ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗರಿ ಬಸ್‌ಗಳಲ್ಲಿ ಕಾರ್ಯನಿರ್ವಹಿಸದ ಎಸಿ; ಪ್ರಯಾಣಿಕರ ಪರದಾಟ

ಕಚೇರಿ ಅವಧಿಯಲ್ಲಿ ಹೆಚ್ಚಿನ ಬಸ್‌ ಓಡಿಸಲು ಬೇಡಿಕೆ
Published 17 ನವೆಂಬರ್ 2023, 4:28 IST
Last Updated 17 ನವೆಂಬರ್ 2023, 4:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಸಿಲಿನ ತಾಪಮಾನದಲ್ಲಿ ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಮಧ್ಯೆ ಪ್ರಯಾಣಿಸಲು ಹಿಂಜರಿಕೆಯೇ? ಹಿಂಜರಿಕೆ ಬೇಡ... ಬಿಆರ್‌ಟಿಎಸ್‌ನ ಚಿಗರಿ ಎಸಿ ಬಸ್‌ಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಿ’...ಚಿಗರಿ ಬಸ್‌ಗಳಲ್ಲಿ ಇರುವ ಹವಾನಿಯಂತ್ರಿತ ವ್ಯವಸ್ಥೆ (ಎಸಿ) ಬಗ್ಗೆ ಬಿಆರ್‌ಟಿಎಸ್‌ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ನ ಸಾಲುಗಳು ಇವು.

85 ಚಿಗರಿ ಬಸ್‌ಗಳು ಅವಳಿನಗರದ ಮಧ್ಯೆ ನಿತ್ಯ 950 ಟ್ರಿಪ್ ಸಂಚಸುತ್ತವೆ. ಆದರೆ, ಬಸ್‌ಗಳಲ್ಲಿ ಎಸಿ ಕಾರ್ಯನಿರ್ವಹಿಸದೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ.

ಬಸ್‌ಗಳಲ್ಲಿ ಎಸಿ ವ್ಯವಸ್ಥೆ ಇರುವ ಕಾರಣ ಕಿಟಕಿಗಳನ್ನು ತೆರೆಯುವ ಸೌಲಭ್ಯವಿಲ್ಲ. ಕಿಟಕಿ ಸಂಪೂರ್ಣ ಗಾಜುಮಯ. ಒಳಗಡೆ ಎಸಿ ಕಾರ್ಯನಿರ್ವಹಿಸುವುದಿಲ್ಲ. ಸೆಖೆಯಿಂದ ತೊಂದರೆ ಅನುಭವಿಸಬೇಕು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಸಮಸ್ಯೆ ಇನ್ನೂ ಹೆಚ್ಚುತ್ತದೆ. ‘ಕೆಲವೊಮ್ಮೆ ಚಾಲಕರೇ ಎಸಿ ಹಾಕುವುದಿಲ್ಲ. ನಾವು ಹೇಳಿದ ನಂತರ ಹಾಕುತ್ತಾರೆ’ ಎಂದು ಪ್ರಯಾಣಿಕರು ದೂರುತ್ತಾರೆ

ಸೀಟ್‌ ಸಿಗದೆ ಪರದಾಟ: ಉದ್ಯೋಗಸ್ಥರು ‘100’ ಸಂಖ್ಯೆಯ ಬಸ್‌ನಲ್ಲಿ ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ 9 ರಿಂದ 11 ರವರೆಗಿನ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಬಿಆರ್‌ಟಿಎಸ್‌ ಸಂಸ್ಥೆಯ ಪ್ರಕಾರ, ಮೂರು ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತದೆ. ಆದರೆ, ಅಷ್ಟು ಸಂಖ್ಯೆಯ ಬಸ್‌ಗಳು ಈ ಅವಧಿಯಲ್ಲಿ ಕಾಣಿಸುವುದಿಲ್ಲ ಎಂಬುದು ಪ್ರಯಾಣಿಕರ ದೂರು.

ನಿಂತುಕೊಂಡೇ ಪ್ರಯಾಣ; ‘ಪ್ರತಿ ದಿನ ಹುಬ್ಬಳ್ಳಿ–ಧಾರವಾಡಕ್ಕೆ ಮಧ್ಯೆ ಸಂಚರಿಸುತ್ತೇನೆ. ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬುವುದರಿಂದ ಪ್ರತಿ ದಿನ ನಿಂತುಕೊಂಡೇ ಪ್ರಯಾಣಿಸಬೇಕು. ವಾಪಸ್ ಬರುವಾಗಲೂ ಸೀಟು ಸಿಗುವುದಿಲ್ಲ. ವಾರದಲ್ಲಿ ಒಂದು ದಿನ ಸೀಟು ಸಿಕ್ಕರೆ ಹೆಚ್ಚು’ ಎಂದು ಸುಜಾತಾ ಪಾಟೀಲ ತಿಳಿಸಿದರು.

‘ಎಸ್‌ ಆಕಾರದ ಕಬ್ಬಿಣದ ರಾಡ್‌ ಅನ್ನು ಹ್ಯಾಂಡ್ಲರ್‌ಗೆ ಸಿಕ್ಕಿಸಿ ಅದರಲ್ಲಿ ಬ್ಯಾಗ್‌ಗಳನ್ನು ತೂಗು ಹಾಕುತ್ತೇವೆ. ಕೆಲವೊಮ್ಮೆ ಹ್ಯಾಂಡ್ಲರ್‌ಗಳೇ ಕಿತ್ತು ಬರುತ್ತವೆ’ ಎಂದು ಅವರು ಹೇಳಿದರು.

‘ಕಚೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರುತ್ತದೆ. ನಿಗದಿತ ಸಮಯಕ್ಕೆ ಬಸ್‌ ಬಾರದಿದ್ದರೆ, ಸಕಾಲಕ್ಕೆ  ಕಚೇರಿಗೆ ಹೋಗಲು ಆಗುವುದಿಲ್ಲ. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಬೆಳಗಿನ ಅವಧಿಯಲ್ಲಿ ಹೆಚ್ಚಿನ ಬಸ್‌ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಬ್ಯಾಂಕ್ ಉದ್ಯೋಗಿ ನರಸಿಂಹ ಜೋಶಿ ತಿಳಿಸಿದರು.

ಸರಿಯಾದ ಪರಿಶೀಲನೆ ಇಲ್ಲ: ‘100’ ಸಂಖ್ಯೆಯ ಬಸ್‌ಗಳಲ್ಲಿ ಅವಕಾಶ ಇರದಿದ್ದರೂ ವಿದ್ಯಾರ್ಥಿಗಳು ಓಡಾಡುತ್ತಾರೆ. ಇದರಿಂದ ನಮ್ಮಂತಹ ಉದ್ಯೋಗಸ್ಥರಿಗೆ ತೊಂದರೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಬೇಕು. ಇಲ್ಲವೇ ಬೇರೆ ಬಸ್‌ಗಳಲ್ಲಿ ಪ್ರಯಾಣಿಸುವಂತೆ ಹೇಳಬೇಕು’ ಎಂದರು.

‘ಟಿಕೆಟ್‌ ಪಡೆದು ಬಸ್‌ ಹತ್ತಲು ಪ್ರಯಾಣಿಕರು ಬರುತ್ತಿರುವುದು ಕಂಡರೂ ಚಾಲಕರು ಬಸ್‌ ನಿಲ್ಲಿಸುವುದಿಲ್ಲ.  ಮುಂದೆ ಸಿಗ್ನಲ್‌ಗಳಲ್ಲಿ ನಿಲ್ಲಿಸುತ್ತಾರೆ. ಪ್ರಯಾಣಿಕರ ಬಗ್ಗೆ ಕಾಳಜಿ ತೋರುವುದಿಲ್ಲ’ ಎಂದರು.

ಬಿಆರ್‌ಟಿಎಸ್‌ನ ಚಿಗರಿ ಬಸ್‌ನಲ್ಲಿ ಹ್ಯಾಂಡ್ಲರ್‌ಗಳು ಕಿತ್ತು ಹೋಗಿದ್ದು ಪ್ರಯಾಣಿಕರು ಕಬ್ಬಿಣದ ರಾಡ್ ಹಿಡಿದು ನಿಂತಿರುವುದು
–ಪ್ರಜಾವಾಣಿ ಚಿತ್ರಗಳು/ಗೋವಿಂದರಾಜ ಜವಳಿ
ಬಿಆರ್‌ಟಿಎಸ್‌ನ ಚಿಗರಿ ಬಸ್‌ನಲ್ಲಿ ಹ್ಯಾಂಡ್ಲರ್‌ಗಳು ಕಿತ್ತು ಹೋಗಿದ್ದು ಪ್ರಯಾಣಿಕರು ಕಬ್ಬಿಣದ ರಾಡ್ ಹಿಡಿದು ನಿಂತಿರುವುದು –ಪ್ರಜಾವಾಣಿ ಚಿತ್ರಗಳು/ಗೋವಿಂದರಾಜ ಜವಳಿ

ಕೆಲವೊಮ್ಮೆ ಬಸ್‌ನ ಬಾಗಿಲುಗಳು ತೆರೆಯುವುದಿಲ್ಲ. ಇನ್ನೂ ಕೆಲ ಸಂದರ್ಭದಲ್ಲಿ ಪ್ರಯಾಣಿಕರು ಹತ್ತುವ ಮುನ್ನವೇ ಬಾಗಿಲು ಮುಚ್ಚುತ್ತವೆ. ಇದರಿಂದ ಪ್ರಯಾಣಿಕರು ಗಾಯಗೊಂಡ ಘಟನೆಗಳು ನಡೆದಿವೆ

-ಸೂರಜ್‌ ಅವರಾದಿ, ಪ್ರಯಾಣಿಕ

ಬೆಳಗಿನ ಅವಧಿಯಲ್ಲಿ ಹೆಚ್ಚಿನ ಬಸ್‌ಗಳು ಸಂಚರಿಸುವುದಿಲ್ಲ. ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಈ ಅವಧಿಯಲ್ಲಿ ಹೆಚ್ಚಿನ ಬಸ್‌ ಓಡಿಸಬೇಕು

-ವಿ.ನಕಾತಿ, ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT