ಭಾನುವಾರ, ನವೆಂಬರ್ 29, 2020
21 °C
ಜಿಲ್ಲೆಯ ಗ್ರಾಮಗಳಿಗೆ ನಿರಂತರ ನೀರು ಪೂರೈಸುವ ಯೋಜನೆ ಜಾರಿಗೆ ತಯಾರಿ; ದಾಹ ಹಿಂಗಿಸಲಿದೆ ಮಲಪ್ರಭಾ

ಜಲಕ್ಷಾಮ ನೀಗಿಸುವುದೇ ‘ಜಲಧಾರೆ’ !

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೆ ತಯಾರಿ ನಡೆಯುತ್ತಿದೆ. ‘ಜಲಧಾರೆ’ ಯೋಜನೆಯಡಿ ಕೈಗೆತ್ತಿಕೊಂಡಿರುವ ಈ ಯೋಜನೆಯು, ಹಳ್ಳಿಗಳಲ್ಲಿ ಜಲಕ್ಷಾಮ ನೀಗಿಸುವ ನಿರೀಕ್ಷೆ ಮೂಡಿಸಿದೆ.

ಎರಡು ವರ್ಷದಿಂದ ಉತ್ತಮ ಮಳೆಯಾಗುತ್ತಿದ್ದರೂ, ಜಿಲ್ಲೆಯು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಹಾಗಾಗಿ, ಜಲದಾಹ ನೀಗಿಸಲು ಜಾರಿಗೆ ತರಲು ಹೊರಟಿರುವ ಈ ಯೋಜನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಧಾರವಾಡ, ಹುಬ್ಬಳ್ಳಿ (ಮಹಾನಗರ ಪಾಲಿಕೆ ವ್ಯಾಪ್ತಿ ಹೊರತುಪಡಿಸಿ), ಕಲಘಟಗಿ (ಪಟ್ಟಣವೂ ಸೇರಿ), ಕುಂದಗೋಳ, ನವಲಗುಂದ ತಾಲ್ಲೂಕುಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ.

ಸವದತ್ತಿ ತಾಲ್ಲೂಕಿನಲ್ಲಿರುವ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯದಿಂದಲೇ ನೀರು ಪೂರೈಕೆಯಾಗಲಿದೆ. ಅಲ್ಲಿಂದಲೇ,ನೀರು ಶುದ್ಧೀಕರಿಸಿ ಪೈಪ್‌ಲೈನ್‌ಗಳ ಮೂಲಕ ಗ್ರಾಮಗಳಿಗೆ ನೀರು ಪೂರೈಸಲು ನೀಲನಕ್ಷೆಯನ್ನು ರೂಪಿಸಲಾಗಿದೆ.

ದೂರದೃಷ್ಟಿಯ ಯೋಜನೆ: ‘₹1,041 ಕೋಟಿ ಮೊತ್ತದ ಯೋಜನೆ ಇದಾಗಿದೆ. ಮುಂದಿನ ಮೂವತ್ತು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ಸೃಷ್ಟಿಯಾಗಬಹುದಾದ ನೀರಿನ ಬೇಡಿಕೆ ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ’ ಎಂದು ಧಾರವಾಡ
ಜಿಲ್ಲಾ ಪಂಚಾಯ್ತಿ ಗ್ರಾಮೀಣಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮುನವಳ್ಳಿ ರಾಜಶೇಖರ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘2011ರ ಜನಗಣತಿಯ ಪ್ರಕಾರ, ಗ್ರಾಮೀಣ ಭಾಗದಲ್ಲಿ 7.95 ಲಕ್ಷ ಜನಸಂಖ್ಯೆ ಇದೆ. 2052ರ ಹೊತ್ತಿಗೆ ಈ ಪ್ರಮಾಣ 11.24 ಲಕ್ಷಕ್ಕೆ ಏರಿಕೆಯಾಗಲಿದೆ. ಅದೇ ರೀತಿ, 2022ರಲ್ಲಿ 0.84 ಟಿಎಂಸಿ ಅಡಿ ಇರಲಿರುವ ನೀರಿನ ಬೇಡಿಕೆ, 2052ಕ್ಕೆ 1.08 ಟಿಎಂಸಿ ಅಡಿಗೆ ಹೆಚ್ಚಲಿದೆ’ ಎಂದು ಹೇಳಿದರು.

‘ಯೋಜನೆಯ ಅವಧಿ ಮೂರು ವರ್ಷವಾಗಿದ್ದು, 2021ರ ಮಾರ್ಚ್‌ನಲ್ಲಿ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಸದ್ಯ
ಪ್ರಾಥಮಿಕ ಸಮೀಕ್ಷೆ ವರದಿ ಪೂರ್ಣಗೊಂಡಿದ್ದು, ವಿವರಣಾತ್ಮಕ ಸಮೀಕ್ಷೆ ವರದಿ ಸಿದ್ಧಪಡಿಸಲಾಗುತ್ತಿದೆ. ಡಿಬಿಒಟಿ (ನಿರ್ಮಾಣ, ನಿರ್ವಹಣೆ, ಹಸ್ತಾಂತರ) ಮಾದರಿಯ ಯೋಜನೆ ಇದಾಗಿದ್ದು, ಭೂ ಸ್ವಾಧೀನ
ಸೇರಿದಂತೆ ಎಲ್ಲಾ ಕೆಲಸಗಳ ಹೊಣೆ ಗುತ್ತಿಗೆದಾರದ್ದೇ ಆಗಿರುತ್ತದೆ. ಐದು ವರ್ಷದ ನಿರ್ವಹಣೆ ಬಳಿಕ, ಸರ್ಕಾರಕ್ಕೆ ಹಸ್ತಾಂತರಿಸುತ್ತಾರೆ’ ಎಂದು ವಿವರಿಸಿದರು.

22 ವಾರ್ಡ್‌ಗಷ್ಟೇ 24X7 ನೀರು!

ಹುಬ್ಬಳ್ಳಿ–ಧಾರವಾಡಕ್ಕೆ 24X7 ನೀರು ಕೊಡುವ ಯೋಜನೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ ನಾಲ್ಕು ವರ್ಷದ ಹಿಂದೆಯೇ ಚಾಲನೆ ನೀಡಲಾಗಿತ್ತು. ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಟೆಂಡರ್ ಪಡೆದಿದ್ದ ಕಂಪನಿಯ ನಿರ್ಲಕ್ಷ್ಯದಿಂದಾಗಿ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿಲ್ಲ. ಹಾಗಾಗಿ, 22 ವಾರ್ಡ್‌ಗಳಿಗಷ್ಟೇ ನಿರಂತರ ನೀರು ಕೊಡಲು ಸಾಧ್ಯವಾಯಿತು. ಈಗ ಮರು ಟೆಂಡರ್ ಕರೆಯಲಾಗಿದ್ದು, ಚೆನ್ನೈನ ಎಲ್‌ ಆ್ಯಂಡ್‌ ಟಿ ಕಂಪನಿ ₹1,206 ಕೋಟಿಗೆ ಕಾಮಗಾರಿಯ ಗುತ್ತಿಗೆ ಪಡೆದಿದೆ.

‘ಗುತ್ತಿಗೆ ಪಡೆದಿರುವ ಕಂಪನಿ ಸರ್ವೆ ಕಾರ್ಯ ಆರಂಭಿಸಿದೆ. ಮೊದಲ ಹಂತದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು, ಹೊಸ ಕೊಳವೆಗಳನ್ನು ಅಳವಡಿಸುವುದು, ಉಳಿದ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ನಾಲ್ಕೂವರೆ ವರ್ಷದಲ್ಲಿ ಮುಗಿಯಲಿದೆ. ಮುಂದಿನ ಏಳು ವರ್ಷ ಗುತ್ತಿಗೆ ಪಡೆದ ಕಂಪನಿಯೇ ನಿರ್ವಹಣೆ ಮಾಡಲಿದೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

ಅಂಕಿ– ಅಂಶ...

* ಯೋಜನೆಯ ಮೊತ್ತ: ₹1,041.80 ಕೋಟಿ

* ಐದು ವರ್ಷದ ಅವಧಿಯ ನಿರ್ವಹಣಾ ಮೊತ್ತ: ₹141.34

ಯೋಜನೆ ವ್ಯಾಪ್ತಿಯು ತಾಲ್ಲೂಕುವಾರು ಗ್ರಾಮಗಳು

ತಾಲ್ಲೂಕು; ಗ್ರಾಮಗಳು

ಧಾರವಾಡ; 107

ಹುಬ್ಬಳ್ಳಿ; 46

ಕಲಘಟಗಿ; 86

ಕುಂದಗೋಳ; 57

ನವಲಗುಂದ; 57

ಒಟ್ಟು; 353

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು