ಶುಕ್ರವಾರ, ಏಪ್ರಿಲ್ 16, 2021
31 °C

ಉತ್ತರ ಕರ್ನಾಟಕದಲ್ಲಿ ಸಿಜಿಎಚ್‌ಎಸ್‌ ಆಸ್ಪತ್ರೆ ತೆರೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿಕೇಂದ್ರ ಸರ್ಕಾರದ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಅನುಕೂಲವಾಗುವಂತೆ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳನ್ನು (ಸಿಜಿಎಚ್‌ಎಸ್‌) ಒದಗಿಸುವ ಆಸ್ಪತ್ರೆ ಅಥವಾ ಕ್ಷೇಮ ಕೇಂದ್ರಗಳನ್ನು ತೆರೆಯಬೇಕು’ ಎಂದು ಉತ್ತರ ಕರ್ನಾಟಕ ಸಿಜಿಎಚ್‌ಎಸ್‌ ಫಲಾನುಭವಿಗಳ ಸಂಘದ ಅಧ್ಯಕ್ಷ ಯು.ಜಿ. ಮೊಕಾಶಿ ಒತ್ತಾಯಿಸಿದರು.

‘ಈ ಭಾಗದಲ್ಲಿರುವ 14 ಜಿಲ್ಲೆಗಳಲ್ಲಿ ಅಂಚೆ ಇಲಾಖೆ, ಬಿಎಸ್‌ಎನ್‌ಎಲ್, ಆದಾಯ ತೆರಿಗೆ ಇಲಾಖೆ, ಕೇಂದ್ರ ಸುಂಕ ವಸೂಲಾತಿ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 60 ಸಾವಿರ ನೌಕರರಿದ್ದಾರೆ. ಆದರೆ, ಸಿಜಿಎಚ್‌ಎಸ್‌ ಕೇಂದ್ರ ಇಲ್ಲ. ರಾಜಧಾನಿ ಬೆಂಗಳೂರಿನಲ್ಲೇ 10 ಕೇಂದ್ರಗಳು ಕೇಂದ್ರಿಕೃತವಾಗಿವೆ. ಆರೋಗ್ಯ ಸಮಸ್ಯೆ ಎದುರಾದಾಗ, ನೌಕರರು ಹಾಗೂ ಪಿಂಚಣಿದಾರರು ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಹುಬ್ಬಳ್ಳಿಯಲ್ಲಿ ಸಿಜಿಎಚ್‌ಎಸ್ ಕ್ಷೇಮ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಜೋಶಿ ಪತ್ರ ಬರೆದರು. ಬಳಿಕ, ಯಾವುದೇ ಪ್ರಕ್ರಿಯೆ ನಡೆದಿಲ್ಲ. ಆರ್‌ಟಿಐನಡಿ ಪಡೆದ ಮಾಹಿತಿ ಪ್ರಕಾರ, ಇಲ್ಲಿ ಕೇಂದ್ರ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸರ್ಕಾರ ತಿಳಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಜೋಶಿ ಮಾತನಾಡಿ, ‘ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯದಲ್ಲಿ 10–13 ಕೇಂದ್ರಗಳಿದ್ದು, ಒಂದೇ ಕಡೆ ಕೇಂದ್ರಿಕೃತವಾಗಿರದೆ ವಿವಿಧ ಜಿಲ್ಲೆಗಳಲ್ಲಿ ಸ್ಥಾಪನೆಯಾಗಿವೆ. ಆದರೆ, ಕರ್ನಾಟಕದಲ್ಲಿ ಮಾತ್ರ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ಒಂದು ಕೇಂದ್ರ ಸ್ಥಾಪಿಸಬೇಕು ಎಂದು ಆರೋಗ್ಯ ಇಲಾಖೆ, ಹಣಕಾಸು ಸಚಿವರಿಗೆ ಪ್ರಸ್ತಾವ ಕಳಿಸಿದೆ. ಅಂತಿಮ ಆದೇಶ ಇನ್ನೂ ಹೊರ ಬಿದ್ದಿಲ್ಲ’ ಎಂದರು.

‘ಸಾವಿರಾರು ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಅನುಕೂಲವಾಗುವ ಸಿಜಿಎಚ್‌ಎಸ್ ಆಸ್ಪತ್ರೆ ಅಥವಾ ಕ್ಷೇಮ ಕೇಂದ್ರವನ್ನು ಉತ್ತರ ಕರ್ನಾಟಕದಲ್ಲಿ ತೆರೆಯಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಂಘದ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಘದ ಬಿ.ಎಂ. ದೊಡ್ಡಮನಿ, ಜಿ.ಪಿ. ಶಿವಣ್ಣ, ಶ್ರೀಧರ ಪವಾರ, ಚೇತನ್ ನಾಯಕ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು