ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಆಮ್ಲಜನಕ: ಬೇಡ ಆತಂಕ

ಎಂಟು ಉತ್ಪಾದನಾ ಘಟಕ ಕಾರ್ಯಾಚರಣೆ: ಸಂಗ್ರಹಾಗಾರಗಳು ಶೇ 100ರಷ್ಟು ಭರ್ತಿ
Last Updated 23 ಜನವರಿ 2022, 6:45 IST
ಅಕ್ಷರ ಗಾತ್ರ

ಹುಬ್ಬ‌ಳ್ಳಿ: ಕೋವಿಡ್ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆಯಿಂದಾಗಿ ರಾಜ್ಯದಲ್ಲಿ ಹಲವು ಸೋಂಕಿತರು ಕೊನೆಯುಸಿರೆಳೆದಿದ್ದರು. ಮೂರನೇ ಅಲೆಯಲ್ಲಿ ಅಂತಹ ಘಟನೆ ಜಿಲ್ಲೆಯಲ್ಲಿ ಮರುಕಳಿಸಬಾರದು ಎಂಬ ಎಚ್ಚರದಿಂದ ಜಿಲ್ಲಾಡಳಿತ ಪೂರ್ವಸಿದ್ಧತೆ ಮಾಡಿಕೊಂಡಿದೆ.

ಕೋವಿಡ್ ಮೂರನೇ ಅಲೆಯ ಮುನ್ಸೂಚನೆ ಸಿಗುತ್ತಿದ್ದಂತೆ ಜಿಲ್ಲೆಯಾದ್ಯಂತ ಇರುವ ವೈದ್ಯಕೀಯ ಆಮ್ಲಜನಕ ಸಂಗ್ರಹಾಗಾರಗಳನ್ನು ಶೇ 100ರಷ್ಟು ಭರ್ತಿ ಮಾಡಿದೆ. ಎಂಟು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಗಂಟೆಗೆ ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸುವ ಒಂದು ಹಾಗೂ ತಲಾ ಐದುನೂರು ಲೀ. ಉತ್ಪಾದನಾ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಲಾಗಿದೆ. ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಸಾವಿರ ಲೀ. ಸಾಮರ್ಥ್ಯದ ಒಂದು ಹಾಗೂ 500 ಲೀ. ಸಾಮರ್ಥ್ಯದ ಒಂದು ಘಟಕವಿದೆ.

ಕುಂದಗೋಳ, ನವಲಗುಂದಲ, ಕಲಘಟಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 500 ಲೀ. ಉತ್ಪಾದನಾ ಸಾಮರ್ಥ್ಯದ ಒಂದೊಂದು ಘಟಕ ನಿರ್ಮಾಣವಾಗಿವೆ. ಕಿಮ್ಸ್‌ನಲ್ಲಿ 40 ಮೆ. ಟನ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ 6 ಮೆ. ಟನ್ ಆಮ್ಲಜನಕ ಸಂಗ್ರಹವಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಭರ್ತಿಯಾದ 50–100 ಸಿಲಿಂಡರ್‌ಗಳು ಇವೆ. 30–50ರ ವರೆಗೆ ಆಮ್ಲಜನಕ ಸಾಂದ್ರಕಗಳನ್ನು ಸಜ್ಜಾಗಿಡಲಾಗಿದೆ.

ಎರಡು ಸಾವಿರದಷ್ಟು ಆಮ್ಲಜನಕ ಸೌಲಭ್ಯ ಸಹಿತ ಹಾಸಿಗೆಗಳಿವೆ. ಈ ಎಲ್ಲ ಹಾಸಿಗೆಗಳು ಸೋಂಕಿತರಿಂದ ಭರ್ತಿಯಾದರೂ ಸುಗಮವಾಗಿ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

‍‘ದೆಹಲಿ, ಮುಂಬೈನಲ್ಲಿ ಕೂಡ ಈ ಅಲೆಯಲ್ಲಿ ಹೆಚ್ಚಿನ ಆಮ್ಲಜನಕದ ಅಗತ್ಯ ಕಂಡುಬಂದಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಅಂದಾಜಿಸಲಾದ ಅಗತ್ಯಕ್ಕಿಂತಲೂ ಐವತ್ತು ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹ ಇದೆ. ಒಂದು ವೇಳೆ ಸಂಗ್ರಹವಾಗಿರುವ ಆಮ್ಲಜನಕ ಬಳಕೆ ಆಗುತ್ತಿದ್ದರೂ ಅದೇ ವೇಳೆಯಲ್ಲಿ ಮತ್ತೆ ಉತ್ಪಾದನೆ ಮಾಡುವ ಘಟಕಗಳೂ ಸಿದ್ಧವಾಗಿರುವುದರಿಂದ ಆತಂಕ ಪಡಬೇಕಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದರು.

ಮಾಹಿತಿ ಲಭ್ಯವಿಲ್ಲ: ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ 080–47168111 ನೀಡಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿದರೆ ಕಿಮ್ಸ್ ಆಸ್ಪತ್ರೆ ಹಾಗೂಹುಬ್ಬಳ್ಳಿಯಲ್ಲಿನ ಎರಡು ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿ ಮಾತ್ರ ಸಿಗುತ್ತದೆ. ಸಂಪೂರ್ಣ ಜಿಲ್ಲೆಯಲ್ಲಿನ ಹಾಸಿಗೆ ಲಭ್ಯತೆಯ ಮಾಹಿತಿ ತಮ್ಮ ಬಳಿ ಇಲ್ಲ ಎಂಬ ಉತ್ತರ ಬರುತ್ತದೆ.

‘ಕಪ್ಪು ಶಿಲೀಂಧ್ರದ ಭಯವಿಲ್ಲ’
ಕಳೆದ ಬಾರಿ ಪೂರಕ ಆಮ್ಲಜನಕ ಪಡೆದುಕೊಂಡಿದ್ದ ಕೊರೊನಾ ಸೋಂಕಿತರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಬೇಕಾದ ಔಷಧ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಆಗದೆ ಪ್ರಾಣ ಹಾನಿಗೂ ಕಾರಣವಾಗಿತ್ತು. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಔಷಧ ಮಾರಾಟವಾಗಿತ್ತು. ಅದನ್ನು ಗಮನದಲ್ಲಿ ಇರಿಸಿಕೊಂಡು ಸಾಕಷ್ಟು ಔಷಧಗಳನ್ನು ಕಿಮ್ಸ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ.

‘ಕಳೆದ ಬಾರಿ ಸ್ಟಿರಾಯಿಡ್ ಬಳಕೆ ಮಾಡಲಾಗಿತ್ತು. ಆದ್ದರಿಂದ ಕಪ್ಪು ಶಿಲೀಂಧ್ರ ಸಮಸ್ಯೆ ಎದುರಾಗಿತ್ತು. ಈ ಬಾರಿ ಸ್ಟಿರಾಯಿಡ್ ಬಳಸುವ ಅಗತ್ಯ ಬರುತ್ತಿಲ್ಲ, ಬಳಸುವಂತೆ ಮಾರ್ಗಸೂಚಿಯಲ್ಲೂ ತಿಳಿಸಿಲ್ಲ. ಆದ್ದರಿಂದ ಕಪ್ಪು ಶಿಲೀಂಧ್ರ ಸಾಧ್ಯತೆ ಕಡಿಮೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

*

ಹತ್ತಕ್ಕಿಂತ ಕಡಿಮೆ ಸೋಂಕಿತರು ಪೂರಕ ಆಮ್ಲಜನಕ ವ್ಯವಸ್ಥೆಯಲ್ಲಿ ಇದ್ದಾರೆ. ನಮ್ಮ ಅಂದಾಜಿನ ಪ್ರಕಾರ ಈ ಬಾರಿ ಆಮ್ಲಜನಕ ಹಾಗೂ ಹಾಸಿಗೆಯ ಕೊರತೆ ಉಂಟಾಗದು.
-ನಿತೇಶ್ ಕೆ. ಪಾಟೀಲ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT