ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬ: ಮೇಯರ್‌ ಆಕ್ರೋಶ

ಬಿಡ್ನಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಪೌರಕಾರ್ಮಿಕರ ಮನೆ; ಪರಿಶೀಲನೆ
Last Updated 8 ಆಗಸ್ಟ್ 2022, 16:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಡ್ನಾಳದಲ್ಲಿ ಪೌರ ಕಾರ್ಮಿಕರಿಗೆ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಕೇವಲ ಶೇ 15ರಷ್ಟು ಕಾಮಗಾರಿ ಮುಗಿದಿದೆ. ಇಷ್ಟೊಂದು ನಿಧಾನಗತಿಯಲ್ಲಿ ಕಾಮಗಾರಿ ನಡೆದಿರುವುದು ನಾಚಿಕೆಗೇಡು. ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಮೇಯರ್‌ ಈರೇಶ ಅಂಚಟಗೇರಿ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

‘2017ರಿಂದಲೇ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ವಿಳಂಬವಾದಷ್ಟು ಪೌರ ಕಾರ್ಮಿಕರಿಗೆ ಅವುಗಳನ್ನು ಹಂಚಿಕೆ ಮಾಡುವುದು ವಿಳಂಬವಾಗುತ್ತದೆ. ಈಗಾಗಲೇ ಕೆಲವು ಕಾರ್ಮಿಕರು ನಿವೃತ್ತಿಯಾಗಿದ್ದರೆ, ಕೆಲವರು ಮೃತಪಟ್ಟಿದ್ದಾರೆ. ಗುತ್ತಿಗೆದಾರರು ಕೋವಿಡ್, ಮಳೆ ಕಾರಣ ಹೇಳುತ್ತ ಕಾಮಗಾರಿ ಮುಂದೂಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಂದಿನ ಅಕ್ಟೋಬರ್‌ ಒಳಗೆ ಶೇ 25ರಷ್ಟು ಕಾಮಗಾರಿ ಮುಗಿಯಬೇಕು. ಒಂದು ಜೆಸಿಬಿ, ನಾಲ್ಕು ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸಿದರೆ ಮನೆಗಳು ಪೂರ್ಣಗೊಳ್ಳುವುದಿಲ್ಲ. ಆ. 17ರಂದು ಸಂಜೆ 4ಕ್ಕೆ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಅದಕ್ಕೂ ಗುತ್ತಿಗೆದಾರರು ಸ್ಪಂದಿಸದಿದ್ದರೆ, ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘₹26 ಕೋಟಿ ವೆಚ್ಚದಲ್ಲಿ 320 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಪಾಲಿಕೆಯಿಂದ ₹80 ಲಕ್ಷ ಮಂಜೂರು ಮಾಡಲಾಗಿದೆ. ಕಳಪೆ ಕಾಮಗಾರಿ ನಡೆದರೆ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನೂತನ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಬೇಕು. ಸಮೀಪದಲ್ಲಿ ನೀರಿನ ಟ್ಯಾಂಕ್ ಇದ್ದರೆ ಎಲ್ ಆ್ಯಂಡ್ ಟಿ ಕಂಪನಿಯವರಿಗೆ ತಿಳಿಸಿ ಸಂಪರ್ಕ ಕಲ್ಪಿಸಬೇಕು’ ಎಂದು ತಿಳಿಸಿದರು.

ಉಪಮೇಯರ್‌ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ದೋರಾಜ್‌ ಮಣಿಕುಂಟ್ಲಾ, ನಿರಂಜನಯ್ಯ ಹಿರೇಮಠ, ಪೌರ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಗಂಗಾಧರ ಟಗರಗುಂಟಿ, ಬಿ.ಬಿ. ಕೆಂಪಣ್ಣವರ, ವೆಂಕಟೇಶ ಟಗರಗುಂಟಿ, ಎಂಜಿನಿಯರ್‌ ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT