ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಮಹಾಪೂರದಲ್ಲಿ ವಿಶ್ವಾಸಾರ್ಹತೆ ಎತ್ತಿಹಿಡಿಯುವ ಅಗತ್ಯ: ದೀಪಾ ಚೋಳನ್

ಧಾರವಡ ಜರ್ನಲಿಸ್ಟ್ ಗಿಲ್ಡ್‌ ಉದ್ಘಾಟನೆ ಸಮಾರಂಭ
Last Updated 26 ಏಪ್ರಿಲ್ 2019, 14:15 IST
ಅಕ್ಷರ ಗಾತ್ರ

ಧಾರವಾಡ: ‘ಮಾಹಿತಿ ತಂತ್ರಜ್ಞಾನದ ತ್ವರಿತ ಬೆಳವಣಿಗೆಯಿಂದಾಗಿ ಆಗುತ್ತಿರುವ ಸುದ್ದಿಯ ಮಹಾಪೂರದಲ್ಲಿ ವಿಶ್ವಾಸಾರ್ಹತೆಗೆ ಧಕ್ಕೆ ಬಾರದಂತೆ ಸುದ್ದಿ ಬಿತ್ತರಿಸುವ ವೃತ್ತಿಪರತೆಯನ್ನು ಪತ್ರಿಕೋದ್ಯಮ ಎತ್ತಿಹಿಡಿಬೇಕು’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಧಾರವಾಡ ಜರ್ನಲಿಸ್ಟ್ ಗಿಲ್ಡ್‌ ಉದ್ಘಾಟನೆ ಮತ್ತು ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಮಾಧ್ಯಮಗಳ ಸ್ವರೂಪವೇ ಇಂದು ಬದಲಾಗಿದೆ. ನಾವು ಸಣ್ಣವರಿದ್ದಾಗ ದೂರದರ್ಶನ ಏಕೈಕ ಚಾನಲ್‌. ಬ್ರೇಕಿಂಗ್ ನ್ಯೂಸ್ ಎಂಬ ಪರಿಕಲ್ಪನೆಯೇ ಇರಲಿಲ್ಲ. ಪತ್ರಿಕೆಗಳಲ್ಲಿ ಇಂಗ್ಲಿಷ್‌ನ ಡೆಕ್ಕನ್ ಹೆರಾಲ್ಡ್, ದಿ ಹಿಂದು ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ ಹಾಗೂ ಕನ್ನಡದಲ್ಲಿ ಸಮಗ್ರ ಸುದ್ದಿ ನೀಡುತ್ತಿದ್ದ ‘ಪ್ರಜಾವಾಣಿ‍’ಮೂಲಕ ದೇಶ, ವಿದೇಶಗಳ ವಿದ್ಯಮಾನಗಳನ್ನು ತಿಳಿಯುತ್ತಿದ್ದೆವು. ಆದರೆ ಇಂದು ಕಾಲ ಸಾಕಷ್ಟು ಬದಲಾಗಿದೆ. ಬಹಳಷ್ಟು ಸುದ್ದಿ ಮಾಧ್ಯಮಗಳು ಆರಂಭವಾಗಿವೆ. ಸುದ್ದಿಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಪತ್ರಿಕೋದ್ಯಮದ ಮೌಲ್ಯವಾದ ವಿಶ್ವಾಸಾರ್ಹತೆಯೂ ಕುಸಿಯುತ್ತಿರುವುದು ಬೇಸರದ ಸಂಗತಿ’ ಎಂದರು.

‘ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ನವ ಮಾಧ್ಯಮಗಳಲ್ಲಿ ಸುದ್ದಿ ಲಭಿಸುತ್ತಿದೆಯಾದರೂ, ಓದುಗರು ಈಗಲೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಯಲ್ಲೇ ಹೆಚ್ಚು ನಂಬಿಕೆ ಇರಿಸಿದ್ದಾರೆ. ಹೀಗಾಗಿ ಮುದ್ರಣ ಮಾಧ್ಯಮ ಇಂದಿಗೂ ವಿಶ್ವಾಸಾರ್ಹತೆ ಕಾಪಾಡಿಕೊಂಡು ಬರುತ್ತಿರುವುದು ಸಂತಸದ ವಿಷಯ. ಹೀಗಾಗಿ ಈ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ವರದಿಗಾರರು ಗಮನ ಹರಿಸಬೇಕು’ ಎಂದು ಚೋಳನ್ ಹೇಳಿದರು.

ನೇಚರ್ ಫಸ್ಟ್ ಸಂಸ್ಥಾಪಕ ಪಿ.ವಿ. ಹಿರೇಮಠ ಮಾತನಾಡಿ, ‘ನಾವು ನಾಗರಿಕರು ಎಂದು ಹೇಳುತ್ತಲೇ ಪರಿಸರಕ್ಕೆ ಅನ್ಯಾಯ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಶೇ 28ರಷ್ಟು ಅರಣ್ಯ ಪ್ರದೇಶ ಇತ್ತು. ಈ 70 ವರ್ಷಗಳಲ್ಲಿ ಅರಣ್ಯ ಪ್ರದೇಶ ಶೇ 8ಕ್ಕೆ ಕುಸಿದಿದೆ. ಜಗತ್ತಿನಲ್ಲಿ ಶುದ್ಧ ಗಾಳಿ ಸಿಗದೆ ಪ್ರತಿ ವರ್ಷ 3300 ಮಂದಿ ಮೃತಪಡುತ್ತಿದ್ದಾರೆ. 7 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಪತ್ರಿಕೋದ್ಯಮದ ಮೂಲಕ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಬೆಳಕು ಚೆಲ್ಲಬೇಕಿದೆ. ಆ ಮೂಲಕ ಜನರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳವಂತೆ ಮಾಡಬೇಕಿದೆ’ ಎಂದರು.

‘ಪಶ್ಚಿಮಘಟ್ಟದಲ್ಲಿ ಹುಟ್ಟುವ ಜಲಮೂಲಗಳಲ್ಲಿ ಶೇ 65ರಷ್ಟು ಸಮುದ್ರವನ್ನೇ ಮುಟ್ಟುವುದಿಲ್ಲ. 2ಸಾವಿರ ಮಿಲಿ ಮೀಟರ್ ಮಳೆ ಆಗುತ್ತಿದ್ದ ಧಾರವಾಡದಲ್ಲಿ ಈಗ ಬೀಳುತ್ತಿರುವುದು 400 ಮಿ.ಲೀ. ಮಾತ್ರ. ವಿಲಾಸಿ ಜೀವನದ ಬೆನ್ನು ಹತ್ತಿರುವ ಮನುಷ್ಯ ನೀರಿನ ಮೌಲ್ಯವನ್ನು ಅಲಕ್ಷಿಸುತ್ತಿದ್ದಾನೆ. ಇದು ನಮ್ಮೆಲ್ಲರಿಗೂ ಅಪಾಯವನ್ನು ತಂದೊಡ್ಡಬಹುದು’ ಎಂದು ಎಚ್ಚರಿಸಿದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಜಿಲ್ಲಾ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿದರು. ಪ್ರಾಸ್ತಾವಿಕವಾಗಿ ಬಸವರಾಜ ಹೊಂಗಲ್ ಮಾತನಾಡಿದರು, ಗಿಲ್ಡ್ ಅಧ್ಯಕ್ಷ ಪುಂಡಲೀಕ ಹಡಪದ ಅಧ್ಯಕ್ಷತೆ ವಹಿಸಿದ್ದರು. ಲಾಂಛನ ವಿನ್ಯಾಸ ಮಾಡಿದ ಚಂದ್ರಕಾಂತ ಶಿಂಧೆ ಅವರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT