ಮಂಗಳವಾರ, ಅಕ್ಟೋಬರ್ 20, 2020
26 °C
ಕಾರ್ಯಾಚರಣೆಗೆ ಇಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಮಾಸ್ಕ್ ಧರಿಸದವರಿಗೆ ದಂಡ; ಹಣವಿಲ್ಲದವರಿಗೆ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಕೋವಿಡ್–19 ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅವರು ಮಂಗಳವಾರ ಮಾರುಕಟ್ಟೆ ಪ್ರದೇಶದಲ್ಲಿ ಓಡಾಡಿ, ಮಾಸ್ಕ್, ಅಂತರ ಕಾಪಾಡುವಿಕೆ ಹಾಗೂ ಕೈತೊಳೆಯುವುದರ ಮಹತ್ವ ತಿಳಿಸಿದರು.

ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸಿದ ಜಿಲ್ಲಾಧಿಕಾರಿ, ಹಣ ಇಲ್ಲದವರಿಗೆ ಸ್ಥಳದಲ್ಲೇ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿದರು. ನಗರದ ಸಿಬಿಟಿ, ಅಕ್ಕಿಪೇಟೆ, ಸುಭಾಸರಸ್ತೆ, ಗಾಂಧಿಚೌಕ, ವಿವೇಕಾನಂದ ವೃತ್ತ ಹಾಗೂ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸಿದೆ ಓಡಾಡುತ್ತಿದ್ದವರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಿದರು.

ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ವಾಹನ ಸವಾರರು, ಆಟೊ, ಮ್ಯಾಕ್ಸಿ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರನ್ನು ಸಂಚಾರಿ ಸ್ವಾಬ್ ಸಂಗ್ರಹಣಾ ಕೇಂದ್ರಕ್ಕೆ ಕರೆತಂದು ತಪಾಸಣೆ ನಡೆಸಲಾಯಿತು. 

ಜಿಲ್ಲಾಧಿಕಾರಿಯೊಂದಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಬಿ.ಸಿ.ಸತೀಶ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ ಕಾರ್ಯಾಚರಣೆಯಲ್ಲಿ ಜತೆಯಾದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ಕೋವಿಡ್ ನಿಯಂತ್ರಣ ಜಾಗೃತಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿದಿನ ಮಾಸ್ಕ್ ಧರಿಸದ ಸುಮಾರು 500 ರಿಂದ 600 ಜನರಿಗೆ ದಂಡ ವಿಧಿಸಲಾಗುತ್ತಿದೆ. ಈವರೆಗೂ ಸುಮಾರು ₹35 ಲಕ್ಷಕ್ಕೂ ಅಧಿಕ ದಂಡ ಸಂಗ್ರಹವಾಗಿದೆ. ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ವರೆಗೂ ಮಾಸ್ಕ್ ಬಳಕೆಯೇ ಲಸಿಕೆ ಎಂದು ತಿಳಿದುಕೊಳ್ಳಬೇಕು. ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಲ್ಲಿ ಕಂಡು ಬರುತ್ತಿರುವ ಕಾಲುಬಾಯಿ ರೋಗದ ಸೋಂಕು ನಿಯಂತ್ರಿಸಲು ಲಸಿಕೆ ಹಾಕಲಾಗುತ್ತಿದೆ’ ಎಂದರು.

ಎಸಿಪಿ ಜಿ.ಅನುಷಾ, ತಹಶೀಲ್ದಾರ್‌ ಡಾ.ಸಂತೋಷ ಬಿರಾದಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ, ಪಾಲಿಕೆಯ ವಲಯ ಸಹಾಯಕ ಆಯುಕ್ತ ಶ್ರೀನಿವಾಸ ಶಾಸ್ತ್ರಿ, ಆರ್.ಎಚ್.ಕುಲಕರ್ಣಿ, ಸರೋಜಾ ಪೂಜಾರ, ಮಹಾಂತೇಶ ಮ್ಯಾಗೇರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು