ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವು; ಪಾಲಿಕೆ ಆದಾಯ ಹೆಚ್ಚಳ ಗುರಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಇಂಗಿತ
Last Updated 19 ನವೆಂಬರ್ 2019, 13:22 IST
ಅಕ್ಷರ ಗಾತ್ರ

ಧಾರವಾಡ: ‘ಹುಬ್ಬಳ್ಳಿ ಧಾರವಾಡದಲ್ಲಿ ರಾಜನಾಲಾ ಸೇರಿದಂತೆ ಸರ್ಕಾರಿ ಆಸ್ತಿ ಒತ್ತುವರಿ ತೆರವು ಮತ್ತು ಪಾಲಿಕೆಯ ಆದಾಯ ಮೂಲ ಹೆಚ್ಚಳಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹೇಳಿದರು.

ಧಾರವಾಡ ಜರ್ನಲಿಸ್ಟ್ಸ್‌ ಗಿಲ್ಡ್ ಮಂಗಳವಾರ ಆಯೋಜಿಸಿದ್ದ ಆಹ್ವಾನಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜನಾಲಾ ಒತ್ತುವರಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇದರ ತೆರವು ಕಾರ್ಯಾಚರಣೆಯನ್ನು ಪ್ರಾಥಮಿಕವಾಗಿ ಆರಂಭಿಸಿ, ನಂತರ ಸರ್ಕಾರಿ ಜಾಗಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಉಣಕಲ್‌ನಿಂದ ಗಬ್ಬೂರು ವರೆಗಿನ 10.5ಕಿ.ಮೀ. ರಸ್ತೆಯಲ್ಲಿನ ರಾಜನಾಲಾ ಒತ್ತುವರಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. 7ಮೀ.ಯಿಂದ 25ಮೀ.ವರೆಗೂ ಒತ್ತುವರಿಯಾಗಿದೆ. ಒಟ್ಟು 153 ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕೆಲವೆಡೆ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕುಪತ್ರಗಳನ್ನೂ ವಿತರಿಸಿರುವ ಉದಾಹರಣೆಗಳಿವೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ಇವೆಲ್ಲವನ್ನೂ ಶೀಘ್ರದಲ್ಲಿ ತೆರವುಗೊಳಿಸಲಾಗುವುದು’ ಎಂದರು.

ಆದಾಯಕ್ಕೆ ಒತ್ತು; ಸೂಪರ್ ಮಾರುಕಟ್ಟೆಗೆ ಕಾಯಕಲ್ಪ:‘ಪಾಲಿಕೆ ಒಡೆತನದ ಮಳಿಗೆಗಳಲ್ಲಿ ಬಹಳಾ ವರ್ಷಗಳಿಂದ ಇರುವವರೇ ಇದ್ದಾರೆ. ಕಳೆದ ಜುಲೈನಲ್ಲಿ ಸರ್ಕಾರ ಹೊರಡಿಸಿರುವ ಹೊಸ ಸುತ್ತೋಲೆಯಂತೆ 12 ವರ್ಷ ಪೂರೈಸಿದ ಸ್ಟಾಲ್‌ಗಳ ಮರು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಇದಕ್ಕಿರುವ ತಡೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಾ. ಇಟ್ನಾಳ ತಿಳಿಸಿದರು.

‘ಅದರಂತೆಯೇ ಸೂಪರ್ ಮಾರುಕಟ್ಟೆಯಲ್ಲಿ ಕೆಲವರು ಇತರರ ಜಾಗ ಕಬಳಿಸಿದ್ದಾರೆ. ಪ್ರತಿಯೊಬ್ಬರಿಗೂ4X6 ಚದರ ಮೀಟರ್ ಜಾಗದಂತೆ 657 ಕಾಟಾಗಳನ್ನು ನಿರ್ಮಿಸಲಾಗುವುದು. ಸರಳ ವಿನ್ಯಾಸವೇ ಆದರೂ, ಹೆಚ್ಚು ವ್ಯಾಪಾರಿಗಳಿಗೆ ಇದು ಅನುಕೂಲವಾಗಲಿದೆ. ಆ ಮೂಲಕ ಪಾಲಿಕೆ ಆದಾಯ ಹೆಚ್ಚಳದ ಜತೆಗೆ, ವ್ಯಾಪಾರಸ್ಥರಿಗೂ ಹೆಚ್ಚು ಅನುಕೂಲವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಾಲಿಕೆಯು ಸರ್ಕಾರದಿಂದ ಶೇ 70ರಷ್ಟು ಅನುದಾನ ಪಡೆಯುತ್ತಿದ್ದರೆ, ಶೇ 30ರಷ್ಟನ್ನು ತನ್ನ ಸ್ವಂತ ಆದಾಯದಿಂದ ಗಳಿಸುತ್ತಿದೆ. ಪಾಲಿಕೆಯ ಆದಾಯ ಮೂಲಗಳನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುತ್ತಿದೆ’ ಎಂದರು.

ರಾಜ್ಯಕ್ಕೆ ಮಾದರಿಯಾಗಲಿದೆ ತ್ಯಾಜ್ಯ ಸಂಸ್ಕರಣಾ ಘಟಕ: ‘ಅವಳಿ ನಗರದ ತ್ಯಾಜ್ಯ ಸಂಗ್ರಹ ಹಾಗೂ ಸಂಸ್ಕರಣೆ ವೇಗ ಪಡೆದುಕೊಂಡಿದೆ. ನಿತ್ಯ 170 ಆಟೊ ಟಿಪ್ಪರ್‌ಗಳ ಮೂಲಕ ಕಸ ಸಂಗ್ರಹಿಸಲಾಗುತ್ತಿದೆ. ಧಾರವಾಡದಲ್ಲಿ ತೆಂಗಿನ ಮರಗಳು ಹೆಚ್ಚು ಇರುವುದರಿಂದ, ಅದರ ಗರಿಗಳನ್ನು ಸಾಗಿಸಲು ವಾರಕ್ಕೊಮ್ಮೆ ಟ್ರ್ಯಾಕ್ಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಜತೆಗೆ ಆಧುನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳು ಸಿದ್ಧಗೊಳ್ಳುತ್ತಿವೆ. ಇವುಗಳು ಡಿಸೆಂಬರ್ ಕೊನೆಗೆ ಪೂರ್ಣಗೊಳ್ಳಲಿದ್ದು, ರಾಜ್ಯಕ್ಕೆ ಮಾದರಿಯಾಗಲಿದೆ’ ಎಂದು ಇಟ್ನಾಳ ವಿಶ್ವಾಸ ವ್ಯಕ್ತಪಡಿಸಿದರು.

‘ಧಾರವಾಡ ತಾಲ್ಲೂಕಿನ ಶಿವಳ್ಳಿ ಬಳಿ ಸಂಗ್ರಹವಾದ ತ್ಯಾಜ್ಯಗಳಿಂದ ಕಟ್ಟಡ ಸಾಮಗ್ರಿಗಳ ನಿರ್ಮಾಣ ಘಟಕ ಸ್ಥಾಪಿಸುವ ಉದ್ದೇಶದಿಂದ ಗಣಿ ಇಲಾಖೆಯಿಂದ ₹3ಕೋಟಿ ಬಿಡುಗಡೆಯಾಗಿದೆ. ಮಾರ್ಚ್ ಅಂತ್ಯಕ್ಕೆ ಈ ಘಟಕ ಕಾರ್ಯಾರಂಭ ಮಾಡಲಿದೆ’ ಎಂದರು.

ನೆರೆಪೀಡಿತ ಪ್ರದೇಶಗಳಿಗೆ ಕಾಯಕಲ್ಪ: ಅತಿಯಾದ ಮಳೆಯಿಂದಾಗಿ ನಗರದ ಸಿ.ಬಿ.ನಗರ, ಭಾವಿಕಟ್ಟಿ ಪ್ಲಾಟ್ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗುತ್ತಿವೆ. ಈ ಪ್ರದೇಶಗಳಿಗೆ ನೀರು ಬರುದುಬರುವ ಮಾರ್ಗಗಳಾದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕಲ್ಯಾಣ ನಗರ ಇನ್ನಿತರ ಪ್ರದೇಶಗಳಿಂದಲೇ ನೀರನ್ನು ಬೇರೆಡೆಗೆ ತಿರುಗಿಸಲು ಯೋಜನೆ ರೂಪಿಸಲಾಗಿದೆ.

‘ಟೋಲ್‌ನಾಕಾ ಬಳಿ ನೀರು ನಿಲ್ಲುತ್ತಿದ್ದು, ಪಾಲಿಕೆಯಿಂದಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಜ್ಯುಬಿಲಿ ವೃತ್ತದಿಂದ ಟೋಲ್‌ ನಾಕಾ ಬಳಿ ಇರುವ ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿವರೆಗೂ ಮಳೆ ನೀರು ಹರಿದುಹೋಗಲು ಕಾಲುವೆ ನಿರ್ಮಿಸಲಾಗುವುದು. ಹಾಗೆಯೇ ಲಕ್ಷ್ಮೀಸಿಂಗನಕೇರಿಯಿಂದ ಹರಿದುಬರುವ ನೀರಿಗೆ ಮಧ್ಯದಲ್ಲೇ ಜಾಲರಿ ಬೇಲಿಗಳನ್ನು ಹಾಕಲಾಗುವುದು. ಇದರಿಂದ ತ್ಯಾಜ್ಯಗಳು ಅಲ್ಲೇ ಸಂಗ್ರಹವಾಗಿ, ನೀರು ಸರಾಗವಾಗಿ ಹರಿದು ಬರಲಿದೆ. ಬರುವ ಮಳೆಗಾಲದ ಒಳಗಾಗಿ ಇವುಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಡಾ. ಇಟ್ನಾಳ ಹೇಳಿದರು.

ಪಾಲಿಕೆ ಮುಖ್ಯ ಎಂಜಿನಿಯರ್ ಜಿ.ಜಿ.ಹಿರೇಮಠ, ವಲಯ ಕಚೇರಿ ಸಹಾಯಕ ಆಯುಕ್ತರಾದ ಎನ್.ಬಿ. ಸಬರದ, ಎನ್. ರಮೇಶ, ಕೆ.ಎನ್. ಹಂಚಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT