ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸಾರ್ವಜನಿಕರ ಅಹವಾಲು ಆಲಿಸಿದ ಡಿ.ಸಿ

ಹುಬ್ಬಳ್ಳಿಯಲ್ಲಿ ಮೊದಲ ಬಾರಿ ಸಭೆ; ಸಮಸ್ಯೆ ಹೇಳಿಕೊಂಡ ನಗರ, ಗ್ರಾಮೀಣ ಭಾಗದ ಜನ
Published 12 ಜೂನ್ 2024, 16:00 IST
Last Updated 12 ಜೂನ್ 2024, 16:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಇಲ್ಲಿನ ಮಿನಿವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮೊದಲ ಬಾರಿಗೆ ಸಾರ್ವಜನಿಕರ ಅಹವಾಲು ಆಲಿಸಿದರು. ನಗರದ ಸೇರಿದಂತೆ ಗ್ರಾಮೀಣ ಭಾಗದಿಂದ ಬಂದಿದ್ದ ಜನ ತಮ್ಮ ಸಮಸ್ಯೆ ಹೇಳಿಕೊಂಡರು.

ಜಿಲ್ಲಾಧಿಕಾರಿ ಅವರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರೆ, ಇನ್ನೂ ಕೆಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಡಿ.ಸಿ ಸೂಚಿಸಿದರು.

‘ಹುಬ್ಬಳ್ಳಿ ಶಹರ ತಹಶೀಲ್ದಾರ್ ಕಚೇರಿಯ ಪಡಸಾಲೆ 7ರಲ್ಲಿ ಸಾರ್ವಜನಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ಇತರ ದಾಖಲಾತಿ ಪಡೆಯಲು ಅರ್ಜಿ ಸಲ್ಲಿಕೆಗೆ 2 ಕೌಂಟರ್‌ಗಳಿದ್ದವು. ಈಗ ಒಂದೇ ಕೌಂಟರ್ ಇದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಶ್ರೀಧರ ಕಂದಗಲ್ ಹೇಳಿದರು.

‘ಕೌಂಟರ್ ಕಡಿಮೆ ಮಾಡಿರುವುದರಿಂದ ಜನರು ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಮಕ್ಕಳ ಶಾಲಾ ದಾಖಲಾತಿಗಾಗಿ ಪ್ರಮಾಣಪತ್ರ ಪಡೆಯಲು ತೊಂದರೆಯಾಗುತ್ತಿದೆ. ಸಮಸ್ಯೆ ಪರಿಹರಿಸಬೇಕು’ ಎಂದು ಮನವಿ ಮಾಡಿದರು.

‘ಹೊರಗುತ್ತಿಗೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಐದು ತಿಂಗಳಿಂದ ವೇತನ ನೀಡದೇ ವಂಚನೆ ಮಾಡಲಾಗುತ್ತಿದೆ. ಜನತಾ ಬಜಾರ್‌ನ ಮಾರ್ಕೆಟ್‌ ವಿಭಾಗದಲ್ಲಿ 2014ರಿಂದ ಕಾರ್ಯನಿರ್ವಹಿಸುತ್ತಿದ್ದರೂ ಎರಡು ವರ್ಷಗಳಿಂದ ಕೆಲಸಕ್ಕೆ ಬಂದಿಲ್ಲ ಎಂದು ಸುಳ್ಳು ಹೇಳಿ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಅಣ್ಣಪ್ಪ ಕಡಪಟ್ಟಿ ದೂರಿದರು.

ಪರಶುರಾಮ ಕಂಠಿ ಮನವಿ ಸಲ್ಲಿಸಿ, ‘ನನ್ನ ಪತ್ನಿ ಪಲ್ಲವಿ ಮತ್ತು ಮುಂಡಗೋಡ ತಾಲ್ಲೂಕಿನ ಶಿಲ್ಪಾ ಎಂಬುವರಿಗೆ ಒಂದೇ ಆಧಾರ್ ಸಂಖ್ಯೆ ನೀಡಲಾಗಿದೆ. 2012ರಿಂದ ಇದನ್ನು ಸರಿಪಡಿಸುವಂತೆ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಜನತಾ ಬಜಾರ್‌ ಕಟ್ಟಡ ಕಾಮಗಾರಿ ಮುಗಿದು ವರ್ಷ ಕಳೆದರೂ ಮಳಿಗೆ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ’ ಎಂದು ಜನತಾ ಬಜಾರ್‌ ಸೂಪರ್ ಮಾರ್ಕೆಟ್‌ ಸಂಘದ ಸದಸ್ಯ ಸಿದ್ದಲಿಂಗೇಶ ಬಟ್ಟೂರ ಹೇಳಿದರು.

‘ನಗರದ ಗದಗ ರಸ್ತೆಯ ಕನ್ಯಾನಗರದ ಪರಿಶಿಷ್ಟರ ಕೇರಿಯಲ್ಲಿ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಅವರು ಪರಿಶಿಷ್ಟ ಕಾಲೊನಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ನಿವಾಸಿ ವಿಜಯ ಕರ್ರಾ ಮನವಿ ಮಾಡಿದರು.

‘ಹಳೆ ಹುಬ್ಬಳ್ಳಿಯ ಸದಾಶಿವನಗರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಈ ಬಗ್ಗೆ ದಾಖಲೆ ಸಹಿತ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿ ಹುಸೇನಭಾಶಾ ತಳೆವಾಡ ದೂರಿದರು.

‘ಉಣಕಲ್– ಗೋಪನಕೊಪ್ಪ ಮುಖ್ಯ ರಸ್ತೆಯಲ್ಲಿ ವಸುಂಧರಾ ಫೌಂಡೇಶನ್‌ನಿಂದ 150ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಕೆಲವು ಡಬ್ಬಾ ಅಂಗಡಿಯವರು ಗಿಡಗಗಳನ್ನು ಕತ್ತರಿಸುತ್ತಿದ್ದಾರೆ. ಅಲ್ಲದೆ, ಕಸಕ್ಕೆ ಬೆಂಕಿ ಹಚ್ಚಿ ಗಿಡಗಳಿಗೆ ಹಾನಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಫೌಂಡೇಶನ್‌ನ ಮೇಘರಾಜ ಕೆರೂರ ಮನವಿ ಮಾಡಿದರು.

ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಕಲಗೌಡ ಪಾಟೀಲ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ ಹಾಗೂ ಅಧಿಕಾರಿಗಳು ಇದ್ದರು.

Quote - ಹುಬ್ಬಳ್ಳಿಯ ತಹಶೀಲ್ದಾರ್ ಕಚೇರಿಯಲ್ಲಿ ವಾರಕ್ಕೊಮ್ಮೆ ಸಾರ್ವಜನಿಕರ ಅಹವಾಲು ಆಲಿಕೆ ಸಭೆ ನಡೆಸಿ ಜನರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು -ದಿವ್ಯಾಪ್ರಭು ಜಿಲ್ಲಾಧಿಕಾರಿ

Cut-off box - 54 ಅರ್ಜಿಗಳು ಸ್ವೀಕೃತ ಹುಬ್ಬಳ್ಳಿ: ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ 54 ಅರ್ಜಿಗಳು ಸ್ವೀಕೃತಗೊಂಡಿವೆ. ಅವುಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ‘37 ಅರ್ಜಿಗಳು ಹುಬ್ಬಳ್ಳಿ ನಗರಕ್ಕೆ ಸಂಬಂಧಪಟ್ಟಿದ್ದು 12 ಅರ್ಜಿಗಳು ಗ್ರಾಮಿಣ ಭಾಗಕ್ಕೆ ಸಂಬಂಧಿಸಿವೆ.  ಉಳಿದ 5 ಅರ್ಜಿಗಳು ತಾಲ್ಲೂಕುಗಳಿಂದ ಸಲ್ಲಿಕೆಯಾಗಿವೆ. ಒಟ್ಟು ಅರ್ಜಿಗಳಲ್ಲಿ 20 ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ದುರಸ್ತಿ ಮನೆ ನಿರ್ಮಾಣ ಕೊಳೆಗೇರಿ ಅಭಿವೃದ್ಧಿ ಮೂಲಸೌಕರ್ಯ ಪಿಂಚಣಿ ಆಧಾರ್‌ಗೆ ಸಂಬಂಧಿಸಿವೆ’ ಎಂದರು. ಸಾರ್ವಜನಿಕರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದರೆ ಅಂತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT