ಲೋಕಾಯುಕ್ತ ತನಿಖೆಗೆ ವಹಿಸಲು ನಿರ್ಧಾರ

7
ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಠರಾವು

ಲೋಕಾಯುಕ್ತ ತನಿಖೆಗೆ ವಹಿಸಲು ನಿರ್ಧಾರ

Published:
Updated:
Deccan Herald

ಧಾರವಾಡ: ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಎಫ್‌.ಸಿ. ಡುಮ್ಮಗೋಳ ಅವರು ಕೆಲಸ ನಿರ್ವಹಣೆಯಲ್ಲಿ ಆಸಕ್ತಿ ತೋರದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಇವರ ವಿರುದ್ಧ ಲೋಕಾಯುಕ್ತ ತನಿಖೆಗೆ ಸೂಚಿಸಲು ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಸಭೆ ನಿರ್ಣಯ ತೆಗೆದುಕೊಂಡಿತು.

‘26 ತಿಂಗಳುಗಳಿಂದ ಆರೋಗ್ಯ ಸಮಸ್ಯೆ ಹೇಳಿಕೊಂಡು ಸಭೆಗೆ ಹಾಜರಾಗದೆ ಕಾಲಹರಣ ಮಾಡುತ್ತಿರುವ ಡುಮ್ಮಗೋಳ ಅವರು, ಇಲಾಖೆಯ ಪೂರ್ಣ ಮಾಹಿತಿಯಿಲ್ಲದೆ ಹಾಜರಾಗಿದ್ದಾರೆ. ಏನೇ ಕೇಳಿದರೂ ಆರೋಗ್ಯ ಸರಿ ಇಲ್ಲ ಎಂಬ ನೆಪವೊಡ್ಡುತ್ತಾರೆ. ಕಳೆದ ಸಭೆಯಲ್ಲಿ ನೀಡಿದ ನೋಟಿಸ್‌ಗೆ ಈ ಸಭೆಯಲ್ಲಿ ಉತ್ತರ ನೀಡಿದ್ದಾರೆ. ಇವೆಲ್ಲವೂ ಕರ್ತವ್ಯಲೋಪವಾಗಿದೆ. ಇವರ ವಿರುದ್ಧ ತನಿಖೆ ನಡೆಸುವುದು ಅನಿವಾರ್ಯ’ ಎಂದು ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಹೇಳಿದರು.

ಹೆದ್ದಾರಿ ಪಕ್ಕದಲ್ಲಿ ನೆಟ್ಟಿರುವ ಸಸಿಗಳ ವಿವರ ನೀಡಿ. ಹಾಗೆಯೇ ಕಳೆದ ತಿಂಗಳು ಕೇಳದ ಪ್ರಶ್ನೆಗೂ ಉತ್ತರಿಸುವಂತೆ ಮಹಾವೀರ ದೇಸಾಯಿ ಹಾಗ ಈರಪ್ಪ ಏಣಗಿ ಆಗ್ರಹಿಸಿದರು.

‘ಸಸಿ ನೆಟ್ಟ ಕೂಲಿಕಾರರಿಗೆ ಇನ್ನೂ ಕೂಲಿ ನೀಡಿಲ್ಲ. ಕರೆ ಮಾಡಿದರೆ ನೀವ್ಯಾರು ಎನ್ನುತ್ತೀರಿ. ನಿಮ್ಮ ನಿಷ್ಕಾಳಜಿಯ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ಹಾಗೂ ಅರಣ್ಯ ಇಲಾಖೆ ಸಚಿವರಿಗೆ ದೂರು ನೀಡಲಾಗುವುದು’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಪ್ರಕಾಶ ಕುದರಿ ಅವರು ಗೈರು ಆಗಿರುವುದಕ್ಕೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಸಲ ತಹಶೀಲ್ದಾರ್‌ರಿಗೆ ಸಭೆಗೆ ಬರುವಂತೆ ಹೇಳಿ ಸಾಕಾಗಿದೆ. ಅವರಿಂದ ಸ್ಪಂದನೆ ಸಿಗುತ್ತಿಲ್ಲ. ಆಹಾರ ಇಲಾಖೆಯ ಸಮಸ್ಯೆಗಳು ಸಾಕಷ್ಟಿವೆ. ಈ ಸಲವೂ ಸಭೆಗೆ ಬಾರದೇ ತಮ್ಮ ಪರವಾಗಿ ಅಧಿಕಾರಿ ಕಳುಹಿಸಿ ಸಭೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸಭೆಯಲ್ಲಿ ಠರಾವು ಪಾಸ್ ಮಾಡುವಂತೆ ಸದಸ್ಯರ ಒತ್ತಾಯದ ಮೇರೆಗೆ ಅಧ್ಯಕ್ಷರು, ತಾಲ್ಲೂಕು ಪಂಚಾಯ್ತಿ ಇಒ ಸಮೀರ್ ಮುಲ್ಲಾ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ, 27 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗಿದೆ. 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಇನ್ನೂ ಸಮವಸ್ತ್ರ ಬಂದಿಲ್ಲ. ಬಂದ ತಕ್ಷಣ ವಿತರಿಸಲಾಗುವುದು ಎಂದರು

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಮುತ್ತಣ್ಣ ನಾಯ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪಕೀರಪ್ಪ ಬುಡ್ಡಿಕಾಯಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !