ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಪ್ಪನ ಸ್ಫೂರ್ತಿ; ಮಗಳ ಕ್ರಿಕೆಟ್‌ ಪ್ರೀತಿ

ಕರ್ನಾಟಕ ಸೀನಿಯರ್‌ ಮಹಿಳಾ ತಂಡಕ್ಕೆ ಧಾರವಾಡದ ಅಶ್ಮೇರಾಬಾನು
Last Updated 22 ಅಕ್ಟೋಬರ್ 2021, 5:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಾಲ್ಕು ವರ್ಷಗಳ ಹಿಂದೆಯಷ್ಟೇ ವೃತ್ತಿಪರ ಕ್ರಿಕೆಟ್‌ ತರಬೇತಿ ಪಡೆಯಲು ಆರಂಭಿಸಿದ ಧಾರವಾಡದ ಅಶ್ಮೇರಾಬಾನು ಕಣಕಿ, ಈಗ ಬಿಸಿಸಿಐ ಆಯೋಜಿಸಿರುವ ಟೂರ್ನಿಯಲ್ಲಿ ಆಡಲು ಕರ್ನಾಟಕ ಸೀನಿಯರ್‌ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರ ಹಿಂದೆ ಅವರ ತಂದೆಯ ಸ್ಫೂರ್ತಿಯಿದೆ.

ಅಶ್ಮೇರಾ ನಿತ್ಯ ಬೆಳಗಿನ ಜಾವ ಮೂರು ತಾಸು ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿಯಲ್ಲಿ (ವಿಎಂಸಿಎ) ತರಬೇತಿ ಪಡೆಯುತ್ತಾರೆ. ಸಂಜೆ ಹುಬ್ಬಳ್ಳಿ ಹೊರವಲಯದ ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿಗೆ (ಟಿಎಸ್‌ಸಿಎ) ಬರುತ್ತಾರೆ. ಮಗಳು ಎಲ್ಲಿಯೇ ಹೋದರೂ ಆಕೆಯನ್ನು ಅಕಾಡೆಮಿಗೆ ಕರೆದುಕೊಂಡು ಹೋಗುವುದು ಹಾಗೂ ವಾಪಸ್‌ ಕರೆತರುವುದನ್ನು ಅಪ್ಪನ ಕೆಲಸ. ಮಗಳ ಸಾಧನೆಯ ಕನಸಿನ ಮೂಟೆ ಹೊತ್ತು ನಿತ್ಯ ಈ ಪ್ರಯಾಣ ಮಾಡುತ್ತಾರೆ.

ಬಲಗೈ ಮಧ್ಯಮ ವೇಗದ ಬೌಲರ್‌ ಹಾಗೂ ಅತ್ಯುತ್ತಮ ಫೀಲ್ಡರ್ ಆಗಿರುವ ಅಶ್ಮೇರಾಬಾನು ಮೊದಲ ಎರಡು ವರ್ಷ ವಿಎಂಸಿಎ ಮತ್ತು ಈಗ ಎರಡು ವರ್ಷಗಳಿಂದಟಿಎಸ್‌ಸಿಎಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅಶ್ಮೇರಾಬಾನು ಹೋದ ವರ್ಷ19 ವರ್ಷದ ಒಳಗಿನವರ ಅಂತರ ರಾಜ್ಯ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದರು. ಧಾರವಾಡದ ಅಂಜುಮನ್‌ ಶಾಲೆಯಲ್ಲಿ ಹೈಸ್ಕೂಲಿನ ತನಕ ಓದಿ, ಪಿಯಸಿ ಕೆ.ಇ. ಬೋರ್ಡ್‌ ಕಾಲೇಜಿನಲ್ಲಿ ಓದಿದ್ದಾರೆ. ಈಗ ಅಂಜುಮನ್‌ ಕಾಲೇಜಿನಲ್ಲಿ ಬಿ.ಕಾಂ. ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ರಫೀಕ್‌ ಕಣಕಿ ಹಾಗೂ ನಸೀಮಾ ಬಾನು ದಂಪತಿಯ ಪುತ್ರಿ.

ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಫೀಕ್‌ ಕಣಕಿ ‘ಮಗಳು ರಾಜ್ಯ ಸೀನಿಯರ್‌ ತಂಡದಲ್ಲಿ ಅವಕಾಶ ಪಡೆದಿದ್ದರಿಂದ ಬಹಳಷ್ಟು ಸಂತೋಷವಾಗಿದೆ. ಅವಳು ಭಾರತ ತಂಡದಲ್ಲಿ ಆಡಬೇಕು ಎನ್ನುವ ಗುರಿ ನನ್ನದು. ಅದಕ್ಕೆ ಈಗಿನ ಅವಕಾಶ ದೊಡ್ಡ ವೇದಿಕೆಯಾಗಿದೆ’ ಎಂದರು.

ವಿಎಂಸಿಎ ತಂಡದ ಮುಖ್ಯಸ್ಥ ವಸಂತ ಮುರ್ಡೇಶ್ವರ ‘ಅಶ್ಮೇರಾ ಕಠಿಣ ಪರಿಶ್ರಮ ಮತ್ತು ಬದ್ಧತೆಗೆ ಸಿಕ್ಕ ಅವಕಾಶವಿದು. 1996ರಲ್ಲಿ ಆನಂದ ಕಟ್ಟಿ ರಣಜಿ ಟ್ರೋಫಿ ಆಡಿದ ಮೊದಲ ಧಾರವಾಡದ ಆಟಗಾರ ಎನಿಸಿಕೊಂಡಾಗ ಎಷ್ಟು ಖುಷಿಯಾಗಿತ್ತೋ; ಈಗ ಅಶ್ಮೇರಾ ಮಹಿಳಾ ಸೀನಿಯರ್‌ ತಂಡಕ್ಕೆ ಆಯ್ಕೆಯಾದಾಗಲೂ ಅಷ್ಟೇ ಖುಷಿಯಾಗಿದೆ’ ಎಂದರು.

ಅ. 31ರಿಂದ ನಾಗಪುರದಲ್ಲಿ ನಡೆಯಲಿರುವ ಕ್ರಿಕೆಟ್‌ ಟೂರ್ನಿಸೀನಿಯರ್‌ ತಂಡಕ್ಕೆ ಆಯ್ಕೆಯಾದ ಧಾರವಾಡ ವಲಯದ ಏಕೈಕ ಆಟಗಾರ್ತಿಮಧ್ಯಮ ವೇಗದ ಬೌಲರ್‌ ಆಗಿರುವ ಅಶ್ಮೇರಾಬಾನು, ಭಾರತ ತಂಡದಲ್ಲಿ ಆಡುವ ಆಸೆಯಿದೆ. ಈಗ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಸಾಮರ್ಥ್ಯ ತೋರಿಸುವೆ.

- ಅಶ್ಮೇರಾಬಾನು ಕಣಕಿ, ಧಾರವಾಡದ ಕ್ರಿಕೆಟ್‌ ಆಟಗಾರ್ತಿ

***

ಅಶ್ಮೇರಾ ಚೆಂಡು ವೇಗವಾಗಿ ಎಸೆಯುವ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದಾಳೆ. ಭವಿಷ್ಯದಲ್ಲಿ ಉತ್ತಮ ಆಲ್‌ರೌಂಡರ್‌ ಆಗಿ ಬೆಳೆಯಬಲ್ಲಳು.

- ಸೋಮಶೇಖರ ಶಿರಗುಪ್ಪಿ, ಟಿಎಸ್‌ಸಿಎ ಕೋಚ್‌

***

ರಾಷ್ಟ್ರೀಯ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನಾಯಕತ್ವದ ರಾಜ್ಯ ತಂಡಕ್ಕೆ ಅಶ್ಮೇರಾ ಆಯ್ಕೆಯಾಗಿದ್ದು ಧಾರವಾಡ ವಲಯದ ಯುವ ಆಟಗಾರ್ತಿಯರಿಗೆ ಸ್ಫೂರ್ತಿ.

-ವೀರಣ್ಣ ಸವಡಿ,ಕೆಎಸ್‌ಸಿಎ ಧಾರವಾಡ ವಲಯ ಚೇರ್ಮನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT