ಚಕ್ಕಡಿ ಏರಿ ದಿನೇಶ್‌ ಗುಂಡೂರಾವ್‌ ಪ್ರತಿಭಟನೆ

7
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಟೀಕಾ ಪ್ರಹಾರ

ಚಕ್ಕಡಿ ಏರಿ ದಿನೇಶ್‌ ಗುಂಡೂರಾವ್‌ ಪ್ರತಿಭಟನೆ

Published:
Updated:
Deccan Herald

ಹುಬ್ಬಳ್ಳಿ: ಕೇಂದ್ರ ಸರ್ಕಾರ ಸತತವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡಿ ಜನರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಆದ್ದರಿಂದ ಇಂಧನ ದರ ಏರಿಕೆ ಖಂಡಿಸಿ ಮುಂದಿನವಾರ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಂಧನ ಬೆಲೆ ಏರಿಕೆ ಖಂಡಿಸಿ ಇಲ್ಲಿನ ಕೆಇಸಿ ವೃತ್ತದಿಂದ ವಿಮಾನ ನಿಲ್ದಾಣದ ತನಕ ಚಕ್ಕಡಿ ಏರಿ ಬಂದು ಅವರು ಪ್ರತಿಭಟಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ದಿನೇ ದಿನೇ ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ವಿಶ್ವದ ಎದುರು ಭಾರತದ ಮಾನ ಹರಾಜಾಗುತ್ತಿದೆ. ನೋಟು ರದ್ದತಿಯ ಕೆಟ್ಟ ನಿರ್ಧಾರದಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಆದ್ದರಿಂದ ಈಗ ಸಾಂಕೇತಿಕವಾಗಿ ಪ್ರತಿಭಟಿಸಿ, ಮಂದೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲಾಗುವುದು. ಬೆಂಗಳೂರಿನಲ್ಲಿ 50 ಸಾವಿರ ಜನರನ್ನು ಸೇರಿಸಿ ಕೇಂದ್ರದ ಭ್ರಷ್ಟ ನೀತಿಯನ್ನು ಜನರಿಗೆ ತಿಳಿಸುತ್ತೇವೆ’ ಎಂದು ಹೇಳಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದಾಗ ದೇಶದಲ್ಲಿಯೂ ಇಂಧನ ಬೆಲೆ ಕಡಿಮೆ ಮಾಡಬೇಕಿತ್ತು. ಆ ಕೆಲಸವನ್ನು ಮೋದಿ ಮಾಡಲಿಲ್ಲ. ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 19 ಮತ್ತು ಡೀಸೆಲ್‌ ಪ್ರತಿ ಲೀಟರ್‌ಗೆ ₹ 15 ತೆರಿಗೆ ಹಾಕುತ್ತಿದೆ’ ಎಂದರು.

‘ಉದ್ಯಮಿಗಳಿಗೆ ಹಾಗೂ ಶ್ರೀಮಂತರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಇಂಧನ ದರ ಹೆಚ್ಚಿಸಿದೆ. ಇದರಿಂದ ಸುಮಾರು ₹ 10 ಲಕ್ಷ ಕೋಟಿ ಆದಾಯ ಪಡೆದು ಬ್ಯಾಂಕ್‌ ದಿವಾಳಿ ಮಾಡಿ ಹೋದವರ ಹಣ ಭರಿಸುತ್ತಿದೆ’ ಎಂದು ಆರೋಪಿಸಿದರು. ಪೆಟ್ರೋಲ್‌ ಹಾಗೂ ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಯಲ್ಲಿ ತರಬೇಕು ಎಂದೂ ಅವರು ಆಗ್ರಹಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತದ ಕುರಿತು ಕೇಳಲಾದ ಪ್ರಶ್ನೆಗೆ ‘ಕಾಂಗ್ರೆಸ್‌ ಪಕ್ಷ ಸಮುದ್ರವಿದ್ದಂತೆ, ಸಣ್ಣ, ಪುಟ್ಟ ಅಸಮಾಧಾನಗಳು ಸಹಜ. ಈಗ ಎಲ್ಲವೂ ಸರಿಹೋಗಿದೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ ಕುಮಾರ ಪಾಟೀಲ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಇಂಟಕ್ ಬಂಗಾರೇಶ ಹಿರೇಮಠ, ಕಾಂಗ್ರೆಸ್‌ ಪ್ರಮುಖರಾದ ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಇಸ್ಮಾಯಿಲ್ ತಮಟಗಾರ, ಶಿವಕುಮಾರ ರಾಯನಗೌಡರ, ಪ್ರಕಾಶ್ ಕ್ಯಾರಕಟ್ಟಿ, ದೇವಕಿ ಯೋಗಾನಂದ್, ಸುನಿತಾ ಹುರಕಡ್ಲಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !