

ಅವಳಿ ನಗರದ ನಡುವೆ ಚಿಗರಿ ಬಸ್‌ ಸಂಚಾರ ಆರಂಭವಾಗಿ ಐದು ವರ್ಷಗಳು ಕಳೆದಿವೆ. ಪ್ರತಿ ನಿತ್ಯ ಸರಾಸರಿ 90 ಸಾವಿರ ಜನ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಸೇವೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕು ಎಂಬುದು ಪ್ರಯಾಣಿಕರ ಒತ್ತಾಯ.

ಕಾರಿಡಾರ್‌, ನಿಲ್ದಾಣ ನಿರ್ಮಾಣ, ಸ್ವಚ್ಛತೆ ಮುಂತಾದ ವಿಷಯಗಳನ್ನು ಬಿಆರ್‌ಟಿಎಸ್ ನೋಡಿಕೊಳ್ಳುತ್ತಿದ್ದರೆ, ಬಸ್‌ಗಳ ನಿರ್ವಹಣೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಡುತ್ತಿದೆ. ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಎರಡೂ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತ್ವರಿತ ಸೇವೆ, ಸಮಯ ಉಳಿತಾಯದಂತ ಉತ್ತಮ ಅಂಶಗಳ ನಡೆವೆಯೂ ಅನೇಕ ಸಮಸ್ಯೆಗಳು ಪ್ರಯಾಣಿಕರನ್ನು ಬಾಧಿಸುತ್ತಿವೆ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವ ಅಗತ್ಯ ಇದೆ.

ಬಿಆರ್‌ಟಿಎಸ್‌ ಬಸ್ ಪಥದ ಎರಡೂ ಬದಿ ಕಬ್ಬಿಣದ ಗ್ರಿಲ್‌ ಅಳವಡಿಸಲಾಗಿದೆ. ಇವು ಕೆಲವೆಡೆ ಕಿತ್ತು ಹೋಗಿವೆ. ಕಾರಿಡಾರ್ ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಹಿಡಿಬೇಕು ಎನ್ನುತ್ತಾರೆ ಪ್ರಯಾಣಿಕರು.

‘ಅವೈಜ್ಞಾನಿಕವಾಗಿ ಈ ಯೋಜನೆ ರೂಪಿಸಲಾಗಿದೆ. ಯೋಜನೆಯ ಆರಂಭದಲ್ಲಿಯೇ ಶೌಚಾಲಯ, ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕಿತ್ತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸರಿಯಾಗಿ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ’ ಎಂಬುದು ಬಹುತೇಕ ಪ್ರಯಾಣಿಕರು ಆ್ರಕೋಶ ವ್ಯಕ್ತಪಡಿಸುತ್ತಾರೆ.

‘ಚಿಗರಿ ಸೇವೆ ಆರಂಭವಾದಾಗ ಹು–ಧಾ ನಡುವೆ ಪ್ರಯಾಣ ಅವಧಿ ಕಡಿಮೆಯಾಗುತ್ತದೆ. ಆರಾಮದಾಯಕ ಪ್ರಯಾಣ ಇರುತ್ತದೆ ಎಂದು ಉದ್ಯೋಗಸ್ಥರು ಖುಷಿಪಟ್ಟಿದ್ದರು. ಈಗ ಪ್ರಯಾಣ ಅವಧಿ ಕಡಿಮೆಯಾಗಿದೆ. ಆದರೆ, ಸೌಲಭ್ಯಗಳ ಕೊರತೆಯಿಂದ ಕಿರಿಕಿರಿ ಅನುಭವಿಸಬೇಕಾಗಿದೆ’ ಎಂದು ಧಾರವಾಡದ ಜಯಶ್ರೀ ಪಾಟೀಲ ಹೇಳಿದರು.

‘ಬಸ್‌ಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬುತ್ತಾರೆ. ಕಚೇರಿ, ಶಾಲಾ ಕಾಲೇಜುಗಳ ಅವಧಿಯಲ್ಲಿ ಸಮಸ್ಯೆ ಇನ್ನೂ ಹೆಚ್ಚುತ್ತದೆ’ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕು ಎಂಬುದು ಜಯಶ್ರೀ ಪಾಟೀಲ ಅವರ  ಒತ್ತಾಯ.

‘ಹೆಸರಿಗೆ ಮಾತ್ರ ಹವಾನಿಯಂತ್ರಿತ ವ್ಯವಸ್ಥೆ ಇದೆ. ಕೆಲವೊಮ್ಮೆ ಅದು ಕಾರ್ಯನಿರ್ವಹಿಸುವುದಿಲ್ಲ. ಬಸ್‌ಗಳ ಕಿಟಕಿಗಳು ತೆರೆಯಲು ಬರುವುದಿಲ್ಲ. ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಅವರು.

ಚಿಗರಿ ವೇಗಕ್ಕೆ ಬೀಳಲಿ ಕಡಿವಾಣ

ಚಿಗರಿ ಬಸ್‌ಗಳ ಶರವೇಗ ಒಂದೆಡೆಯಾದರೆ, ವೃತ್ತ, ಜಂಕ್ಷನ್‌ಗಳಲ್ಲಿ ಸರಿಯಾಗಿ ಸಂಚಾರ ನಿರ್ವಹಣೆ ಮಾಡದ ಕಾರಣಕ್ಕೆ ಅಪಘಾತಗಳಿಗೂ ಕಾರಣವಾಗುತ್ತಿದೆ.

‘ರಸ್ತೆ ಮಧ್ಯೆ ನಿಲ್ದಾಣ ನಿರ್ಮಿಸಿದ್ದೇ ತಪ್ಪು. ಚಿಗರಿ ಬಸ್‌ನಿಂದ ಇಳಿದ ವೃದ್ಧರು, ಮಕ್ಕಳು, ರೋಗಿಗಳು ರಸ್ತೆ ದಾಟಲು ಹರಸಾಹಸ ‍ಪಡಬೇಕಿದೆ. ಚಿಗರಿ ವೇಗಕ್ಕೆ ಕಡಿವಾಣ ಹಾಕುವ ಜತೆಗೆ ಪಾದಚಾರಿಗಳ ಅನುಕೂಲಕ್ಕಾಗಿ ಹೆಚ್ಚಿನ ಪಾದಚಾರಿ ಮೇಲ್ಸೇತುವೆ’ ನಿರ್ಮಿಸಬೇಕು ಎಂಬುದು ಪ‌್ರಯಾಣಿಕರ ಒತ್ತಾಯ.

ಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕು. ಬಸ್‌ ಹತ್ತುವಾಗ ಮತ್ತು ಇಳಿಯುವಾಗ ಪ್ರಯಾಣಿಕರ ಸುರಕ್ಷತೆಗೂ ಒತ್ತು ನೀಡಬೇಕು ಎಂದರು.

ಜಂಕ್ಷನ್‌ಗಳ ಅಭಿವೃದ್ಧಿಗೆ ಕ್ರಮ

ಬಿಆರ್‌ಟಿಎಸ್ ಕಾರಿಡಾರ್‌ನ ವಿವಿಧ ಜಂಕ್ಷನ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಆರ್‌ಟಿಎಸ್ ಪ್ರಧಾನ ವ್ಯವಸ್ಥಾಪಕ (ಸಿವಿಲ್‌) ರಮೇಶ ಗುಡರೆಡ್ಡಿ ಹೇಳಿದರು.

ಮಹಿಳಾ ವಿದ್ಯಾಪೀಠ, ರಾಯಾಪುರ, ಎಪಿಎಂಸಿ ಸೇರಿದಂತೆ 28 ಕಡೆ ಜಂಕ್ಷನ್‌ಗಳಿವೆ. ಪಾದಚಾರಿ ಮಾರ್ಗದಲ್ಲಿ ರೇಲಿಂಗ್ ಅಳವಡಿಸಲಾಗುತ್ತಿದೆ. ಇದರಿಂದ ಎಲ್ಲೆಂದರಲ್ಲಿ ರಸ್ತೆ ದಾಟುವುದು ತಪ್ಪುತ್ತದೆ. ಜಂಕ್ಷನ್‌ಗಳ ಅಭಿವೃದ್ಧಿಯಿಂದಾಗಿ ಸುರಕ್ಷಿತವಾಗಿ ರಸ್ತೆ ದಾಟಲು ಅನುಕೂಲವಾಗುತ್ತದೆ ಎಂದರು.

ಎಸಿ ದುರಸ್ತಿಗೆ ಕ್ರಮ

‘ಚಿಗರಿ ಬಸ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ (ಎಸಿ) ಹಾಳಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಲ್ಲ ಬಸ್‌ಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಸಕ ಭರತ್‌ ಎಸ್ ಹೇಳಿದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ‘ಬಸ್‌ಗಳಲ್ಲಿ ನಿಲ್ದಾಣಗಳ ಮಾಹಿತಿ ನೀಡುವ ಸ್ಪೀಕರ್‌ ಹಾಳಾಗಿರುವ ಕುರಿತು ದುರಸ್ತಿ ಮಾಡುವಂತೆ ಬಿಆರ್‌ಟಿಎಸ್ ಗಮನಕ್ಕೆ ತರಲಾಗಿದೆ. ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸುವಂತೆ ಚಾಲಕರು ಸಿಬ್ಬಂದಿಗೆ ಸೂಚಿಸಲಾಗಿದ್ದು ಈ ಬಗ್ಗೆ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು’ ಎಂದರು. ‘ಸರ್ಕಾರ ಎರಡು ಸಾವಿರ ಚಾಲಕ/ನಿರ್ವಾಹಕರ ನೇಮಕಕ್ಕೆ ಅವಕಾಶ ನೀಡಿದೆ. ಇದರಿಂದ ಚಾಲಕರ ಕೊರತೆ ನೀಗಲಿದೆ. ಬಿಆರ್‌ಟಿಎಸ್ ಫೀಡರ್ ಸೇವೆಗೂ ಬಸ್‌ ನೀಡುವಂತೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಯಾಣಿಕರಿಗೆ ತೊಂದರೆ; ನಿರ್ಲಕ್ಷ್ಯ ಬೇಡ

ಬಿಆರ್‌ಟಿಎಸ್ ಯೋಜನೆಯ ಆರಂಭದಲ್ಲಿ ತುಂಬಾ ಹುಮ್ಮಸ್ಸು ಇತ್ತು. ಈಗ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಯೋಜನೆ ಮುಗಿದಿದೆಯೇ ಎಷ್ಟು ಕಾಮಗಾರಿಗಳು ಬಾಕಿ ಇವೆ ಎಂಬುದನ್ನು ಈವರೆಗೂ ಸ್ಪಷ್ಟಪಡಿಸಿಲ್ಲ ಎಂದು ಮಾಜಿ ಮೇಯರ್‌ ಪಾಂಡುರಂಗ ಪಾಟೀಲ ಹೇಳಿದರು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ಬಂದ ದೂರುಗಳನ್ನು ಪರಿಶೀಲಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು. ಮೇಯರ್‌ ಅವರನ್ನು ಸಂಸ್ಥೆಯ ಸದಸ್ಯರನ್ನಾಗಿ ನೇಮಿಸಿ ಸಾರ್ವಜನಿಕರ ಅಹವಾಲುಗಳನ್ನು ನಿಯಮಿತವಾಗಿ ಆಲಿಸಿ ಪರಿಹರಿಸುವ ಕೆಲಸವಾಗಬೇಕು ಎಂದು ಹೇಳಿದರು.

ಬಾಕಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ

‘ನವಲೂರು ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದ್ದು ಬೈರಿದೇವರಕೊಪ್ಪದ ಬಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಭಜಂತ್ರಿ ಹೇಳಿದರು. ‘ಬಿಆರ್‌ಟಿಎಸ್ ಬಸ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯ ಹಾಳಾಗಿರುವುದು ನಿಲ್ದಾಣಗಳಲ್ಲಿ ಟಿಕೆಟ್ ವಿತರಕರು ಚಾಲಕರ ವರ್ತನೆ ಬಗ್ಗೆಯೂ ದೂರುಗಳು ಬಂದಿವೆ. ಇವುಗಳನ್ನು ಹು–ಧಾ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಗಮನಕ್ಕೆ ತರಲಾಗಿದೆ‘ ಎಂದು ತಿಳಿಸಿದರು. ನಿಲ್ದಾಣಗಳಲ್ಲಿ ಸ್ವಚ್ಛತೆ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಆರ್‌ಟಿಎಸ್ ಪಕ್ಕದ ಸರ್ವಿಸ್‌ ರಸ್ತೆಗಳಲ್ಲಿ ಸದಾ ವಾಹನ ದಟ್ಟಣೆ ಇರುತ್ತದ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ನಿವಾರಿಸಬೇಕು.
ಗೀತಾ ಶಾಸ್ತ್ರಿನಗರ, ಧಾರವಾಡ
ಬಸ್‌ನ ಸ್ವಯಂಚಾಲಿತ ಬಾಗಿಲುಗಳು ಕೆಲವು ಸಂದರ್ಭಗಳಲ್ಲಿ ತೆರೆಯುವುದಿಲ್ಲ. ನಿಲ್ದಾಣಗಳಲ್ಲಿಯೂ ಇದೇ ಸ್ಥಿತಿ ಇದೆ. ಅವ್ಯವಸ್ಥೆ ಸರಿಪಡಿಸಬೇಕು.
ಜಯಶ್ರೀ ಎಸ್. ಪಾಟೀಲ, ಧಾರವಾಡ
ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕುಡಿಯಲು ನೀರಿನ ಕಲ್ಪಿಸಬೇಕು.
ಸಂಜಯಕುಮಾರ ಬಿರಾದಾರ, ಧಾರವಾಡ
ಟಿಕೆಟ್ ಕೌಂಟರ್‌ಗಳಲ್ಲಿ ದಟ್ಟಣೆ ತಪ್ಪಿಸಲು ಕ್ರಮ ಅಗತ್ಯ. ಬಸ್‌ಗಳಲ್ಲಿ ಮೀಸಲು ಸೀಟ್‌ಗಳು ಅವರವರಿಗೆ ದೊರೆಯಬೇಕು. ನಿಲ್ದಾಣದಲ್ಲಿ ಪ್ರಯಾಣಿಕರು ಇದ್ದಾಗಲೂ ಬಸ್ ನಿಲ್ಲಿಸದೆ ಹೋಗುವ ಪ್ರವೃತ್ತಿ ತಪ್ಪಬೇಕು.
ಲಕ್ಷ್ಮಿ ಜೋಶಿ, ಗಾಂಧಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT