ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ: ಕೆಎಎಸ್ ಅಧಿಕಾರಿ ಬಂಧನ

Last Updated 8 ಜುಲೈ 2021, 14:20 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಎಪಿಎಂಸಿ ಕಾರ್ಯದರ್ಶಿಯಾಗಿರುವ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಗುರುವಾರ ನಸುಕಿನಲ್ಲಿ ಗದಗದಲ್ಲಿರುವ ಅವರ ನಿವಾಸದಲ್ಲಿ ನ್ಯಾಮಗೌಡ ಅವರನ್ನು ವಶಕ್ಕೆ ಪಡೆದು, ಇಲ್ಲಿನ ಉಪನಗರ ಠಾಣೆಗೆ ಕರೆತಂದರು. ನಂತರ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮತ್ತು ಕೋವಿಡ್ ಪರೀಕ್ಷೆ ನಡೆಸಿ, ಪುನಃ ಠಾಣೆಗೆ ಕರೆತಂದರು.

ಸೋಮು ನ್ಯಾಮಗೌಡ ಅವರು ಬ್ಯಾಡಗಿ ಹಾಗೂ ತಿಪಟೂರು ಎಪಿಎಂಸಿ ಪ್ರಭಾರ ಕಾರ್ಯದರ್ಶಿಯೂ ಆಗಿದ್ದಾರೆ.

ಇದೇ ಪ್ರಕರಣದಲ್ಲಿ ಸದ್ಯ ಬಂಧನದಲ್ಲಿರುವ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರು ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಅವಧಿಯಲ್ಲಿ ಸೋಮು ಆಪ್ತ ಕಾರ್ಯದರ್ಶಿಯಾಗಿದ್ದರು. ಕೊಲೆ ನಡೆದ ಸಂದರ್ಭದಲ್ಲಿ ವಿನಯ ಕುಲಕರ್ಣಿ ದೆಹಲಿ ಪ್ರಯಾಣದ ಟಿಕೆಟ್‌ ಖರೀದಿ ಹಾಗೂ ಕೊಲೆಗೆ ಪರೋಕ್ಷವಾಗಿ ನೆರವಾಗಿರುವ ಆಪಾದನೆ ಮೇಲೆ ಇವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಕಾಕತಾಳೀಯ ಎಂಬಂತೆ, ವಿನಯ ಕುಲಕರ್ಣಿ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಅವರ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೂ ಗುರುವಾರವೇ ದಿನ ನಿಗದಿಯಾಗಿತ್ತು. ಅದೇ ದಿನ ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿಯಾಗಿ ಇವರ ಬಂಧನವಾಗಿದೆ.

ಇದಕ್ಕೂ ಮೊದಲು 2020ರ ಡಿ.14ರಂದು ಇಲ್ಲಿನ 4ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಿನಯ ಕುಲಕರ್ಣಿ ಅವರ ಸೋದರಮಾವ ಚಂದ್ರಶೇಖರ ಇಂಡಿ ಬಂಧನವಾಗಿತ್ತು. ಈ ಇಬ್ಬರು ಈಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.

ಈ ಹಿಂದೆಯೂ ಸೋಮು ಅವರನ್ನು ಸಿಬಿಐ ಅಧಿಕಾರಿಗಳು ಹಲವು ಬಾರಿ ವಿಚಾರಣೆ ನಡೆಸಿದ್ದರೂ ಬಂಧಿಸಿರಲಿಲ್ಲ. ಅವರ ಬಂಧನದ ಜತೆಯಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹಾಗೂ ಕೊಲೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನೂ ಠಾಣೆಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT