ಧಾರವಾಡ: ‘ಏನು ಹೇಳುತ್ತಿದ್ದೆನೆ ಕೇಳಿಸಿಕೊಳ್ಳುತ್ತಿದ್ದಿರಾ ಮಿಸ್ಟರ್ ಪಾಟೀಲ್ ಸಾಬ್? ವಿಶ್ವವಿದ್ಯಾಲಯದ ಸಂಶೋಧನೆಗಳು, ಉತ್ಪನ್ನಗಳನ್ನು ‘ಮಾರ್ಕೆಟಿಂಗ್’ ಹೇಗೆ ಮಾಡಲಾಗುತ್ತಿದೆ?’ ಎಂದು ಕೃಷಿ ವಿವಿ ಕುಲಪತಿ ಪಿ.ಎಲ್.ಪಾಟೀಲ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಪ್ರಶ್ನಿಸಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ವಿಶ್ವವಿದ್ಯಾಲಯದ ಅನ್ವೇಷಣೆಗಳು ಮತ್ತು ಉತ್ಪನ್ನಗಳನ್ನು ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಕಚೇರಿ, ಸಹಕಾರಿ ಸೊಸೈಟಿ ಬ್ಯಾಂಕ್‌ಗಳ ಮೂಲಕ ಔಟ್ ರೀಚ್ ಪ್ರೋಗ್ರಾಂ ಮಾಡಬೇಕು. ಆಗ ಅವುಗಳನ್ನು ರೈತರಿಗೆ ತಲುಪಿಸಬಹುದು. ಕಳೆದ ವರ್ಷ ಮೇಳಕ್ಕೆ 10 ಲಕ್ಷ ಜನರು ಭೇಟಿ ನೀಡಿದ್ದರು, ಅದರ ಫಲಿತಾಂಶ ಏನು? ಕಳೆದ ಐದು ವರ್ಷ ನಡೆದ ಮೇಳಗಳ ಪರಿಣಾಮ ವರದಿ ನಿಮ್ಮಲ್ಲಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕುಲಪತಿ ಹುದ್ದೆಯಲ್ಲಿ ನೀವು ಶಾಶ್ವತವಾಗಿ ಇರಲ್ಲ, ಈ ಅಧಿಕಾರವೂ ನಮಗೆ ಬಹಳ ವರ್ಷ ಇರಲ್ಲ. ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ನೀವು ಬಳಸಿಕೊಳ್ಳುತ್ತಿಲ್ಲ’ ಎಂದು ಆಕ್ಷೇಪಿಸಿದರು.
‘ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ನೀವು ಪಾಲ್ಗೊಳ್ಳಬೇಕು. ವಿಶ್ವವಿದ್ಯಾಲಯದ ಸಭೆಗೆ ಜನಪ್ರತಿನಿಧಿಗಳನ್ನು ಯಾಕೆ ಆಹ್ವಾನಿಸಲ್ಲ? ಸಭೆಗೆ ಆಹ್ವಾನಿಸುವಂತೆ ಹೇಳಿದರೂ ಆಹ್ವಾನಿಸಿಲ್ಲ. ಈ ರೀತಿ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು.
‘ಜಿಲ್ಲೆಯಲ್ಲಿ ಬಿತ್ತನೆ ಮಾಡಿರುವ ಪ್ರದೇಶ ಎಷ್ಟು? ಯಾವ್ಯಾವ ಬೀಜಗಳನ್ನು ಬಿತ್ತನೆ ಮಾಡಲಾಗಿದೆ? ನೀರಾವರಿ ಪ್ರದೇಶ ಎಷ್ಟು? ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗೆ ಮಾಹಿತಿ ಇಲ್ಲ. ನಿಮಗೆ ಅದರ ಬಗ್ಗೆ ಆಸಕ್ತಿ ಇಲ್ಲ. ವಿಶ್ವವಿದ್ಯಾಲಯದವರು ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ’ ಎಂದು ಗುಡುಗಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಭಾನುವಾರ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಭಾನುವಾರ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಭಾನುವಾರ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ ಗೋವಿಂದರಾಜ ಜವಳಿ