ಪತ್ನಿ ಸಾವಿಗೆ ನ್ಯಾಯ ನೀಡುವಂತೆ ಧರಣಿ ಸತ್ಯಾಗ್ರಹ

7

ಪತ್ನಿ ಸಾವಿಗೆ ನ್ಯಾಯ ನೀಡುವಂತೆ ಧರಣಿ ಸತ್ಯಾಗ್ರಹ

Published:
Updated:

ಧಾರವಾಡ: ‘ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ನ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತನ್ನ ಪತ್ನಿ ಮೃತಪಟ್ಟಿದ್ದು, ಈ ಸಾವಿಗೆ ನ್ಯಾಯ ನೀಡುವಂತೆ ಧರಣಿ ಸತ್ಯಾಗ್ರಹ ನಡೆಸುತ್ತೇನೆ’ ಎಂದು ಅಳ್ನಾವರ ಇಂದಿರಾನಗರದ ನಿವಾಸಿ ಪ್ರಶಾಂತ ಪವಾರ ಎಚ್ಚರಿಕೆ ನೀಡಿದರು.

‘ನನ್ನ ಇಬ್ಬರು ಮಕ್ಕಳೊಂದಿಗೆ ಆ.12ರಿಂದ ಜಿಲ್ಲಾಸ್ಪತ್ರೆಯ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದೇನೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ವರ್ಷ 2017ರ ಆ.11 ರಂದು ನನ್ನ ಪತ್ನಿ ಅಶ್ವಿನಿಯನ್ನು (24) ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಳೆದುಕೊಂಡಿದ್ದೇನೆ. ತನ್ನ ತವರು ಮನೆಯಲ್ಲಿ ಇದ್ದಾಗ ವಾಂತಿ, ಜ್ವರ ಕಾಣಿಸಿಕೊಂಡ ಪರಿಣಾಮ ಆ.10 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 14 ಗಂಟೆ ಇಟ್ಟುಕೊಂಡರೂ, ಸೂಕ್ತ ಚಿಕಿತ್ಸೆ ನೀಡದ ಕಾರಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ನಂತರ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದರೂ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಧರಣಿ ಕೈಗೊಳ್ಳಲು ಅವಕಾಶ ನೀಡದೇ ಸತಾಯಿಸುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಿವೆ. ಇಷ್ಟಾದರೂ ಜಿಲ್ಲಾಸ್ಪತ್ರೆಯ ಎದುರು ಧರಣಿ ನಡೆಸುತ್ತೇನೆ. ಆ.12, 13 ಹಾಗೂ 14ರಂದು ಧರಣಿ ಕೈಗೊಂಡು ನಂತರ ಆ.15 ರಂದು ಅಳ್ನಾವರ ತಾಲ್ಲೂಕು ಕಚೇರಿ ಎದುರು ಧರಣಿ ಕೈಗೊಳ್ಳುವೆ. ಜಿಲ್ಲಾಸ್ಪತ್ರೆಯ ಎದುರು ಪತ್ನಿಯ ತವರು ಮನೆಯವರು ಧರಣಿ ಮುಂದುವರೆಸಲಿದ್ದಾರೆ’ ಎಂದರು.

‘ಪತ್ನಿ ಕಳೆದುಕೊಂಡಿರುವ ನನಗೆ ನಾಲ್ಕು ಹಾಗೂ ಎರಡು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳ ಭವಿಷ್ಯದ ಹಿನ್ನಲೆಯಲ್ಲಿ ಹಾಗೂ ಪತ್ನಿಯ ಸಾವಿಗೆ ನ್ಯಾಯ ಕೇಳುತ್ತಿರುವ ನನಗೆ ಒಂದು ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಬದಲಾಗಿ ಬೆದರಿಕೆ ಹಾಕುವ ಕೆಲಸ ವೈದ್ಯಕೀಯ ಸಿಬ್ಬಂದಿಗಳಿಂದ ಆಗಿದೆ. ಈ ಕುರಿತು ಪೊಲೀಸರು ದೂರು ಸ್ವೀಕರಿಸುತ್ತಿಲ್ಲ’ ಎಂದು ಪ್ರಶಾಂತ ಪವಾರ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !