ಸೋಮವಾರ, ಜನವರಿ 24, 2022
21 °C
ಬೆಂಗಳೂರು, ಮೈಸೂರು ಭಾಗದ ವಿದ್ಯಾರ್ಥಿಗಳು ಸಾಥ್‌; ಎಬಿವಿಪಿಯಿಂದ ನಾಳೆ ಪ್ರತಿಭಟನೆ

ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರಸ್ತುತ ಶೈಕ್ಷಣಿಕ ವರ್ಷದ ಮೂರು ಮತ್ತು ಐದನೇ ಸೆಮಿಸ್ಟರ್‌ ಕಾನೂನು ತರಗತಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎನ್‌ಎಸ್‌ಯುಐ ನೇತೃತ್ವದಲ್ಲಿ ನವನಗರದ ಕಾನೂನು ವಿಶ್ವ ವಿದ್ಯಾಲಯದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆ ಎರಡನೇ ದಿನವಾದ ಮಂಗಳವಾರವೂ ಮುಂದುವರಿಯಿತು.

ಕಾನೂನು ವಿಶ್ವವಿದ್ಯಾಲಯದ ಕುಲಪತಿ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳು, ಸೋಮವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಮುಂದುವರಿದ ಅವರ ಪ್ರತಿಭಟನೆಗೆ ಮುಂಬೈ, ಬೆಂಗಳೂರು, ಮೈಸೂರು, ತುಮಕೂರು, ಚಿತ್ರದುರ್ಗ ಜಿಲ್ಲೆಯಿಂದ ಬಂದ ಕಾನೂನು ವಿದ್ಯಾರ್ಥಿಗಳು ಸಾಥ್‌ ನೀಡಿದರು.

ಸೋಮವಾರದಂತೆ ಮಂಗಳವಾರವೂ ಕುಲಪತಿ ಡಾ. ಈಶ್ವರ ಭಟ್‌ ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಡಿ. 16ರಿಂದ ಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿದ್ದು, ಕೂಡಲೇ ಹಿಂಪಡೆಯಬೇಕು. ಪರೀಕ್ಷೆ ನಡೆಸುವುದೇ ಆದರೆ, ಭೌತಿಕ ಪರೀಕ್ಷೆ ರದ್ದು ಪಡಿಸಿ ಆನ್‌ಲೈನ್‌, ಅಸೈನ್ಮೆಂಟ್‌ ಅಥವಾ ಆಬ್ಜೆಕ್ಟಿವ್‌ ಮಾದರಿಯಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕುಲಪತಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ, ವಕೀಲ ಪಿ.ಎಚ್‌. ನೀರಲಕೇರಿ ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ಸೂಚಿಸಿ, ಕೆಲವು ವಿದ್ಯಾರ್ಥಿ ಮುಖಂಡರ ಸಮ್ಮುಖದಲ್ಲಿ ಕುಲಪತಿ ಜೊತೆ ಚರ್ಚಿಸಿದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಭೌತಿಕ ಪರೀಕ್ಷೆ ಕೈ ಬಿಟ್ಟು, ಆನ್‌ಲೈನ್‌ ಅಥವಾ ಆಬ್ಜೆಕ್ಟಿವ್‌ ಮಾದರಿ ಪರೀಕ್ಷೆ ನಡೆಸಬೇಕು ಎಂದು ವಿನಂತಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಈಶ್ವರ ಭಟ್‌, ‘ಎಲ್ಲ ಕಡೆ ಏಕರೀತಿ ಇಂಟರ್‌ನೆಟ್‌ ಇರದಿರುವುದರಿಂದ ಆನ್‌ಲೈನ್‌ ಪರೀಕ್ಷೆ ಸಂದರ್ಭದಲ್ಲಿ ಅಡಚಣೆಯಾಗುತ್ತದೆ. ಅಸೈನ್ಮೆಂಟ್‌ ಮಾದರಿಯಲ್ಲಿ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಗೆ ಇನ್ನೂ ತರಬೇತಿ ನೀಡಿಲ್ಲ. ಅಲ್ಲದೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚಿರುವುದರಿಂದ ಒಮ್ಮೆಲೆ ಸಂಶೋಧನೆ ಮಾಡಿ ಅಸೈನ್ಮೆಂಟ್‌ ನೀಡಲು ಅವರಿಗೆ ಕಷ್ಟವಾಗುತ್ತದೆ. ಆಬ್ಜೆಕ್ಟಿವ್‌ ಮಾದರಿ ಪರೀಕ್ಷೆ ನಡೆಸಲು ನಮ್ಮಲ್ಲಿ ನುರಿತ ಮತ್ತು ತರಬೇತಿ ಪಡೆದ ಸಿಬ್ಬಂದಿ ಇಲ್ಲ. ಇದಕ್ಕೆ ಕನಿಷ್ಠ ಎರಡರಿಂದ ಮೂರು ತಿಂಗಳು ಅಗತ್ಯವಿದೆ. ಪರೀಕ್ಷೆ ಕುರಿತು ವಿದ್ಯಾರ್ಥಿ ಸಮೂಹದಲ್ಲಿ ಸಮೀಕ್ಷೆ ನಡೆಸಿದಾಗ ಹೆಚ್ಚಿನ ವಿದ್ಯಾರ್ಥಿಗಳು ಭೌತಿಕ ಪರೀಕ್ಷೆ ನಡೆಸಲು ವಿನಂತಿಸಿದ್ದಾರೆ. 26 ಸಾವಿರ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಸಮೀಕ್ಷೆ ಪ್ರಕಾರ ಹಾಗೂ ಹೈ ಕೋರ್ಟ್‌ ನಿರ್ದೇಶನ ಮತ್ತು ಬಾರ್‌ ಕೌನ್ಸಿಲ್‌ ಮಾರ್ಗಸೂಚಿಯಂತೆ ಡಿ. 15ರಂದು ಪರೀಕ್ಷೆ ನಡೆಸಲಾಗುವುದು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದರು.

ನಂತರ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಕೀಲ ನೀರಕೇರಿ, ನಿಮ್ಮ ಪ್ರತಿಭಟನೆ ಅರ್ಥಪೂರ್ಣವಾಗಿದೆ. ಆದರೆ, ಈ ಸಂದರ್ಭದಲ್ಲಿ ಅದು ಸೂಕ್ತವಲ್ಲ. ಹಗಲು–ರಾತ್ರಿ ಕೂತು ಪ್ರತಿಭಟಿಸುವ ಬದಲು ಕೋರ್ಟ್‌ ನಿರ್ಧಾರದವರೆಗೆ ಕಾಯುವುದು ಸೂಕ್ತ ಎಂದರು. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಕುಲಪತಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳಾದ ವರುಣ ಗೌಡ, ರಜತ್‌, ಸಂತೋಷ ನಂದೂರ, ಮಂಜುನಾಥ, ಶಂಕರ ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮಂಗಳವಾರವೂ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಾಳೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಘಟನೆ ವತಿಯಿಂದ ಕಾನೂನು ವಿದ್ಯಾರ್ಥಿಗಳು ಡಿ. 9ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಚಲೋ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಬಿವಿಪಿ ರಾಜ್ಯ ಸಹ ಸಂಘಟಕ ಪ್ರಥ್ವಿರಾಜಕುಮಾರ, ‘ಎಲ್ಲ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ವರ್ಷದ ಪರೀಕ್ಷೆ ಮುಗಿದಿದೆ. ಆದರೆ, ಕಾನೂನು ವಿಶ್ವ ವಿದ್ಯಾಲಯದಲ್ಲಿ ಇನ್ನೂ ಪರೀಕ್ಷೆ ನಡೆದಿಲ್ಲ. ವಿದ್ಯಾರ್ಥಿಗಳ ಒಂದು ವರ್ಷ ಹಾಳಾಗುತ್ತಿದ್ದು, ಇದು ಅವರ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ಬಾರ್‌ ಕೌನ್ಸಿಲ್‌ ಮಾರ್ಗಸೂಚಿ ಅನ್ವಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ಅಂಶ ಮುಂದಿಟ್ಟುಕೊಂಡು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.