ಬುಧವಾರ, ನವೆಂಬರ್ 25, 2020
25 °C

ಪಕ್ಷದ ನಿರ್ಧಾರಕ್ಕೆ ಬದ್ಧ: ಸಚಿವೆ ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನ್ನ‌ ಹೆಸರು ಕೈಬಿಡಲಾಗುತ್ತದೆ ಎಂಬ ಮಾತುಗಳು ಹರಿದಾಡುತ್ತಿವೆ.  ಇದು ಮಾಧ್ಯಮ ಸೃಷ್ಟಿ. ಆದರೂ, ಪಕ್ಷದ ನಿರ್ಧಾರಕ್ಕೆ ನಾನು ಸದಾ ಬದ್ಧವಾಗಿರುತ್ತೇನೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಹುಬ್ಬಳ್ಳಿಯ ಉಣಕಲ್ಲದಲ್ಲಿರುವ ಬಾಲ ಮಂದಿರಕ್ಕೆ ಬುಧವಾರ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

'ಪಕ್ಷದ ಹಿರಿಯರು ನೀಡಿದ ಸಚಿವ ಸ್ಥಾನದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಹಾಗಾಗಿ, ಇಲಾಖೆಯಲ್ಲಿ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಹಾಗಾಗಿ, ಏಕೈಕ ಮಹಿಳಾ ಸಚಿವೆಯಾಗಿರುವ ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ' ಎಂದರು.

'ನ. 20 ರಂದು ತಮ್ಮ ಜನ್ಮದಿ‌ನವಿರುವುದರಿಂದ, ಉಣಕಲ್ಲದ ಬಾಲ ಮಂದಿರದಲ್ಲಿರುವ ವಿಶೇಷ ಮಕ್ಕಳ ಜತೆ ಒಂದು ದಿನ ತಂಗಲಿದ್ದೇನೆ. ನನಗೂ ಒಬ್ಬ ವಿಶೇಷ ಮಗ ಇದ್ದಾನೆ. ಹಾಗಾಗಿ, ಅಂತಹ ಮಕ್ಕಳ ಇದ್ದು, ಅವರ ಕುಂದುಕೊರತೆಗಳ ಬಗ್ಗೆ ಆಲಿಸುವೆ' ಎಂದರು.

'ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ರಾಜ್ಯದಲ್ಲಿರುವ  ಆ ಸಮುದಾಯದ ಅಭಿವೃದ್ಧಿಗಾಗಿಯೇ ಹೊರತು, ಮರಾಠಿ ಭಾಷೆಗಲ್ಲ. ಹಾಗಾಗಿ, ಪ್ರಾಧಿಕಾರಕ್ಕೆ ವಿರೋಧ ಸರಿಯಲ್ಲ' ಎಂದು ಪ್ರಶ್ನೆಯೊಂದಕ್ಕೆ  ಪ್ರತಿಕ್ರಿಯಿಸಿದರು.

'ವೀರಶೈವ ಲಿಂಗಾಯತದಲ್ಲಿಯೇ ಲಿಂಗಾಯತ ಸಮುದಾಯದ ಎಲ್ಲಾ ಜಾತಿಗಳು ಬರುತ್ತವೆ. ಆದ್ದರಿಂದ, ವೀರಶೈವ ಲಿಂಗಾಯತ ಅಭಿವೃದ್ಧಿ  ಹೆಸರಿನಲ್ಲೇ ನಿಗಮ ಸ್ಥಾಪಿಸಲಾಗಿದೆ' ಎಂದರು.
ಶಶಿಕಲಾ ಅವರ ಪತಿ ಹಾಗೂ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು