ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಪೂರ್ಣಗೊಳಿಸದ ಗುತ್ತಿಗೆದಾರನಿಗೆ ದಂಡ

Last Updated 6 ಮಾರ್ಚ್ 2023, 16:46 IST
ಅಕ್ಷರ ಗಾತ್ರ

ಧಾರವಾಡ: ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ ಮತ್ತು ಒಪ್ಪಂದದಂತೆ ಮನೆಯನ್ನು ಪೂರ್ಣಗೊಳಿಸದ ಖಾನ್ ಸಿವಿಲ್ ಕನ್ಸಲ್ಟೆನ್ಸಿಯ ವಾಸಿಮ್ ಖಾನ್ ಪಠಾಣ್ ಎಂಬುವವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.

‘2020ರಲ್ಲಿ ಖಾನ್ ಸಿವಿಲ್ ಕನ್ಸಲ್ಟೆನ್ಸಿ ಅವರೊಂದಿಗೆ ಮನೆ ನಿರ್ಮಾಣ ಕುರಿತಂತೆ ಪ್ರತಿ ಚದರ ಅಡಿಗೆ ₹1,800ರಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರರಿಗೆ ₹14.87 ಲಕ್ಷ ನೀಡಲಾಗಿತ್ತು. ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಕಟ್ಟಡ ಸಾಮಗ್ರಿಗಳ ಬಳಕೆ ಮಾಡಲಾಗಿದೆ. ಜತೆಗೆ, ಕಾಮಗಾರಿಯನ್ನು ಗುತ್ತಿಗೆದಾರ ಅರ್ಧದಲ್ಲೇ ಬಿಟ್ಟು ಹೋಗಿದ್ದರು. ಕಳಪೆ ಕಾಮಗಾರಿಯಿಂದ 7ರಿಂದ 8 ಕಡೆ ಮನೆಯ ಸೂರು ಸೋರುತ್ತಿದೆ. ಬಳಸಿದ್ದ ಇಟ್ಟಿಗೆಗಳು ಕರಗಿವೆ. ಇದರಿಂದ ಆರ್ಥಿಕ ನಷ್ಟ, ಮಾನಸಿಕ ತೊಂದರೆಯಾಗಿದೆ’ ಎಂದು ಅಳ್ನಾವರದ ರೇಣುಕಾ ಸುಣಗಾರ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಗುತ್ತಿಗೆದಾರರು ಆಯೋಗದ ಮುಂದೆ ಹಾಜರಾಗಿ, ‘ಕಟ್ಟಡದಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿತ್ತು. ದೂರುದಾರರು ಇನ್ನೂ ₹12ಲಕ್ಷ ಬಾಕಿ ಕೊಡುವುದು ಇದೆ. ಜತೆಗೆ ಯಾವುದೇ ರೀತಿಯ ಸೇವಾ ನ್ಯೂನತೆ ಆಗಿಲ್ಲ. ಹೀಗಾಗಿ ಪ್ರಕರಣವನ್ನು ವಜಾಗೊಳಿಸಬೇಕು’ ಎಂದು ಕೋರಿದ್ದರು.

ವಾದ ಮತ್ತು ಪ್ರತಿವಾದವನ್ನು ಆಲಿಸಿದ ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮತ್ತು ಪ್ರಭು ಸಿ. ಹಿರೇಮಠ ಅವರು, ಪ್ರಕರಣದಲ್ಲಿ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟರು.

ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಲಾಗಿತ್ತೇ ಎಂಬುದನ್ನು ತಿಳಿಯಲು ಸ್ಥಳೀಯ ವಕೀಲರನ್ನು ಕೋರ್ಟ್ ಕಮಿಷನರ್ ಆಗಿ ನೇಮಿಸಲಾಗಿತ್ತು. ಇಬ್ಬರ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ ಮಾಡಿ, ಇವರು ಆಯೋಗಕ್ಕೆ ವರದಿ ಸಲ್ಲಿಸಿದ್ದರು.

ವರದಿ ಪರಿಗಣಿಸಿದ ಆಯೋಗವು, ‘ಗುತ್ತಿಗೆದಾರರಿಗೆ ದೂರುದಾರರು ₹14.87ಲಕ್ಷವನ್ನು ಸಂದಾಯ ಮಾಡಿದ್ದರೂ, ಕಳಪೆ ಕಾಮಗಾರಿ ಮಾಡಿ ಕೆಲಸವನ್ನು ಅಪೂರ್ಣಗೊಳಿಸಿದ್ದರಿಂದ ಸೇವಾ ನ್ಯೂನತೆ ಆಗಿದೆ. ಹೀಗಾಗಿ ದೂರುದಾರರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಹಾಗೂ ಪ್ರಕರಣ ವೆಚ್ಚ ಸೇರಿ ₹7.50ಲಕ್ಷವನ್ನು ತಿಂಗಳ ಒಳಗಾಗಿ ನೀಡಬೇಕು. ನಿಗದಿತ ದಿನಾಂಕದಲ್ಲಿ ಹಣ ನೀಡದಿದ್ದರೆ ಅದಕ್ಕೆ ಶೇ 8ರಂತೆ ಬಡ್ಡಿ ಸೇರಿಸಿ ಕೊಡಬೇಕು’ ಎಂದು ಆಯೋಗ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT