ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪು ಪಾನೀಯ | ಶುಚಿತ್ವ, ಗುಣಮಟ್ಟದ ಕೊರತೆ; ಅನಾರೋಗ್ಯ ಸಮಸ್ಯೆ ಕಾಡುವ ಆತಂಕ

Published 22 ಏಪ್ರಿಲ್ 2024, 6:45 IST
Last Updated 22 ಏಪ್ರಿಲ್ 2024, 6:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿದರೂ ಬಾಯಾರಿಕೆ ಸಹಜ. ದಾಹ ನೀಗಿಸಿಕೊಳ್ಳಲು ತಂಪು ಪಾನೀಯ ಅಥವಾ ನೀರು ಕುಡಿಯಲು ಬೇಕು. ಬೀದಿ ಬದಿ ಅಥವಾ ಸಮೀಪದಲ್ಲಿ ತಂಪು ಪಾನೀಯ ಅಂಗಡಿ ಕಂಡರೆ ಸಾಕು, ಅಲ್ಲಿ ಹೊರಟು ಬಿಡುತ್ತೀರಿ. ಆದರೆ, ಪಾನೀಯ ಕುಡಿಯುವ ಮುನ್ನ ಸ್ವಲ್ಪ ತಾಳಿ. ಅನಾರೋಗ್ಯಕ್ಕೆ ಒಳಗಾಗುವ ಸ್ಥಿತಿ ತಂದುಕೊಳ್ಳಬೇಡಿ.

ಆಗಾಗ ಬದಲಾಗುತ್ತಿರುವ ವಾತಾವರಣ ಒಂದೆಡೆಯಾದರೆ, ದೂಳು, ಕಸ, ವಾಹನದಿಂದ ಹೊರಹೊಮ್ಮುವ ಹೊಗೆ ಮತ್ತೊಂದೆಡೆ. ಈ ಮಧ್ಯೆ ದಣಿವಾರಿಸಿಕೊಳ್ಳಲು ರಸ್ತೆಬದಿ ಅಂಗಡಿಗಳಲ್ಲಿ ಪಾನೀಯ, ಐಸ್ ಮಿಶ್ರಿತ ಕಬ್ಬಿನಹಾಲು ಸೇವಿಸುವ ಮುನ್ನ ಸ್ಬಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲಿಸುವುದು ಉತ್ತಮ.

‘ಪಾನೀಯ ತಯಾರಿಕೆಗೆ ಬಹುತೇಕ ಕಡೆ ಶುದ್ಧ ನೀರು ಬಳಕೆ ಆಗುತ್ತಿಲ್ಲ. ಬಳಸಿದ ಲೋಟಗಳನ್ನು ಸರಿಯಾಗಿ ತೊಳೆಯದೆ ಪದೇ ಪದೆ ಬಳಸಿದ ನೀರಿನಲ್ಲೇ ಅದ್ದಿ ತೆಗೆಯಲಾಗುತ್ತದೆ. ತುಕ್ಕು ಹಿಡಿದ ಸಾಧನಗಳನ್ನು ಬಳಸಿ ಐಸ್ ಹಾಗೂ ಹಣ್ಣುಗಳನ್ನು ಕತ್ತರಿಸಲಾಗುತ್ತಿದೆ’ ಎಂಬ ಆರೋಪವಿದೆ.

‘ಬೀದಿಬದಿ ಅಂಗಡಿಗಳಲ್ಲಿ ಹಣ್ಣುಗಳನ್ನು ಕತ್ತರಿಸಿ ತೆರೆದೇ ಇಡಲಾಗುತ್ತದೆ. ಕೊಳಚೆ, ತ್ಯಾಜ್ಯದ ರಾಶಿ, ಹೀಗೆ ಎಲ್ಲೆಂದರಲ್ಲಿ ನೊಣಗಳು, ಕ್ರಿಮಿಕೀಟಗಳು ಆವರಿಸಿಕೊಳ್ಳುತ್ತವೆ. ಸ್ವಚ್ಛತೆಯಂತೂ ಇರುವುದೇ ಇಲ್ಲ’ ಎನ್ನುತ್ತಾರೆ ನಗರದ ನಿವಾಸಿ ಸಚಿನ್ ಮಿಸ್ಕಿನ್.

‘ಕೆಲ ಬೀದಿಬದಿ ಅಂಗಡಿಗಳಲ್ಲಿ ಗ್ರಾಹಕರಿಗೆ ತಿಳಿಯದಂತೆ ಅಶುಚಿಯಾದ ಹಾಗೂ ಕೊಳೆತ ಹಣ್ಣಿನಿಂದ ತಯಾರಿಸಿದ ಜ್ಯೂಸ್ ನೀಡಲಾಗುತ್ತಿದೆ’ ಎಂದು ನಗರದ ಮಹೇಶ ಮೇಲ್ಗಡೆ ಹೇಳುತ್ತಾರೆ.

ಪಾನೀಯ ಕುಡಿಯುವ ಮುನ್ನ ಗುಣಮಟ್ಟದ ಬಗ್ಗೆ ಗಮನಿಸಬೇಕು. ಇದಕ್ಕೆ ಬಳಸುವ ಐಸ್ ಕಳಪೆಯಾಗಿದ್ದರೆ ಶೀತ, ಕೆಮ್ಮು, ಗಂಟಲು ಕೆರೆತ, ವಾಂತಿ, ಭೇದಿಯಂತಹ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಬಾಯಾರಿಕೆ, ಆಯಾಸ ತಾತ್ಕಾಲಿಕವಾಗಿ ಶಮನ ಆಗುತ್ತದೆ. ಆದರೆ, ಬೇರೆ ಬೇರೆ ಸ್ವರೂಪದ ಅನಾರೋಗ್ಯ ಸಮಸ್ಯೆ ಕಾಡುತ್ತದೆ’ ಎನ್ನುತ್ತಾರೆ ಕಿಮ್ಸ್‌ನ ವೈದ್ಯ ಈಶ್ವರ ಹಸಬೀ.

‘ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಎಷ್ಟು ಉತ್ತಮವೋ ಅಷ್ಟೇ ಅಡ್ಡ ಪರಿಣಾಮ ಕೂಡ ಬೀರುತ್ತದೆ. ಮಾವು, ಚಿಕ್ಕು, ಬಾಳೆಹಣ್ಣು, ದ್ರಾಕ್ಷಿಯಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಇದು ಮಧುಮೇಹಿಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಎಳೆನೀರು ಸೇವಿಸುವುದು ಉತ್ತಮ’ ಎಂಬುದು ವೈದ್ಯರ ಅಭಿಪ್ರಾಯ.

ಪಾನೀಯ ತಯಾರಿಕೆಗೆ ಶುದ್ಧ ನೀರಿನಿಂದ ತಯಾರಿಸಲ್ಪಡುವ ಐಸ್‌ ಬಳಸಬೇಕು ಎಂಬ  ನಿಯಮ ಇದೆ. ಇದು ಬಣ್ಣರಹಿತ ಹಾಗೂ ಶುದ್ಧವಾಗಿ ಇರುತ್ತದೆ. ಆದರೆ, ಕೆಲವು ಪಾನೀಯ ಅಂಗಡಿಗಳಲ್ಲಿ ಕಲ್ಮಶ ಐಸ್ ಬಳಸಲಾಗುತ್ತಿದೆ ಎನ್ನುವುದು ಗ್ರಾಹಕರ ಆರೋಪವಾಗಿದೆ.

ಆಹಾರ ತಜ್ಞರ ಪ್ರಕಾರ, ಐಸ್ ಸಂಪೂರ್ಣ ಬೆಳ್ಳಗಿದ್ದರೆ ಕೊಳವೆಬಾವಿ ನೀರು, ಕೊಂಚ ಹಳದಿಯಾಗಿದ್ದರೆ ಬೇರೆ ನೀರು ಬಳಸಲಾಗಿದೆ ಎಂದರ್ಥ.

ಹುಬ್ಬಳ್ಳಿಯಲ್ಲಿ ಐದು ಐಸ್ ಫ್ಯಾಕ್ಟರಿಗಳಿವೆ. ದಿನವೊಂದಕ್ಕೆ 40 ಟನ್‌ ಐಸ್ ತಯಾರಾಗುತ್ತದೆ. ಒಂದು ಪೌಂಡ್‌ಗೆ ₹ 80ರಿಂದ ₹ 100 ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ. ಐಸ್‌ನಲ್ಲಿ ಎಡಿಬಲ್ ಮತ್ತು ನಾನ್ ಎಡಿಬಲ್ ಎಂಬ ಎರಡು ವಿಧಗಳಿವೆ. ತಿನ್ನಲು ಯೋಗ್ಯವಾದ ಐಸ್‌ (ಎಡಿಬಲ್) ಕಬ್ಬಿನ ಹಾಲು ಅಥವಾ ಪಾನೀಯದಲ್ಲಿ ಹಾಕಿಕೊಂಡು ಕುಡಿಯಬಹುದು. ಇದು ಸಂಪೂರ್ಣವಾಗಿ ಶುದ್ಧ ನೀರಿನಿಂದ ತಯಾರಿಸಲಾಗುತ್ತದೆ. ಇದು ಬಣ್ಣರಹಿತ ಆಗಿರುತ್ತದೆ. ಅನಾರೋಗ್ಯಕ್ಕೀಡು ಮಾಡಬಲ್ಲ ಯಾವುದೇ ತರಹದ ಕೃತಕ ಅಂಶ ಅಥವಾ ಬಣ್ಣವನ್ನು ಈ ಐಸ್‌ಗೆ ಬಳಸುವಂತಿಲ್ಲ.

ಬಳಕೆಗೆ ಮಾತ್ರ ಯೋಗ್ಯವಾದ ಐಸ್‌ ಅನ್ನು (ನಾನ್ ಎಡಿಬಲ್) ಮೀನು, ಮಾಂಸ, ಮೃತದೇಹವನ್ನು ದೀರ್ಘಕಾಲದವರೆಗೆ ಯಥಾಸ್ಥಿತಿಯಲ್ಲಿ ಶೇಖರಿಸಿಡಲು ಬಳಸಲಾಗುತ್ತದೆ. ಇದನ್ನು ಕುಡಿಯಲು ಯೋಗ್ಯವಲ್ಲದ ನೀರಿನಿಂದ ತಯಾರಿಸಲಾಗುತ್ತದೆ.

ಆದರೆ, ನಗರದ ಕೆಲವು ಅಂಗಡಿಗಳಲ್ಲಿ ಪಾನೀಯ ತಯಾರಿಕೆಗೆ ನಾನ್ ಎಡಿಬಲ್ ಐಸ್ ಬಳಸಲಾಗುತ್ತಿದೆ ಎಂಬ ಆರೋಪವಿದೆ. 

‘ನಾನ್ ಎಡಿಬಲ್ ಐಸ್‌ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವ್ಯಕ್ತಿಯು ಅನಾರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ’ ಎನ್ನುತ್ತಾರೆ ವೈದ್ಯರು.

ಬೀದಿಬದಿ ಪಾನೀಯ ಅಂಗಡಿಗಳಲ್ಲಿ ಗುಣಮಟ್ಟ, ಸ್ವಚ್ಛತೆ ಕಾಪಾಡಬೇಕು. ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಪರಿಶೀಲಿಸಲು ಸೂಚಿಸಲಾಗುವುದು
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT