ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಉದ್ಯೋಗ ಸೃಷ್ಟಿಯೇ ಸಾಧನೆ: ಉಲ್ಲಾಸ ಕಾಮತ ಅಭಿಪ್ರಾಯ

‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉದ್ಯಮಿ ಉಲ್ಲಾಸ ಕಾಮತ ಅಭಿಪ್ರಾಯ
Last Updated 4 ಮಾರ್ಚ್ 2021, 15:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉದ್ಯಮಗಳಿಗೆ ಉದ್ಯೋಗ ಸೃಷ್ಟಿಯೇ ಸವಾಲು. ನಮ್ಮ ಬಳಿ ಇರುವುದು ಮುಂದಿನ ಕೆಲ ವರ್ಷಗಳವರೆಗೆ ಇರುತ್ತದೆಯೇ ಎಂಬ ಗ್ಯಾರಂಟಿ ಇಲ್ಲದ ಸ್ಥಿತಿ ಇದೆ. ತಂತ್ರಜ್ಞಾನವು ಹಣ, ಸಮಯ ಸೇರಿದಂತೆ ಎಲ್ಲವನ್ನೂ ಕಸಿಯುತ್ತಿದೆ. ಸವಾಲುಗಳ ಮಧ್ಯೆ ಸ್ಥಳೀಯರಿಗೆ ಉದ್ಯೋಗ ನೀಡುವುದು ನಿಜಕ್ಕೂ ಸಾಧನೆ’ ಎಂದು ಜ್ಯೋತಿ ಲ್ಯಾಬೊರೇಟರಿಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ ಕಾಮತ ಹೇಳಿದರು.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ನಡೆದ ಸಂಸ್ಥೆಯ 92ನೇ ಸಂಸ್ಥಾಪಕರ ದಿನಾಚರಣೆ ಮತ್ತು ‘ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ವರ್ಷಕ್ಕೆ ಹತ್ತು ಲಕ್ಷ ಪದವೀಧರರು ಹೊರ ಬರುತ್ತಿದ್ದಾರೆ. ಸರ್ಕಾರದ ನೀತಿಗಳು ಸ್ಥಳೀಯ ಉದ್ಯೋಗ ಸೃಷ್ಟಿಗೆ ಪೂರಕವಾಗಿದ್ದು, ನಮ್ಮ ಮಕ್ಕಳು ಉದ್ಯೋಗಕ್ಕಾಗಿ ಊರು ಬಿಟ್ಟು ನಗರಗಳಿಗೆ ವಲಸೆ ಹೋಗದಂತೆ ತಡೆಯಬೇಕಿದೆ’ ಎಂದರು.

‘ವಾಣಿಜ್ಯೋದ್ಯಮದ ಹಬ್ ಆಗಿ ಬೆಳೆಯುವ ಸಾಮರ್ಥ್ಯ ಹುಬ್ಬಳ್ಳಿ–ಧಾರವಾಡಕ್ಕಿದೆ. ಇಲ್ಲಿನ ಸಿರಿವಂತರು ಒಂದು ನಿಧಿ ಸ್ಥಾಪಿಸಿ, ಯುವಜನರ ಸಂಶೋಧನೆ ಮತ್ತು ಯೋಜನೆಗಳಿಗೆ ಹೂಡಿಕೆ ಮಾಡಬೇಕು. ಸ್ಥಳೀಯವಾಗಿ ಉದ್ಯಮ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿ ಜತೆಗೆ ಲಾಭವೂ ಬರುತ್ತದೆ. ಕೆಲವೇ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾಗುತ್ತದೆ’ ಎಂದು ಸಲಹೆ ನೀಡಿದರು.

ಆಶೀರ್ವಚನ ನೀಡಿದ ಕೊಲ್ಲಾಪುರದ ಕನೇರಿಯ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ‘ಸ್ವಾತಂತ್ರ್ಯ ಬಂದಾಗ ಹಳ್ಳಿಗಳಲಿದ್ದ ಶೇ 88 ಜನಸಂಖ್ಯೆ ಈಗ ಶೇ 40ಕ್ಕೆ ಇಳಿದಿದೆ. ನಗರಗಳು ಹಳ್ಳಿಗಳನ್ನು ನುಂಗಿ ಬೆಳೆಯುತ್ತಿವೆ. ಸಮತೋಲನ ಬೆಳವಣಿಗೆಗಾಗಿ ಹಳ್ಳಿಗಳು ಸಮೃದ್ಧಗೊಳ್ಳಬೇಕಿದೆ. ಗ್ರಾಮೋದ್ಯೋಗ ಮತ್ತು ಗೃಹೋದ್ಯಮಗಳ ಮರು ಸ್ಥಾಪನೆ ಆಗಬೇಕಿದೆ. ಸ್ಮಾರ್ಟ್ ಸಿಟಿಗಳ ಜತೆಗೆ ಸ್ಮಾರ್ಟ್ ಗ್ರಾಮಗಳು ನಿರ್ಮಾಣವಾಗಬೇಕು’ ಎಂದರು.

‘ಸ್ವಾಮಿಗಳಿಗೆ ಲೋಕ ಕಲ್ಯಾಣದ ಹುಚ್ಚು’

‘ಸ್ವಾಮಿಗಳಿಗೆ ಲೋಕ ಕಲ್ಯಾಣದ ಹುಚ್ಚು ಹಿಡಿದಿದೆ. ಆ ಮಠ ಕಲ್ಯಾಣ ಮಾಡ್ತಿನಿ, ಈ ಮಠ ಉನ್ನತಿ ಮಾಡ್ತಿನಿ ಅಂತಾರೆ. ನೀವ್ಯಾಕೆ ಮಾಡಬೇಕು? ಅದಕ್ಕೆ ಬೇಕಾದಷ್ಟು ಮಂದಿ ಇದ್ದಾರೆ. ಮೊದಲು ನೆಟ್ಟಗೆ ನಿಲ್ಲುವುದನ್ನು ಕಲಿಯಿರಿ’ ಎಂದ ಸ್ವಾಮೀಜಿ, ‘ನಿಮ್ಮಲ್ಲೇ ಸಾಹುಕಾರರು ಮತ್ತು ರೊಕ್ಕ ಇರುವವರು ಇದಾರೆ ಅಂತ ತಿಳಿದುಕೊಳ್ಳಬೇಡಿ. ನಿಮಗಿಂತಲೂ ಚನ್ನಾಗಿ ಬಡ್ಡಿ ವ್ಯವಹಾರ ಮಾಡುವವರು ನಮ್ಮಲ್ಲಿದ್ದಾರೆ. ಬೇಕಿದ್ದರೆ ಪಟ್ಟಿ ಕೊಡ್ತಿನಿ’ ಎಂದಾಗ ಸಭೆ ನಗೆಯಲ್ಲಿ ಮುಳುಗಿತು.

ಪ್ರಶಸ್ತಿ ಪುರಸ್ಕೃತರು:

ಹುಬ್ಬಳ್ಳಿಯ ವಿಭವ ಕೆಮಿಕಲ್ಸ್‌ನ ನಂದಕುಮಾರ ಎಚ್.ಎನ್., ಕೆನರಾ ಹೋಟೆಲ್ ಮಾಲೀಕ ಅನಂತಪದ್ಮನಾಭ ಐತಾಳ, ಧಾರವಾಡದ ಸ್ಕೈಟೆಕ್ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನ ನಾಗರಾಜ ಯಲಿಗಾರ, ಶಿಲ್ಪಾ ಬಯೋಲಾಜಿಕಲ್ ಪ್ರೈವೇಟ್ ಲಿಮಿಟೆಡ್‌ ನಿರ್ದೇಶಕಿ ಮತ್ತು ಸಿಎಸ್ಒ ಡಾ.ಕೆ.ಆರ್. ರಾಜ್ಯಶ್ರೀ ಹಾಗೂ ಅಣ್ಣಿಗೇರಿಯ ಕೃಷಿ ಸಲಕರಣೆಗಳ ಸಂಶೋಧಕ ಹಾಗೂ ಉತ್ಪಾದಕ ಅಬ್ದುಲ್ ಖಾದರ ಇಮಾಮಸಾಬ್ ನಡಕಟ್ಟಿ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಲಾಯಿತು.

ಸಂಸ್ಥೆ ಸಂಸ್ಥಾಪಕ ಮರುಗಯ್ಯಸ್ವಾಮಿ ಜಂಗೀನ ಅವರ ಕುಟುಂಬದ ಪ್ರೊ. ಚಂದ್ರಶೇಖರ್ ಮತ್ತು ಸಣ್ಣಮ್ಮ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಫೇಸ್‌ಬುಕ್‌ ಪುಟವನ್ನು ಅನಾವರಣಗೊಳಿಸಿ, ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಎಚ್‌. ಲದ್ಡಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಉಮೇಶ ಗಡ್ಡದ, ಸಂಸ್ಥಾಪಕರ ದಿನಾಚರಣೆ ಸಮಿತಿ ಮುಖ್ಯಸ್ಥ ಪ್ರವೀಣ ಅಗಡಿ, ಸಂಸ್ಥೆ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT