ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ | ಗೊಂದಲ ಸೃಷ್ಟಿಸುತ್ತಿರುವ ಕಾಂಗ್ರೆಸ್‌: ಶಾಸಕ ಗೋವಿಂದ ಕಾರಜೋಳ

Published 31 ಡಿಸೆಂಬರ್ 2023, 5:07 IST
Last Updated 31 ಡಿಸೆಂಬರ್ 2023, 5:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಳಮೀಸಲಾತಿ ಬಗ್ಗೆ ಕಾಂಗ್ರೆಸ್‌ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.

ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಶನಿವಾರ ನಡೆದ ‘ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ’ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದಾಶಿವ ಆಯೋಗದಲ್ಲಿ ಲಂಬಾಣಿ, ಬೋವಿ ಜನಾಂಗಕ್ಕೆ ಅನ್ಯಾಯವಾಗಿದೆ. ಅದಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರವು ಒಳಮೀಸಲಾತಿ ನೀಡಲು ತೀರ್ಮಾನಿಸಿತು. ಲಂಬಾಣಿ, ಬೋವಿ ಸಮುದಾಯಗಳಿಗೆ ಶೇ 4.5, ಮಾದಿಗ ಸಮುದಾಯಕ್ಕೆ ಶೇ 6 ಹಾಗೂ ಚಲವಾದಿ ಸಮುದಾಯಕ್ಕೆ ಶೇ 5.5ರಷ್ಟು ನೀಡಲು ತೀರ್ಮಾನ ಕೈಗೊಂಡಿತ್ತು. ಆದರೆ, ಅಷ್ಟರಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಇದು ಜಾರಿಗೆ ಬರಲಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಈ ತೀರ್ಮಾನದ ವಿರುದ್ಧ ಕಾಂಗ್ರೆಸ್ಸಿಗರು ಲಂಬಾಣಿ, ಬೋವಿ ಸಮಾಜದವರನ್ನು ಎತ್ತಿ ಕಟ್ಟಿದರು. ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ಹೊಡೆಸಿದರು. ಒಳಮೀಸಲಾತಿಯಿಂದ ಯಾವುದೇ ಸಮಾಜಕ್ಕೂ ಅನ್ಯಾಯವಾಗಲ್ಲ.  ಸಾಮಾಜಿಕ ನ್ಯಾಯ ಸಿಗಲಿದೆ ಎನ್ನುವುದನ್ನು ಎಲ್ಲ ಜಾತಿಯ ಜನರಿಗೆ ತಿಳಿಸಿ ಹೇಳಬೇಕಾಗಿದೆ ಎಂದು ನುಡಿದರು. 

ಅಸ್ಪೃಶ್ಯ ಸಮುದಾಯಗಳ ಜನರನ್ನು ಮೇಲಕ್ಕೆತ್ತಲು 1950ರಲ್ಲಿ ಮೀಸಲಾತಿ ಜಾರಿಗೆ ತರಲಾಯಿತು. ಆಗ ಎಸ್‌.ಸಿ– 6 ಹಾಗೂ ಎಸ್‌.ಟಿ– 6 ಜಾತಿಗಳಿದ್ದವು. ಈಗ ಎಸ್‌.ಸಿ  101, ಎಸ್‌.ಟಿ 56 ಜಾತಿಗಳಿವೆ. 60ಕ್ಕೂ ಹೆಚ್ಚು ವರ್ಷ ದೇಶವನ್ನಾಳಿದ ಕಾಂಗ್ರೆಸ್‌ ಸರ್ಕಾರ, ಇವರನ್ನು ಮೇಲಕ್ಕೆತ್ತದೆ ವೋಟ್‌ ಬ್ಯಾಂಕ್‌ ಮಾಡಿಕೊಂಡಿತು ಎಂದು ಹರಿಹಾಯ್ದರು.

ಒಳಮೀಸಲಾತಿ ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಸದ್ಯದಲ್ಲಿಯೇ ಒಳ್ಳೆಯ ತೀರ್ಪು ಬರುವ ಆಶಯ ಇದೆ. ಅಲ್ಲಿಯವರೆಗೆ ಸಮುದಾಯದವರು ಒಗ್ಗಟ್ಟಾಗಿರಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಸಮುದಾಯ ಮುಖಂಡರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅವರ ಬೇಡಿಕೆಗಳನ್ನು ಈಡೇರಿಸಲು ಬಿಜೆಪಿ ಸಿದ್ಧವಾಗಿದೆ’ ಎಂದು ಹೇಳಿದರು.

‘ಎಲ್ಲ ಸಮಾಜದವರಿಗೆ ಸಾಮಾಜಿಕ ನ್ಯಾಯ ನೀಡಲು ಬಿಜೆಪಿ ಬದ್ಧ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎನ್ನುವ ತತ್ವದಡಿ ಬಿಜೆಪಿ ಮುನ್ನಡೆಯುತ್ತಿದೆ’ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಮುಖಂಡರಾದ ವೀರಭದ್ರಪ್ಪ ಹಾಲಹರವಿ, ಸಿದ್ದು ಮೇತ್ರಿ, ಸಾಧು ದೊಡಮನಿ, ಬಿ.ಆರ್‌. ಮುನಿರಾಜು, ಪಡಿಯಪ್ಪ ಪೂಜಾರ, ಸಹದೇವ ಮಾಳಗಿ, ಸಿ.ಜಿ. ಹಾದಿಮನಿ, ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT