ಭಾನುವಾರ, ಆಗಸ್ಟ್ 25, 2019
20 °C
ಮಳೆಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಭೇಟಿ

ಮಳೆ ಸಂತ್ರಸ್ತರಿಗೆ ಸಾಂತ್ವನ; ಹೊದಿಕೆ ವಿತರಣೆ

Published:
Updated:
Prajavani

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶನಿವಾರ ಪ್ರವಾಹದಿಂದ ಹಾನಿಗೊಂಡ ನವಲಗುಂದ ತಾಲ್ಲೂಕಿನ ಬ್ಯಾಹಟ್ಟಿ, ಕುಸುಗಲ್, ಮೊರಬ, ಶಿರಕೋಳ ಹಾಗೂ ಹಣಸಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಗ್ರಾಮಗಳಲ್ಲಿ ತೆರೆದಿರುವ ಪುನರ್ವಸತಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಅವರು, ಬಳಿಕ ಎಲ್ಲರಿಗೂ ಹೊದಿಕೆ (ಬೆಡ್‌ಶೀಟ್‌) ವಿತರಿಸಿದರು.

ಕುಸುಗಲ್‌ ಕೆರೆಯಂಚಿನಲ್ಲಿ ಜಲಾವೃತಗೊಂಡಿರುವ ಮನೆಗಳನ್ನು ವೀಕ್ಷಿಸಿದ ಅವರು, ನೀರು ಕಮ್ಮಿಯಾಗುವವರೆಗೆ ಪುನರ್ವಸತಿ ಸ್ಥಳದಲ್ಲೇ ತಾತ್ಕಾಲಿಕವಾಗಿ ಆಶ್ರಯ ಪಡೆಯುವಂತೆ ಸಲಹೆ ನೀಡಿದರು.

ಕುಸುಗಲ್ ಗ್ರಾಮದಲ್ಲಿ ಸಂತ್ರಸ್ತರಿಗೆ ನೀಡಲು ತಂದಿದ್ದ ಹೊದಿಕೆ ವಿತರಣೆ ವೇಳೆ ನೂಕುನುಗ್ಗಲು ಉಂಟಾಯಿತು. ಕೆಲವರಿಗಷ್ಟೇ ಕೊಟ್ಟು ಉಳಿದವರರನ್ನು ಕಡೆಗಣಿಸಲಾಗಿದೆ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಪಿಸಿಸಿ ಅಧ್ಯಕ್ಷರು ಸಾಂಕೇತಿಕವಾಗಿ ಕೆಲವರಿಗೆ ಬೆಡ್‌ಶೀಟ್ ವಿತರಿಸಿದ್ದಾರೆ. ಎಲ್ಲರಿಗೂ ನೀಡಲು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟಿದ್ದು, ಎಲ್ಲಾ ಸಂತ್ರಸ್ತರಿಗೂ ವಿತರಿಸಲಾಗುವುದು’ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಮಾಧಾನಪಡಿಸಿದರು.

ಅಳಲು ತೋಡಿಕೊಂಡರು:

ಮೊರಬದ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ದಿನೇಶ್ ಗುಂಡೂರಾವ್ ಅವರ ಬಳಿ, ಮನೆ ಕಟ್ಟಿಕೊಳ್ಳಲು ನೆರವು ನೀಡುವಂತೆ ಸಂತ್ರಸ್ತರು ಮನವಿ ಮಾಡಿದರು.

ಮೂರು ದಿನದಿಂದ ಶಾಲೆಯಲ್ಲಿ ಆಶ್ರಯ ಪಡೆದಿದ್ದೇವೆ. ಮನೆಗಳು ಕುಸಿದಿದ್ದು, ಬದುಕ ಕೂಡ ಮುರಾಬಟ್ಟೆಯಾಗಿದೆ. ಹಾಗಾಗಿ, ಹೊಸ ಮನೆ ಕಟ್ಟಿಕೊಳ್ಳುವಷ್ಟು ನಾವು ಶಕ್ತರಿಲ್ಲ. ಹಾಗಾಗಿ, ಪಕ್ಷದ ವತಿಯಿಂದ ನಮಗೆ ನೆರವು ನೀಡಬೇಕು ಎಂದು ಬೇಡಿಕೊಂಡರು.

‘ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಪಕ್ಷದ ಕಾರ್ಯಕರ್ತರು ಸದಾ ನಿಮ್ಮೊಂದಿಗಿರಲಿದ್ದಾರೆ. ಅಲ್ಲದೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ  ಅಲ್ತಾಫ ಹಳ್ಳೂರ, ಗ್ರಾಮೀಣ ಘಟಕದದ ಅಧ್ಯಕ್ಷ ಅನಿಲ್‌ಕುಮಾರ ಪಾಟೀಲ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸಮನಿ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ಇದ್ದರು.

Post Comments (+)