ಗುರುವಾರ , ನವೆಂಬರ್ 21, 2019
26 °C
ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ಅಘೋಷಿತ ಬಂದ್ ವಾತಾವರಣ, ಮಧ್ಯಾಹ್ನ ಖರೀದಿ ಭರಾಟೆ

ಕುತೂಹಲ, ಆತಂಕ, ನಿರಾಳ...

Published:
Updated:
Prajavani

ಹುಬ್ಬಳ್ಳಿ: ಆಯೋಧ್ಯೆ ವಿವಾದ ಕುರಿತು ಅಂತಿಮ ತೀರ್ಪು ಪ್ರಕಟವಾಗುವುದಾಗಿ ಒಂದು ದಿನ ಮೊದಲೇ ಗೊತ್ತಿದ್ದರಿಂದ ನಗರದಲ್ಲಿ ಗುರುವಾರ ಬೆಳಿಗ್ಗೆ ಕೆಲ ಹೊತ್ತು ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ತೀರ್ಪು ಪ್ರಕಟವಾದ ಕೆಲ ಹೊತ್ತಿದ ಬಳಿಕ ಜನಜೀವನ ಸಹಜ ಸ್ಥಿತಿಗೆ ತಲುಪಿತು.

ತೀರ್ಪಿನ ಬಗ್ಗೆ ಆರಂಭದಲ್ಲಿ ಇದ್ದ ಕುತೂಹಲವೆಲ್ಲ ಕೆಲಹೊತ್ತಿನಲ್ಲಿಯೇ ಕರಗಿ, ಗಲಾಟೆಯಾಗಬಹುದೆಂಬ ಆತಂಕವೂ ಮರೆಯಾಗಿ ಮಧ್ಯಾಹ್ನದ ವೇಳೆಗೆ ಎಂದಿನಂತೆ ವಹಿವಾಟು ಜರುಗಿತು.

ಜಿಲ್ಲೆಯಲ್ಲಿ ಶನಿವಾರ ನಿಷೇಧಾಜ್ಞೆ ಹೊರಡಿಸಿದ್ದರಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ನಗರದಾದ್ಯಂತ 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣು ಇಡಲಾಗಿತ್ತು. ಈದ್ಗಾ ಮೈದಾನದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ದುರ್ಗದ ಬೈಲ್‌, ಬಂಕಾಪುರ ಚೌಕ್‌, ಇಂಡಿಪಂಪ್‌, ಹೆಗ್ಗೇರಿ, ಚನ್ನಪೇಟೆ, ಯಲ್ಲಾಪುರ ಓಣಿ, ಮೂರು ಸಾವಿರಮಠ, ಸಿದ್ಧಾರೂಢ ಮಠ ಹಾಗೂ ಟಿಪ್ಪು ನಗರ ಭಾಗಗಳಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಲಾಗಿತ್ತು. ಕಮಿಷನರ್‌ ಆರ್‌. ದಿಲೀಪ್‌ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿದರು. ಚನ್ನಮ್ಮ ವೃತ್ತದಲ್ಲಿ ಪೊಲೀಸ್‌ ಕಮಾಂಡೊ ವಾಹನವನ್ನು ನಿಲ್ಲಿಸಿ, ನಿಗಾ ವಹಿಸಲಾಗಿತ್ತು.

‘ಅಯೋಧ್ಯೆ ತೀರ್ಪು ಹಾಗೂ ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಎರಡು ದಿನ ಇದೇ ರೀತಿಯ ಭದ್ರತೆ ಮುಂದುವರಿಯಲಿದೆ‘ ಎಂದು ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಪ್ರಜಾವಾಣಿ’ಗೆ ತಿಳಿಸಿದರು.

ಭಯಗೊಂಡ ಅಡ್ಮಿನ್‌ಗಳು: ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಬರಹಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರಿಂದ ವಾಟ್ಸ್‌ಆ್ಯಪ್‌ ಶನಿವಾರ ಸ್ವಲ್ಪ ಶಾಂತವಾಗಿತ್ತು. ಆದ್ದರಿಂದ ಬಹುತೇಕ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಅಡ್ಮಿನ್‌ಗಳು ‘ಅಡ್ಮಿನ್‌ ಓನ್ಲಿ’ ಎಂದು ಸೆಟ್ಟಿಂಗ್‌ನಲ್ಲಿ ಬದಲಾಯಿಸಿಕೊಂಡಿದ್ದರು!

ಮದ್ಯ ನಿಷೇಧ: ಅವಳಿ ನಗರದಲ್ಲಿ ಶನಿವಾರದಿಂದ ನ. 11ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ವಹಿವಾಟು: ನಿಷೇಧಾಜ್ಞೆ ನಡುವೆಯೂ ಇಲ್ಲಿನ‌ ಪ್ರಮುಖ ಮಾರುಕಟ್ಟೆ ಪ್ರದೇಶವಾದ ದುರ್ಗದಬೈಲ್ ವೃತ್ತ ಹಾಗೂ ಸುತ್ತಮುತ್ತ ಬೆಳಿಗ್ಗೆ 11 ಗಂಟೆ ಬಳಿಕ ಎಂದಿನಂತೆ ವಹಿವಾಟು ನಡೆಯಿತು.

ತುಳಸಿ ಹಬ್ಬ ಕೂಡ ಇದ್ದಿದ್ದರಿಂದ, ಮಧ್ಯಾಹ್ನದ ಬಳಿಕ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೆ ಜನ ಕಬ್ಬು, ಹೂವು, ಹಣ್ಣು, ಮಾವಿನ ಸೊಪ್ಪು, ನೆಲ್ಲಿಕಾಯಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ದುರ್ಗದ ಬೈಲ್‌ ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ ಪ್ರದೇಶ. ಇದರ ಸುತ್ತಮುತ್ತ ಷಾ ಬಜಾರ್, ಹಣ್ಣಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಹೋಲ್‌ಸೇಲ್ ಬಜಾರ್, ಸಿಟಿ ಬಸ್ ನಿಲ್ದಾಣ, ಕೊಪ್ಪಿಕರ ರಸ್ತೆ, ಶಿವಾಜಿ ರಸ್ತೆ, ಸ್ಟೇಷನ್ ರಸ್ತೆ, ಬ್ರಾಡ್‌ವೇ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಿವೆ.

ಜತೆಗೆ, ಹಿಂದೂ ದೇವಾಲಯಗಳು ಹಾಗೂ ಮುಸಲ್ಮಾನರ ಮಸೀದಿಗಳು ಇರುವ ಈ ಜಾಗ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೇಶವಕುಂಜದಲ್ಲಿ ಸಿಹಿ ಹಂಚಿಕೆ, ರಾಮಮಂದಿರದಲ್ಲಿ ಪೂಜೆ

ಹುಬ್ಬಳ್ಳಿ: ಆಯೋಧ್ಯೆ ತೀರ್ಪು ಪ್ರಕಟವಾದ ಬಳಿಕ ನಗರದ ಆರ್‌ಎಸ್‌ಎಸ್‌ ಕಚೇರಿ ಕೇಶವಕುಂಜದಲ್ಲಿ ಸ್ವಯಂ ಸೇವಕರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿ ’ಜೈ ಶ್ರೀರಾಮ್‌..‘ ಎಂದು ಕೂಗಿದರು.

ನಗರದ ಕಮರಿಪೇಟೆಯಲ್ಲಿ ಎಸ್‌ಎಸ್‌ಕೆ ಸಮಾಜದವರು ಹಾಗೂ ಬಿಜೆಪಿ ಕಾರ್ಯಕರ್ತರು ರಾಮಮಂದಿರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರಸ್ಪರ ಸಿಹಿ ಹಂಚಿಕೊಂಡು ಖುಷಿಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಶಿವು ಮೆಣಸಿನಕಾಯಿ, ರಂಗಾ ಬದ್ದಿ, ವೀರಭದ್ರಪ್ಪ ಹಾಲಹರವಿ, ಉಮೇಶ ದೂಷಿ, ಶಿವಾನಂದ ಭಟ್, ಜಿ.ವಿ. ಪ್ರಶಾಂತ ಬದ್ದಿ, ಆರ್‌ಎಸ್‌ಎಸ್‌ ಉತ್ತರ ಕರ್ನಾಟಕ ಜಂಟಿ ಕಾರ್ಯದರ್ಶಿ ಶ್ರೀಧರ ನಾಡಗೇರ, ಮಹೇಶ ಟೆಂಗಿನಕಾಯಿ, ಡಿ.ಕೆ. ಚವ್ಹಾಣ, ರಾಜು ಜರತಾರಘರ, ರಾಜು ಕೊರವಿನಮಠ, ಸಂತೋಷ ಚವ್ಹಾಣ, ವಿಠ್ಠಲ ಲಡವಾ, ಜಯತೀರ್ಥ ಕಟ್ಟಿ, ಪ್ರವೀಣ ಪವಾರ್‌, ಸುಧೀರ ಸರಾಫ್‌, ಸಂಜು ಬಡಸ್ಕರ, ಪಂಚ ಕಮಿಟಿ ಅಧ್ಯಕ್ಷ ಮೋತಿಲಾಲ್‌ ಕಬಾಡಿ, ಗಜಾನನ ಕಾಟವೆ ಇದ್ದರು.

ಪ್ರತಿಕ್ರಿಯಿಸಿ (+)