ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ದಿಂಗಾಲೇಶ್ವರ ಸ್ವಾಮೀಜಿ ಸೆಳೆಯಲು ಕಾಂಗ್ರೆಸ್‌ ಯತ್ನ

Published 6 ಏಪ್ರಿಲ್ 2024, 23:48 IST
Last Updated 6 ಏಪ್ರಿಲ್ 2024, 23:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಪ್ರಲ್ಹಾದ ಜೋಶಿ ವಿರುದ್ಧ ಬೇಸರ ಹೊಂದಿರುವ ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಸೆಳೆಯಲು ಕಾಂಗ್ರೆಸ್‌ನ ಒಂದು ಗುಂಪು ಯತ್ನಿಸುತ್ತಿದೆ.

‘ಧಾರವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಲಿಂಗಾಯತ ಮುಖಂಡರು ಬೆಳೆಯಲು ಜೋಶಿ ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸುವ ದಿಂಗಾಲೇಶ್ವರ ಸ್ವಾಮೀಜಿಗೆ ಭಕ್ತರು, ಹಿತೈಷಿಗಳು ಸೇರಿ ಕೆಲ ರಾಜಕೀಯ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಸಲಹೆ ನೀಡಿದ್ದಾರೆ.

ಸ್ಪರ್ಧೆ ಕುರಿತು ಬಗ್ಗೆ ಸ್ವಾಮೀಜಿ ಇನ್ನು ನಿರ್ಣಯ ತೆಗೆದುಕೊಂಡಿಲ್ಲ. ಆದರೆ, ಕಾಂಗ್ರೆಸ್‌ ಮುಖಂಡರು ಸಂಪರ್ಕದಲ್ಲಿ ಇರುವುದನ್ನು ಅವರು ನಿರಾಕರಿಸುವುದಿಲ್ಲ.

ಲಿಂಗಾಯತ ಲಾಬಿ: ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಿರುವ ಕಾರಣ ಈ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ನಲ್ಲಿ ಹಲವರು ಒತ್ತಾಯಿಸಿದ್ದರು. ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತ ಸಮುದಾಯದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್‌ ನೀಡಿದ್ದರಿಂದ ಧಾರವಾಡ ಕ್ಷೇತ್ರಕ್ಕೆ ಕುರುಬ ಸಮುದಾಯದ ವಿನೋದ ಅಸೂಟಿ ಅವರಿಗೆ ಟಿಕೆಟ್‌ ನೀಡಲಾಯಿತು.

ಪಕ್ಷದ ತೀರ್ಮಾನದಿಂದ ಲಿಂಗಾಯತ ಸಮುದಾಯದ ಕೆಲ ನಾಯಕರು ಬೇಸರಗೊಂಡರೂ ಬಹಿರಂಗವಾಗಿ ತೋರ್ಪಡಿಸಲಿಲ್ಲ. ಈಗ ಜೋಶಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ಸ್ವಾಮೀಜಿಯವರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

‘ಸ್ವಾಮೀಜಿ ಅವರನ್ನೇ ಪಕ್ಷದ ಅಭ್ಯರ್ಥಿಯಾಗಿಸಿದರೆ ಪ್ರಲ್ಹಾದ ಜೋಶಿ ಅವರಿಗೆ ಪೈಪೋಟಿ ಒಡ್ಡಬಹುದು. ಲಿಂಗಾಯತರ ಮತಗಳನ್ನು ಸೆಳೆದುಕೊಳ್ಳಬಹುದು ಎಂಬುದನ್ನು ವರಿಷ್ಠರ ಗಮನಕ್ಕೆ ತರಲಾಗಿದೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ನ ಕೆಲ ನಾಯಕರು ತಮ್ಮ ಪಕ್ಷದಿಂದ ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕೋರಿದ್ದು ನಿಜ. ನಾನಿನ್ನೂ ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯೇ ತೀರ್ಮಾನಿಸಿಲ್ಲ. ಆದಷ್ಟು ಬೇಗ ನಿರ್ಧಾರ ಪ್ರಕಟಿಸುವೆ
ಫಕೀರ ದಿಂಗಾಲೇಶ್ವರ ಸ್ವಾಮೀಜಿ ಗದಗ– ಶಿರಹಟ್ಟಿಯ ಭಾವೈಕ್ಯ ಪೀಠ

ಅಭ್ಯರ್ಥಿ ಬದಲಾವಣೆಗೆ ಒತ್ತಡ

‘ಧಾರವಾಡ ಕ್ಷೇತ್ರದ ಅಭ್ಯರ್ಥಿಯಾಗಿ ವಿನೋದ ಅಸೂಟಿ ಅವರನ್ನು ಕಾಂಗ್ರೆಸ್‌ ಈಗಾಗಲೇ ಘೋಷಿಸಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 12ರಂದು ಆರಂಭವಾಗಲಿದೆ. ವಿನೋದ ಅಸೂಟಿ ಬದಲು ದಿಂಗಾಲೇಶ್ವರ ಸ್ವಾಮೀಜಿ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸಿ ಅವರಿಂದ ನಾಮಪತ್ರ ಸಲ್ಲಿಸಲು ಕಾಲಾವಕಾಶವಿದೆ ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ಪಕ್ಷದ ವರಿಷ್ಠರನ್ನು ಮನಗಾಣಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT