ಸೋಮವಾರ, ಮಾರ್ಚ್ 8, 2021
22 °C

22 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಳ್ಳಾಡಿಯ ಉದಯ ಬಂಧಿತ ಆರೋಪಿ.

1997ರಲ್ಲಿ ನವನಗರ ಬಳಿಯ ಹೋಟೆಲ್‌ನಲ್ಲಿ ನಡೆದ ಗಲಾಟೆಯಲ್ಲಿ ಆರೋಪಿ ಹಾಗೂ ಇನ್ನಿಬ್ಬರು ಪರ್ವೀನ್ ಮಕಾಂದಾರ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಆಗ ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾನಗರ ಪೊಲೀಸರು, ಇಬ್ಬರನ್ನು ಬಂಧಿಸಿದ್ದರು. ನವನಗರದಲ್ಲಿ ಪೊಲೀಸ್ ಠಾಣೆ ಸ್ಥಾಪನೆಯಾದಾಗ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ನವನಗರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಸೂರಿನ್ ತಿಳಿಸಿದರು.

ನಂತರ, ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಸದ್ಯ ಅವರಿಬ್ಬರೂ ಖುಲಾಸೆಗೊಂಡಿದ್ದರು. ಆದರೆ, ಉದಯ ಇದುವರೆಗೆ ತಲೆಮರೆಸಿಕೊಂಡಿದ್ದ. ಕಡೆಗೂ ಆತನ ಬೆನ್ನತ್ತಿ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಬಂಧಿಸಲಾಯಿತು ಎಂದು ಹೇಳಿದರು.

ಆರೋಪಿಯನ್ನು ಬಂಧಿಸಿದ ನವನಗರ ಠಾಣೆಯ ಎಎಸ್‌ಐ ಆರ್.ಎಸ್. ಸೂಡಿ, ಸಿಪಿಸಿ ಎಂ.ಎಂ. ತುಳಗೇರಿ ಅವರಿಗೆ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ಅನಧಿಕೃತವಾಗಿ ಗ್ಯಾಸ್ ರಿಫೀಲಿಂಗ್: ಬಂಧನ
ಪರವಾನಗಿ ಇಲ್ಲದೆ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಅನಿಲ ರಿಫೀಲಿಂಗ್ ಮಾಡುತ್ತಿದ್ದ ಟಿಪ್ಪುನಗರದ ದುದ್ದುಸಾಬ ಎಂಬಾತನನ್ನು ಬೆಂಡಿಗೇರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಯಿಂದ 3 ಸಿಲಿಂಡರ್, ತೂಕದ ಯಂತ್ರ ಹಾಗೂ ರೆಗ್ಯುಲೇಟರ್ ಜಪ್ತಿ ಮಾಡಲಾಗಿದೆ.

ದುದ್ದಸಾಬ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಜನವಸತಿ ಪ್ರದೇಶದಲ್ಲಿ ರಿಫೀಲಿಂಗ್ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಆರೋಪಿಯನ್ನು ಬಂಧಿಸಿದ ಬೆಂಡಿಗೇರಿ ಪೊಲೀಸ್ ಇನ್‌ಸ್ಪೆಕ್ಟರ್ ಡಿ. ಸಂತೋಷಕುಮಾರ ನೇತೃತ್ವದ ತಂಡಕ್ಕೆ ಪೊಲೀಸ್ ಕಮಿಷನರ್ ಬಹುಮಾನ ಘೋಷಿಸಿದ್ದಾರೆ.

ಜಾತಿ ನಿಂದನೆ: ಬಂಧನ
ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ, ಹಳೇ ಹುಬ್ಬಳ್ಳಿಯ ನೇಕಾರನಗರದ ವೈದ್ಯ ಜಗದೀಶ ಬುದ್ಧಿವಂತ ಬೀರಣ್ಣವರ (25) ಎಂಬಾತನನ್ನು ವಿದ್ಯಾನಗರ ಪೊಲೀಸರು ಗುರುವಾರ ಬಂಧಿಸಿ, ಜೈಲಿಗೆ ಕಳಿಸಿದ್ದಾರೆ.

ಆರೋಪಿ ಸಾಯಿನಗರದ ಶ್ವೇತಾ ಅರಕೇರಿ ಎಂಬುವರರನ್ನು ಅ. 27ರಂದು ಉಣಕಲ್ ಕ್ರಾಸ್ ಮತ್ತು 30ರಂದು ಸಾಯಿ ಕಾಲೊನಿ ಮುಖ್ಯ ರಸ್ತೆಯಲ್ಲಿ ಅಡ್ಡಗಟ್ಟಿದ್ದ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಂಡ ವಸೂಲಿ
ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು 193 ಪ್ರಕರಣ ದಾಖಲಿಸಿ, ₹1.13 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.