ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಕೈ ನಾಯಕರಿಗೆ ಮುಜಗರ; ರದ್ದುಗೊಂಡ ಈಶ್ವರಪ್ಪ ರೋಡ್ ಶೋ

ಕೈ ಮಿಲಾಯಿಸಿದ ಕಾಂಗ್ರೆಸ್– ಬಿಜೆಪಿ ಕಾರ್ಯಕರ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಗೋಳ: ಇಲ್ಲಿನ ದೇವನೂರ ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಮತ್ತು ಬಿಜೆಪಿಯ ಉಪ ಚುನಾವಣೆ ಪ್ರಚಾರ, ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸುವ ಘಟನೆಗೆ ಸಾಕ್ಷಿಯಾಯಿತು.

ಮಧ್ಯಾಹ್ನ 2 ಗಂಟೆಗೆ ಗ್ರಾಮದಲ್ಲಿ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಮಡೊಳ್ಳಿಯಲ್ಲಿ ಹಾಗೂ ಶಿರೂರಲ್ಲಿ ಸಿದ್ದರಾಮಯ್ಯ ಪ್ರಚಾರ ಸಭೆಗಳು ಮುಗಿಯುವುದು ತಡವಾಗಿದ್ದರಿಂದ, ಸಂಜೆ 4.30ರ ಹೊತ್ತಿಗೆ ಗ್ರಾಮಕ್ಕೆ ಬಂದರು.

ಇದೇ ವೇಳೆಗೆ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ರೋಡ್‌ ಶೋ ಕೂಡ ನಿಗದಿಯಾಗಿದ್ದರಿಂದ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಇದರ ಮಧ್ಯೆಯೇ ಸಿದ್ದರಾಮಯ್ಯ ತೆರೆದ ವಾಹನ ಏರಿ ರೋಡ್‌ ಶೋ ಆರಂಭಿಸಿದರು.

ಆಗ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರತ್ತ ಬಿಜೆಪಿ ಬಾವುಟ ಪ್ರದರ್ಶಿಸುತ್ತಾ ‘ಮೋದಿ’, ‘ಮೋದಿ’ ಎಂದು ಕೂಗಿದರು. ಪ್ರತಿಯಾಗಿ ಕಾಂಗ್ರೆಸ್‌ನವರು ‘ಜೈ ಶಿವಳ್ಳಿ’, ‘ಸಿದ್ದರಾಮಯ್ಯಗೆ ಜೈ’ ಎಂದು ಘೋಷಣೆ ಹಾಕಿದರು. ಜೈಕಾರದ ಮಧ್ಯೆಯೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ತಳ್ಳಾಟದ ಹಂತಕ್ಕೆ ಹೋಯಿತು.

ವಾಹನದ ಮೇಲಿದ್ದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರತ್ತ ಕೈ ತೋರಿಸಿ, ‘ಸುಮ್ನೀರ್ರಪ್ಪಾ’ ಎಂದರೂ ಕಿವಿಗೊಡದೆ ಪರಸ್ಪರ ಕೈ ಕೈ ಮಿಲಾಯಿಸತೊಡಗಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ, ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ ಸಿದ್ದರಾಮಯ್ಯ ರೋಡ್‌ ಶೋಗೆ ಅನುವು ಮಾಡಿಕೊಟ್ಟರು.

ಈಶ್ವರಪ್ಪ ರೋಡ್ ಶೋ ರದ್ದು:

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದರಿಂದ ಚುನಾವಣಾಧಿಕಾರಿಗಳು ಈಶ್ವರಪ್ಪ ಅವರ ರೋಡ್ ಶೋ ರದ್ದುಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು