ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಟ್ರಿಪ್‌ ಹೆಚ್ಚಳದಿಂದ ಒತ್ತಡದಲ್ಲಿ ‘ಚಿಗರಿ’ ಬಸ್ ಚಾಲಕರು

Published 22 ನವೆಂಬರ್ 2023, 4:40 IST
Last Updated 22 ನವೆಂಬರ್ 2023, 4:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚಿನ ಬಸ್‌ಗಳಿಲ್ಲ. ಕೆಲ ಬಸ್‌ಗಳು ದುರಸ್ತಿಗೆ ಬಂದಿವೆ. ಇದರಿಂದ ಟ್ರಿಪ್‌ಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯ ಒತ್ತಡದಲ್ಲಿ ಕೆಲಸ ಮಾಡಬೇಕಿದೆ’.

–ಇದು ಹುಬ್ಬಳ್ಳಿ–ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್‌ಗಳ ಬಹುತೇಕ ಚಾಲಕರ ಅಳಲು.

‘ಮಧ್ಯಾಹ್ನ 1 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತೇವೆ. ರಾತ್ರಿ ಕೊನೆಯ ಟ್ರಿಪ್ ಮುಗಿಸಿ, ಬಸ್‌ನ್ನು ಡಿಪೊದಲ್ಲಿ ಬಿಟ್ಟು ಮನೆಗೆ ಹೋಗುವಷ್ಟರಲ್ಲಿ ರಾತ್ರಿ 11.30 ಆಗುತ್ತದೆ. ಮತ್ತೆ ಬೆಳಿಗ್ಗೆ 6ಕ್ಕೆ ಮೊದಲ ಟ್ರಿಪ್ ಆರಂಭಿಸಬೇಕು. ಇದರಿಂದ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ’ ಎನ್ನುತ್ತಾರೆ ಚಾಲಕರು.

‘ಹುಬ್ಬಳ್ಳಿಯಿಂದ ಧಾರವಾಡಕ್ಕೆ ಕಡಿಮೆ ಅವಧಿಯಲ್ಲಿ ಹೋಗಬೇಕು ಎಂಬ ಸೂಚನೆ ಇದೆ. ಸಿಗ್ನಲ್‌, ಎಲ್ಲ ನಿಲ್ದಾಗಳಲ್ಲಿ ನಿಲುಗಡೆ ಮಾಡುವುದರಿಂದ ಮತ್ತು ಹೆಚ್ಚಿನ ಪ್ರಯಾಣಿಕರಿದ್ದಾಗ ಇದು ಸಾಧ್ಯವಾಗುವುದಿಲ್ಲ. ಇದರಿಂದ ಒತ್ತಡ ಹೆಚ್ಚಾಗುತ್ತದೆ’ ಎಂದು ಚಾಲಕರೊಬ್ಬರು ತಿಳಿಸಿದರು.

‘ಒಟ್ಟು ನೂರು ಚಿಗರಿ ಬಸ್‌ಗಳಿದ್ದು, ಅವುಗಳಲ್ಲಿ ಹಲವು ಬಸ್‌ಗಳು ದುರಸ್ತಿಗೆ ಆಗಬೇಕಿವೆ. ಸರಿಯಾದ ನಿರ್ವಹಣೆ ಇಲ್ಲ. ಸೈಡ್‌ ಮಿರರ್‌ಗಳು ಹಾಳಾಗಿರುವ ಕಾರಣ ಪ್ರಯಾಣಿಕರು ಹತ್ತುವುದು, ಇಳಿಯುವುದು ಕಾಣುವುದಿಲ್ಲ. ಹೆಡ್‌ಲೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅವರು ಹೇಳಿದರು.

‘ಒಂದು ಬಸ್‌ನಲ್ಲಿ ಗರಿಷ್ಠ 37 ಪ್ರಯಾಣಿಕರು ಪ್ರಯಾಣಿಸಬಹುದು. ಕೆಲ ಸಂದರ್ಭಗಳಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಇರುತ್ತಾರೆ. ಹಲವು ಬಸ್‌ಗಳ ಏರ್ ಸಸ್ಪೆನ್ಷನ್‌ ವ್ಯವಸ್ಥೆ ಹಾಳಾಗಿವೆ.  ಸರಿಯಾದ ಸಮಯಕ್ಕೆ ಬ್ರೇಕ್ ಲೈನರ್ ಬದಲಾಯಿಸುವುದಿಲ್ಲ. ಐದು ವರ್ಷಗಳಿಂದ ಬಸ್‌ಗಳನ್ನು ಬದಲಾಯಿಸಿಲ್ಲ’ ಎಂದರು.

ಹಾಳಾದ ಸ್ಪೀಕರ್‌: ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲು ಬಸ್‌ನಲ್ಲಿ ಅಳವಡಿಸಲಾಗಿದ್ದ ಸ್ಪೀಕರ್‌ ಹಾಳಾಗಿವೆ. ಬೇರೆ ಕಡೆಯಿಂದ ಬರುವ ಪ್ರಯಾಣಿಕರಿಗೆ ಯಾವ ನಿಲ್ದಾಣಗಲ್ಲಿ ಇಳಿಯಬೇಕು ಎಂಬುದು ಗೊತ್ತಾಗುವುದಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡರು. 

ಸಮರ್ಪಕ ತರಬೇತಿ ಇಲ್ಲ: ಚಿಗರಿ ಬಸ್‌ಗಳ ಚಾಲನೆ, ಅದರಲ್ಲಿನ ವ್ಯವಸ್ಥೆ ಬಗ್ಗೆ ಯೋಜನೆಯ ಆರಂಭದಲ್ಲಿ 250 ಚಾಲಕರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು. ಈಗ ಹೊಸ ಚಾಲಕರಿಗೆ ಹಿಂದೆ ತರಬೇತಿ ಪಡೆದ ಹಿರಿಯ ಚಾಲಕರಿಂದ ತರಬೇತಿ ಕೊಡಿಸಲಾಗುತ್ತಿದೆ. ಹೀಗಾಗಿ ಸಮರ್ಪಕ ತರಬೇತಿ ಸಿಗುತ್ತಿಲ್ಲ’ ಎಂದು ಚಾಲಕರು ತಿಳಿಸಿದರು.

ಬೇರೆ ವಾಹನಗಳ ಸಂಚಾರ: ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಚಿಗರಿ ಬಸ್‌ಗಳು, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ಗಳು ಮಾತ್ರ ಸಂಚರಿಸಬೇಕು. ಆದರೆ, ಸರ್ಕಾರಿ ಅಧಿಕಾರಿಗಳ ವಾಹನಗಳು, ಇತರ ವಾಹನಗಳು ಸಂಚರಿಸುತ್ತವೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ.

ಅಪಘಾತವಾದಾಗ ಬಸ್‌ ಅನ್ನು ಠಾಣೆಗೆ ತೆಗೆದುಕೊಂಡು ಹೋಗುತ್ತಾರೆ. ಬಸ್‌ ಠಾಣೆಯಿಂದ ಹೊರಬರುವುದು ತಡವಾದರೆ ಚಾಲಕರಿಗೆ ದಿನಕ್ಕೆ ₹20 ಸಾವಿರ ದಂಡ ವಿಧಿಸಲಾಗುತ್ತದೆ. ಇದರಿಂದ ತುಂಬಾ ತೊಂದರೆಯಾಗುತ್ತದೆ ಎನ್ನುತ್ತಾರೆ ಚಾಲಕರು.

ಚಿಗರಿ ಬಸ್‌ನ ಹಿಂಭಾಗದ ಗಾಜು ಒಡೆದಿರುವುದು
ಚಿಗರಿ ಬಸ್‌ನ ಹಿಂಭಾಗದ ಗಾಜು ಒಡೆದಿರುವುದು
ಬಸ್‌ಗಳಲ್ಲಿ ನಿಲ್ದಾಣಗಳ ಮಾಹಿತಿ ನೀಡುವ ಸ್ಪೀಕರ್‌ ಹಾಳಾಗಿರುವುದರಿಂದ ಪ್ರಯಾಣಿಕರು ಎಷ್ಟೋ ಸಂದರ್ಭಗಳಲ್ಲಿ ಬೇರೆ ನಿಲ್ದಾಣಗಳಲ್ಲಿ ಇಳಿದು ತೊಂದರೆ ಅನುಭವಿಸಿದ್ದಾರೆ. ಇದನ್ನು ತಪ್ಪಿಸಬೇಕು –
ಪುಷ್ಪಾ ಪವಾರ, ಹುಬ್ಬಳ್ಳಿ
ಒಮ್ಮೆಲೆ 4-6 ಬಸ್‌ಗಳು ಬರುತ್ತವೆ. ನಂತರ ತುಂಬಾ ಹೊತ್ತು ಬಸ್‌ಗಳು ಬರುವುದೇ ಇಲ್ಲ. ಮೇಲಿಂದ ಮೇಲೆ ಬಸ್‌ಗಳು ಕೆಡುತ್ತಿವೆ. ಕೌಂಟರ್‌ಗಳಲ್ಲಿ ಮಹಿಳೆ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು
– ಪೂಜಾ ದೇಶಪಾಂಡೆ, ಧಾರವಾಡ

ಕೆಟ್ಟು ನಿಲ್ಲುವ ಬಸ್‌ಗಳು!

ಚಿಗರಿ ಬಸ್‌ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಸಾಯಿಬಾಬಾ ಮಂದಿರದ ಬಳಿ ಬಸ್‌ ಕೆಟ್ಟು ಮೂರು ಗಂಟೆ ರಸ್ತೆ ಮಧ್ಯೆ ನಿಂತಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ‘ಮಾರ್ಗ ಮಧ್ಯೆ ಬಸ್‌ಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಅಂತಹ ಸಂದರ್ಭದಲ್ಲಿ ಕಚೇರಿ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಿಂದೆ ಬರುವ ಬಸ್‌ಗಳು ಪ್ರಯಾಣಿಕರನ್ನು ಕರೆದೊಯ್ಯುವುದಿಲ್ಲ. ಸಂಬಂಧಪಟ್ಟವರು ಬಸ್‌ಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು’ ಎಂಬುದು ಪ್ರಯಾಣಿಕರಾದ ನಾಗರತ್ನಾ ಅವರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT