ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಕಾಂಗ್ರೆಸ್ ನಾಯಕರಿಗೆ ಕಿರುಕುಳ ಖಂಡಿಸಿ ಪ್ರತಿಭಟನಾ ಮೆರವಣಿಗೆ; ಡಿ.ಕೆ. ಶಿವಕುಮಾರ್ ಭಾಗಿ
Last Updated 22 ಜುಲೈ 2022, 16:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನ್ಯಾಷನಲ್ ಹೆರಾಲ್ಡ್ ಆಸ್ತಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಲಾರ್ಪಣೆ ಮಾಡುವ ಮೂಲಕ ‍‍ಪ್ರತಿಭಟನೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯು ಚನ್ನಮ್ಮ ವೃತ್ತದವರೆಗೆ ನಡೆಯಿತು.

ಕೇಂದ್ರ ಸರ್ಕಾರದ ವಿರುದ್ಧದ ಘೋಷಣೆಗಳನ್ನು ಒಳಗೊಂಡ ಫಲಕಗಳನ್ನು ಹಿಡಿದು ಸಾಗಿದ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಕಪ್ಪು ಬಟ್ಟೆ ಧರಿಸಿ ಪಾಲ್ಗೊಂಡರು. ಡಿ.ಕೆ. ಶಿವಕುಮಾರ್ ಅವರ ಕುರಿತು ಹಾಡು ಅನುರಣಿಸಿತು. ಮುಖ್ಯ ರಸ್ತೆಗಳಲ್ಲಿ ಪ್ಲೆಕ್ಸ್‌ಗಳು ರಾರಾಜಿಸಿದವು.

ನೋಟಿಸ್‌ಗೆ ಆಕ್ರೋಶ: ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಿದರೂ, ಪ್ರತಿಭಟನೆ ನಡೆಸಿದ್ದಕ್ಕಾಗಿ ಉಪನಗರ ಠಾಣೆ ಪೊಲೀಸರು, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಅವರಿಗೆ ನೋಟಿಸ್ ನೀಡಿರುವ ವಿಷಯವನ್ನು ಡಿಕೆಶಿ ಗಮನಕ್ಕೆ ಸ್ಥಳೀಯ ಮುಖಂಡರು ತಂದರು.

ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಪೊಲೀಸರೇ ನಮ್ಮನ್ನು ಬಂಧಿಸಿ ಜೈಲಿಗೆ ಹಾಕಿ. ಪ್ರತಿಭಟನೆ ನಮ್ಮ ಸಂವಿಧಾನದತ್ತ ಹಕ್ಕು. ಅದನ್ನು ಕಿತ್ತುಕೊಳ್ಳುವ
ಅಧಿಕಾರ ಯಾರಿಗೂ ಇಲ್ಲ’ ಎಂದರು. ಶಾಸಕ ಪ್ರಸಾದ ಅಬ್ಬಯ್ಯ, ‘ಚನ್ನಮ್ಮ ವೃತ್ತದಲ್ಲಿ ಹಿಂದೆ ಬಿಜೆಪಿಯವರು ವೇದಿಕೆ ಹಾಕಿ‌ ಕಾರ್ಯಕ್ರಮ ಮಾಡಿದ್ದಾಗ, ಏನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ತಿಳಿಸಿ’ ಎಂದರು.

ಶಾಸಕಿ ಕುಸುಮಾವತಿ ಶಿವಳ್ಳಿ, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಮುಖಂಡರಾದ ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ ಇದ್ದರು.

‘ಪ್ರಜಾಪ್ರಭುತ್ವದ ಕಗ್ಗೊಲೆ’

‘ಇ.ಡಿ ದುರುಪಯೋಗಪಡಿಸಿಕೊಂಡು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವ ಬಿಜೆಪಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ’ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘‌ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕುಟುಂಬದ ಜೊತೆ ನಿಂತು ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕಿದೆ.ಹಿಂದೆ ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಸಚಿವರೇ ಪ್ರಕರಣದಲ್ಲಿ ಗಾಂಧಿ ಕುಟುಂಬದ ಪಾತ್ರವಿಲ್ಲ ಎಂದರೂ, ಮತ್ತೆ ಕೆದಕಿ ಕಿರುಕುಳ ನೀಡುತ್ತಿರುವುದು ಖಂಡನೀಯ’ ಎಂದರು.

‘ದ್ವೇಷ ಸಾಧಿಸುತ್ತಿರುವ ಬಿಜೆಪಿ’

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿರುವ ಬಿಜೆಪಿಯು, ರಾಜಕೀಯ ದ್ವೇಷ ಸಾಧಿಸುತ್ತಿದೆ. ದೇಶದಲ್ಲಿ ಮೋದಿ ಸರ್ಕಾರ ಬಂದ ಮೇಲೆ‌‌‌ 11 ರಾಜ್ಯಗಳಲ್ಲಿದ್ದ ಬೇರೆ ಪಕ್ಷಗಳ ಸರ್ಕಾರಗಳನ್ನು ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲಾಗಿದೆ. ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ. ಈ ಸರ್ವಾಧಿಕಾರ ಹೆಚ್ಚು ದಿನಗಳು ನಡೆಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT