ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ ಗಾಯಕ್ಕೆ ಕೊರೊನಾ ಉಪ್ಪು

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 22 ಮಾರ್ಚ್ 2020, 10:34 IST
ಅಕ್ಷರ ಗಾತ್ರ

ಆರ್ಥಿಕ ಹಿಂಜರಿತದ ಪರಿಣಾಮ ನೆಲಕಚ್ಚಿದ್ದ ವ್ಯಾಪಾರ ವಹಿವಾಟು ಇನ್ನೇನು ಚೇತರಿಸಿಕೊಳ್ಳುವ ಸೂಚನೆ ಸಿಕ್ಕ ಬೆನ್ನಲ್ಲೇ ಆವರಿಸಿದ ಕೊರೊನಾ ಸೋಂಕಿನ ಭೀತಿ ದೊಡ್ಡ ಗಾಯದ ಮೇಲೆ ಬರೆ ಎಳೆದು, ಉಪ್ಪು ಸುರಿದಂತಾಗಿದೆ. ವಾಣಿಜ್ಯ ನಗರಿ ಖ್ಯಾತಿಯ, ಛೋಟಾ ಮುಂಬೈ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿಯ ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ.

ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಭೆ, ಸಮಾರಂಭ, ವಾರದ ಸಂತೆಯನ್ನು ನಿಷೇಧಿಸಿರುವುದರಿಂದ ಜನರ ಓಡಾಟವೇ ಇಲ್ಲದೆ ರಸ್ತೆಗಳು ಭಣಗುಟ್ಟುತ್ತಿವೆ. ವಾಣಿಜ್ಯ ವಹಿವಾಟು ನಡೆಯುವ ಕೊಪ್ಪಿಕರ ರಸ್ತೆ, ದುರ್ಗದ ಬೈಲ್ ಪ್ರದೇಶ, ಕೋಳಿ, ಮೀನು ಮಾಂಸದ ಮಾರುಕಟ್ಟೆ ಇರುವ ಗಣೇಶ ಪೇಟೆ ಸೇರಿದಂತೆ ಎಲ್ಲ ಪ್ರಮುಖ ಪ್ರದೇಶಗಳಲ್ಲಿಯೂ ಜನರ ಓಡಾಟ ವಿರಳವಾಗಿದೆ. ದಿನಸಿ ಅಂಗಡಿಯಿಂದ ಹಿಡಿದು ಎಳನೀರಿನ ವ್ಯಾಪಾರದವರೆಗೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಕೋಳಿ ಮಾಂಸದಿಂದ ಕೊರೊನಾ ಸೋಂಕು ಹರಡುತ್ತದೆ ಎಂದು ಸುದ್ದಿ ಹಬ್ಬಿರುವ ಕಾರಣ ವ್ಯಾಪಾರ ನೆಲಕಚ್ಚಿದೆ. ಕೋಳಿ ಮಾಂಸ ಮಾತ್ರವಲ್ಲದೆ, ಕುರಿ ಮಾಂಸ, ಮೀನು ತಿನ್ನಲು ಸಹ ಜನರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ದಿನ 20 ಕೋಳಿಗಳ ಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ಕೋಳಿ ಮಾಂಸದಿಂದಲೂ ಹರಡುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿರುವ ಕಾರಣ ಜನರು ಮಾಂಸ ಖರೀದಿಗೆ ಬರುತ್ತಿಲ್ಲ. ದಿನವೊಂದಕ್ಕೆ ಐದು ಕೋಳಿಯ ಮಾಂಸ ಮಾರಿದರೆ ಅದೇ ಹೆಚ್ಚು. ಇದರಿಂದಾಗಿ ಭಾರಿ ನಷ್ಟವಾಗುತ್ತಿದೆ ಎನ್ನುತ್ತಾರೆ ಆದರ್ಶನಗರ ಕಲಾಲ ಚಿಕನ್ ಸೆಂಟರ್ ಮಾಲೀಕ ನಾರಾಯಣ್‌.

ಕೋಳಿ ಮಾಂಸದ ಮಾರಾಟದ ಕಥೆ ಹೀಗಾದರೆ, ಇನ್ನು ಮಾಂಸಾಹಾರಿ ಹೋಟೆಲ್‌ಗಳಿಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಅರ್ಧದಷ್ಟು ವ್ಯಾಪಾರ ಕುಸಿದಿದೆ. ಹೋಟೆಲ್‌ಗೆ ಬಂದವರಲ್ಲಿ ಬಹುತೇಕರು ಕುರಿ ಮಾಂಸದ ಖಾದ್ಯವನ್ನೇ ತಿನ್ನುತ್ತಿದ್ದಾರೆ. ದೊಡ್ಡ, ಹೋಟೆಲ್‌ಗಳು, ಸಣ್ಣಪುಟ್ಟ ಮಾಂಸಾಹಾರಿಹೋಟೆಲ್‌ಗಳ ಮಾಲೀಕರು ಇದರಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.

ಕೋಳಿಗೆ ಬೇಡಿಕೆ ಕುಸಿದು ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ,ಕೆ.ಜಿ. ಮಾಂಸದ ಬೆಲೆ ₹700ಕ್ಕೆ ಮುಟ್ಟಿದೆ. ಆದ್ದರಿಂದ ಮಾಂಸಪ್ರಿಯರು ಸಹ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಇದು ಒಟ್ಟಾರೆ ವಹಿವಾಟು ಕುಸಿಯಲು ಕಾರಣವಾಗಿದೆ.

ಆಟೊ ರಿಕ್ಷಾ ಖಾಲಿ ಖಾಲಿ: ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವುದನ್ನು ತಡೆಯಲು ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಬಸ್‌ಗಳ ಟ್ರಿಪ್‌ಗಳ ಸಂಖ್ಯೆಯನ್ನು ಸಹ ಕಡಿತಗೊಳಿಸಲಾಗಿದೆ. ಭಯ ಹಾಗೂ ಗೊಂದಲದ ವಾತಾವರಣ ಇರುವುದರಿಂದ ಹಳ್ಳಿಗಳಿಂದ ನಗರಕ್ಕೆ ಬರುವ ಜನರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಕಡಿಮೆಯಾಗಿದೆ. ಆದ್ದರಿಂದ ಆಟೊ ರಿಕ್ಷಾ ಚಾಲಕರ ಗಳಿಕೆ ಕುಸಿದಿದೆ.

ಖಾಲಿ ಆಟೊಗಳು ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಕೊರೊನಾ ವೈರಸ್ ಭೀತಿಯಿಂದ ದೊಡ್ಡ ಹೊಡೆತ ಬಿದ್ದಿದೆ. ಜನರು ಹೊರಗೆ ಬರಲು ಹೆದುರುತ್ತಿರುವುದರಿಂದ ಬಾಡಿಗೆ ಇಲ್ಲದೆ ನಷ್ಟ ಅನುಭವಿಸುಂತಾಗಿದೆ. ಪ್ರತಿ ದಿನ ಸರಾಸರಿ ₹800 ದುಡಿಮೆ ಆಗುತ್ತಿತ್ತು. ಆದರೆ ಈಗ ₹150 ದುಡಿಯುವುದು ಸಹ ಕಷ್ಟವಾಗಿದೆ. ಮಾಲೀಕರಿಗೆ ರಿಪೋರ್ಟ್‌ (ಹಣ) ಕೊಡಲು ಸಹ ಆಗುತ್ತಿಲ್ಲ. ಇದೇ ರೀತಿ ಮುಂದುವರಿದರೆ ಊಟಕ್ಕೂ ಕಷ್ಟಪಡಬೇಕಾಗುತ್ತದೆ ಎನ್ನುತ್ತಾರೆ ಆಟೊ ಚಾಲಕ ಅಶ್ಪಾಕ್.

ಪ್ರತಿ ದಿನ 20–25 ಕೆಜಿ ಮೈದಾ ಹಿಟ್ಟು ಬಳಸಿ ವಿವಿಧ ಬಗೆಯ ಬೇಕರಿ ತಿನಿಸು ತಯಾರಿಸಲಾಗುತ್ತಿತ್ತು. ಆದರೆ ಈಗ ಅದನ್ನು 8–10 ಕೆ.ಜಿಗೆ ಇಳಿಸಲಾಗಿದೆ. ಶಾಲೆಗಳಿಗೆ ಸಹ ರಜೆ ಇರುವುದರಿಂದ ವಹಿವಾಟು ಸಂಪೂರ್ಣ ಕುಸಿದಿದೆ ಎನ್ನುತ್ತಾರೆ ಬೇಕರಿ ಮಾಲೀಕ ಶಂಕರ್.

ಜನರ ಓಡಾಟ ಹೆಚ್ಚಾಗಿದ್ದರೆ ಮಾತ್ರ ನಮಗೆ ವ್ಯವಹಾರ ಆಗುತ್ತದೆ. ಈಗಂತೂ ಜನರು ಓಡಾಡುವುದೇ ವಿರಳವಾಗಿದೆ. ಆದ್ದರಿಂದ ದುಡಿಮೆಗೆ ಪೆಟ್ಟು ಬಿದ್ದಿದೆ. ದಿನ ₹400ರಿಂದ ₹500ರ ವರೆಗೆ ಆಗುತ್ತಿದ್ದ ದುಡಿಮೆ ಈಗ ₹150ಕ್ಕೆ ಕುಸಿದಿದೆ ಎನ್ನುತ್ತಾರೆ ಚಪ್ಪಲಿ ರಿಪೇರಿ– ಮಾರಾಟ ಅಂಗಡಿಯ ಮಾಲೀಕ ಸಂತೋಷ್.

ಸಂತೆಯಲ್ಲಿ ಹೂ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಎಪಿಎಂಸಿಯಲ್ಲಿ ₹5 ಸಾವಿರ ನೀಡಿ ಖರೀದಿ ಮಾಡಿದ ಹೂವನ್ನು ಸಂತೆಯಲ್ಲಿ ಮಾರಾಟ ಮಾಡುತ್ತೇವೆ. ಆದರೆ, ಬುಧವಾರದ ಸಂತೆಯಲ್ಲಿ ಅಂಗಡಿ ಹಾಕಲು ಅಡ್ಡಿಪಡಿಸಿದರು. ಮೊದಲೇ ವ್ಯಾಪಾರ ಇಲ್ಲ, ಅದರ ಮೇಲೆ ಈ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿದೆ ಎಂದು ಲಕ್ಷ್ಮಿ ಹೇಳಿದರು.

ಸಂತೆ ಬಂದ್ ಮಾಡಿಸಬೇಕು ಎಂದರೆ ಎಪಿಎಂಸಿಯನ್ನೇ ಬಂದ್ ಮಾಡುವುದು ಸೂಕ್ತ. ನಾವು ಅಲ್ಲಿಂದಲೇ ಅಲ್ಲವೇ ಖರೀದಿ ಮಾಡಿ ತಂದು ಮಾರಾಟ ಮಾಡುವುದು ಎಂದು ಅವರು ಪ್ರಶ್ನಿಸಿದರು. ದಿನಕ್ಕೆ 200 ಎಳನೀರು ವ್ಯಾಪಾರವಾಗುತ್ತಿತ್ತು, ಆದರೆ ಈಗ ₹70–₹80 ಮಾರಿದರೆ ಅದೇ ಹೆಚ್ಚು ಎನ್ನುತ್ತಾರೆ ವ್ಯಾಪಾರಿ ರಮೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT