ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಗ ಕಸಿಗೆ ಯಕೃತ್‌ ಬೆಂಗಳೂರಿಗೆ ರವಾನೆ

Last Updated 17 ಆಗಸ್ಟ್ 2022, 13:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ 30 ವರ್ಷದ ವ್ಯಕ್ತಿಯ ಯಕೃತ್‌ ಅನ್ನು ತೆಗೆದ ವೈದ್ಯರ ತಂಡ, ಇಲ್ಲಿನ ಕಿಮ್ಸ್‌ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಹಸಿರು ಪಥ(ಝೀರೋ ಟ್ರಾಫಿಕ್‌)ದಲ್ಲಿ ಕೊಂಡೊಯ್ದು ಬೆಂಗಳೂರಿಗೆ ರವಾನಿಸಿದೆ.

‘ಕೆಲ ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ಪ್ರಕಾಶ ಲಂಬಾಣಿ ಅವರನ್ನು ಕಿಮ್ಸ್‌ಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಮೆದುಳು ನಿಷ್ಕ್ರಿಯವಾಗಿದ್ದರೂ ಯಕೃತ್‌ ಮತ್ತು ಕಿಡ್ನಿ ಕಾರ್ಯ ನಿರ್ವಹಿಸುತ್ತಿತ್ತು. ಅಂಗಾಂಗ ದಾನದ ಕುರಿತು ಕಿಮ್ಸ್‌ ವೈದ್ಯರ ತಂಡ ಅವರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿ, ಒಪ್ಪಿಸಿತ್ತು. ಬೆಂಗಳೂರಿನ ಜೆ.ಪಿ. ನಗರದ ಆಸ್ಟರ್ ಆರ್‌.ವಿ. ಆಸ್ಪತ್ರೆಯಲ್ಲಿನ ರೋಗಿಯೊಬ್ಬರಿಗೆ ಯಕೃತ್‌ ಕಸಿ ಅಗತ್ಯವಿದ್ದ ಕಾರಣ, ಅಲ್ಲಿಯ ವೈದ್ಯರ ತಂಡ ಬಂದು ಯಕೃತ್‌ ತೆಗೆದರೆ, ನಮ್ಮಲ್ಲಿಯೇ ದಾಖಲಾದ 39 ವರ್ಷದ ವ್ಯಕ್ತಿಗೆ ಅವರ ಕಿಡ್ನಿ ತೆಗೆದು ಕಸಿ ಮಾಡಲಾಗಿದೆ’ ಎಂದು ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದರು.

‘ವೈದ್ಯರ ಕೋರಿಕೆ ಮೇರೆಗೆ ಕಿಮ್ಸ್‌ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ 6.5 ಕಿ.ಮೀ. ಮಾರ್ಗವನ್ನು ಝೀರೋ ಟ್ರಾಫಿಕ್‌ ಮಾಡಲಾಗಿತ್ತು. ಯಕೃತ್‌ ಮತ್ತು ಬೆಂಗಳೂರಿನ ವೈದ್ಯರು ಇದ್ದ ಆಂಬುಲೆನ್ಸ್‌ ಕೇವಲ ಎರಡು ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಿದೆ. ಅಲ್ಲಿಂದ ಸ್ಟಾರ್‌ ಏರ್‌ ವಿಮಾನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ತೆಗೆದಿರುವ ಕಾರ್ಯ ಉತ್ತರ ಕರ್ನಾಟಕ ಭಾಗದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿಯೇ ಇದು ಮೊದಲನೆಯದಾಗಿದೆ. ಆ ಮೂಲಕ ಕಿಮ್ಸ್‌ ಹೊಸ ಇತಿಹಾಸ ನಿರ್ಮಿಸಿದೆ. ಕೆಲ ತಿಂಗಳ ಹಿಂದೆ ಇಲ್ಲಿನ ವೈದ್ಯರು ಜೀವಂತ ವ್ಯಕ್ತಿಗಳು ದಾನ ಮಾಡಿರುವ ಕಿಡ್ನಿ ತೆಗೆದು ರೋಗಿಗಳಿಗೆ ಕಸಿ ಮಾಡಿ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT