ಶುಕ್ರವಾರ, ಫೆಬ್ರವರಿ 26, 2021
27 °C

ಇ–ಓದು: ಅಂಗೈಯಲ್ಲೇ ವಾಚನಾಲಯ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಲಾಕ್‌ಡೌನ್‌ ಅವಧಿ ಮುಂದುವರಿದಂತೆಲ್ಲ ಓದಿನ ಹಸಿವು ಹೆಚ್ಚಾಗುತ್ತಲೇ ಇದೆ. ಮನೆ ಅಥವಾ ಅಕ್ಕ ಪಕ್ಕದ ಮನೆಯಲ್ಲಿದ್ದ ಪುಸ್ತಕಗಳ ಓದು ಮುಗಿದ ಮೇಲೆ ಹೊಸ ಅಥವಾ ಓದದ ಪುಸ್ತಕಕ್ಕೆ ಮನ ಹಾತೊರೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಪುಸ್ತಕ ಸಿಗುವುದು ಕಷ್ಟವಾಗುತ್ತಿದ್ದು,  ಇ–ಬುಕ್‌ ಓದಿನ ಆಕರ್ಷಣೆ ಹೆಚ್ಚಾಗುತ್ತಿದೆ. ಇ–ಬುಕ್‌ ಓದಿಗೆ ಸಾಕಷ್ಟು ಹಣವನ್ನೂ ನೀಡಬೇಕು ಎಂಬುದೂ ಇದೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಧಾರವಾಡದ ಮನೋಹರ ಗ್ರಂಥಮಾಲಾ ಇ–ಓದನ್ನು ಮೂರು ತಿಂಗಳ ಅವಧಿಗೆ ಉಚಿತವಾಗಿ ಒದಗಿಸುತ್ತಿದೆ.

‘ಗಿರಡ್ಡಿ ಗೋವಿಂದರಾಜ, ರಾಘವೇಂದ್ರ ಪಾಟೀಲ, ಪುರುಷೋತ್ತಮ ಬಿಳಿಮಲೆ, ಜಿ.ಎಸ್. ಅಮೂರ ಅವರ ರಚನೆಯ ಆಯ್ದ ಪುಸ್ತಕಗಳನ್ನು ಇ–ಓದಿನಲ್ಲಿ ಉಚಿತವಾಗಿ ಆಸ್ವಾದಿಸಬಹುದಾಗಿದೆ. ವಿವಿದ್‌ಲಿಪಿ (vividlipi) ಆ್ಯಪ್‌ ಮೂಲಕ ಇ–ಓದಿಗೆ ಅವಕಾಶವಿದೆ. ಮೂರು ತಿಂಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪುಸ್ತಕಗಳನ್ನು ಓದುವ ಅವಕಾಶವನ್ನು ಮನೋಹರ ಗ್ರಂಥಮಾಲಾ ಒದಗಿಸುತ್ತಿದೆ’ ಎಂದು ಸಮೀರ ಜೋಶಿ ಮಾಹಿತಿ ನೀಡಿದ್ದಾರೆ.

‘ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗಿರುವುದು ನಿಜ. ಆದರೆ, ಈ ಸಮಯದಲ್ಲಿ ಓದುಗರಿಗೆ ತ್ವರಿತವಾಗಿ ನಾವು ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಯುವ ಓದುಗರು, ಹೆಚ್ಚಾಗಿ ಗ್ಯಾಡ್ಜೆಟ್‌ಗಳಲ್ಲಿ ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಅವರಿಗೆ ಅನುವಾಗಲು ನಿಟ್ಟಿನಲ್ಲಿ ಓದುಗರಿಗೆ ಅವರಲ್ಲಿರುವಲ್ಲೇ ಪುಸ್ತಕಗಳನ್ನು ಓದುವ ಅವಕಾಶ ಮಾಡಿ ಕೊಡುವ ನಿಟ್ಟಿನಲ್ಲಿ ಇ–ಬುಕ್‌ ಅಥವಾ
ಇ–ಓದು ಪ್ರಸ್ತುತಪಡಿಸುತ್ತಿದ್ದೇವೆ.  ಸಾಮಾನ್ಯವಾಗಿ ಇ–ಬುಕ್‌ ಓದಲು ಸದಸ್ಯತ್ವ ಇರುತ್ತದೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಓದುಗರಿಗೆ ಕೆಲವು ಪುಸ್ತಕಗಳನ್ನು ಉಚಿತವಾಗಿ ಇ–ಓದಿನಲ್ಲಿ ಒದಗಿಸಲಾಗುತ್ತಿದೆ. ಮೇ 1 ರಿಂದ ಮೂರು ತಿಂಗಳು ಈ ಯೋಜನೆ ಜಾರಿಯಲ್ಲಿರುತ್ತದೆ’ ಎಂದರು ಸಮೀರ ಜೋಶಿ.

ಮಹಿಳಾ ಓದುಗರ ಸಂಖ್ಯೆ ವೃದ್ಧಿ

ಪುಸ್ತಕ ಓದಿಗೂ ಮಹಿಳೆಯರಿಗೂ ಇನ್ನಿಲ್ಲದ ನಂಟು. 15–20 ವರ್ಷಗಳ ಹಿಂದೆ ಕಾದಂಬರಿಗಳಿಗೆ ಮಹಿಳಾ ಓದುಗರೇ ಹೆಚ್ಚು.  ಕೌಟುಂಬಿಕ ವಸ್ತುವಿನ ಪುಸ್ತಕಗಳು ಸ್ತ್ರೀಯ ಮನಕಲುಕುತ್ತಿದ್ದವು. ಖರೀದಿ, ಗ್ರಂಥಾಲಯದಲ್ಲಿ ಹುಡುಕಿ ತಂದು ಓದುವ ಹವ್ಯಾಸ ಇತ್ತು. ಕಾಲ ಕಳೆದಂತೆ, ಮನೆಕೆಲಸದ ಜೊತೆಗೆ ಕುಟುಂಬದ ಆರ್ಥಿಕ ಸ್ಥಿತಿ ಹಿಡಿತಕ್ಕೆ ತೆಗೆದುಕೊಳ್ಳಲು ಹೊರಗೆ ದುಡಿಯುವುದು ಮಹಿಳೆಯರಿಗೂ ಅನಿವಾರ್ಯವಾಯಿತು. ಕಾಲ ಉರುಳುತ್ತಿರುವಂತೆ ಯುವ ಮಹಿಳಾ ಓದುಗರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಆದರೆ, ಈ ಲಾಕ್‌ಡೌನ್‌ ಅವರನ್ನು ಮತ್ತೆ ಓದಿನತ್ತ ಎಳೆತಂದಿದೆ.

‘ಮಹಿಳೆಯರು ಓದಿನಲ್ಲಿ ಎಂದಿಗೂ ಮುಂದೆ. ಗೃಹಿಣಿಯರು ಪುಸ್ತಕಗಳನ್ನು ಓದುತ್ತಿದ್ದರು. ಆದರೆ, ಅವರಿಗೆ ಮನೆಕೆಲಸದಿಂದ ಅದರಲ್ಲೂ ಮಾರುಕಟ್ಟೆಗೆ ಹೋಗಿಬರುವುದಕ್ಕೆ ಸಮಯ ಹೆಚ್ಚು ಬೇಕಿರುತ್ತಿತ್ತು. ಆದ್ದರಿಂದ ಓದು ಕಡಿಮೆಯಾಗಿತ್ತು. ಈ ಲಾಕ್‌ಡೌನ್‌ ಎಲ್ಲವನ್ನೂ ಬದಲಿಸಿದೆ. ಇದೀಗ ಮಹಿಳೆಯರಿಗೆ ಓದಿಗೆ ಸಾಕಷ್ಟು ಸಮಯ ಸಿಕ್ಕಿದೆ. ಮನೆಯಲ್ಲಿರುವ ಎಲ್ಲ ಪುಸ್ತಕಗಳನ್ನು ಓದುತ್ತಿದ್ದಾರೆ, ಅದರ ಬಗ್ಗೆ ಚರ್ಚಿಸುತ್ತಿದ್ದಾರೆ. ಹೊಸ ಪುಸ್ತಕಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಖರೀದಿಗೂ ಕೇಳುತ್ತಿದ್ದಾರೆ’ ಎನ್ನುತ್ತಾರೆ ಧಾರವಾಡದ ಅನನ್ಯ ಪ್ರಕಾಶನದ ಹೇಮಾ ಪಟ್ಟಣಶೆಟ್ಟಿ.

‘ಉದ್ಯೋಗಸ್ಥ ಮಹಿಳೆಯರಿಗೂ ಕೂಡ ಇದೀಗ ಸಮಯ ಸಿಕ್ಕಿದೆ. ಅವರು ಹಿಂದಿನ ಎಲ್ಲ ಪುಸ್ತಕಗಳನ್ನು ಹೊರತೆಗೆದು ಓದುತ್ತಿದ್ದಾರೆ. ವೃತ್ತಿಗೆ ಪೂರಕವಾದ ಓದಿಗೂ ಆಸಕ್ತಿ ವಹಿಸಿದ್ದಾರೆ. ಅವರೂ ಸೇರಿದಂತೆ ಎಲ್ಲ ವರ್ಗದ ಮಹಿಳೆಯರಲ್ಲಿ ಅಧ್ಯಯನ ಓದಿನ ಅಭಿರುಚಿ ಹೆಚ್ಚಾಗುತ್ತಿದೆ. ಯಾವ ಪುಸ್ತಕಗಳು ಎಲ್ಲೆಲ್ಲಿ ಸಿಗುತ್ತವೆ ಎಂಬ ಮಾಹಿತಿ ಪಡೆಯುತ್ತಿದ್ದಾರೆ. ಪ್ರಕಾಶಕರನ್ನು ಸಂಪರ್ಕಿಸಿ, ಕಳುಹಿಸಲು ಮನವಿಯನ್ನೂ ಮಾಡುತ್ತಿದ್ದಾರೆ’ ಎಂದರು.

ಸಮಚಿತ್ತಕ್ಕೆ ಓದು ಶಕ್ತಿ

‘ಲಾಕ್‌ಡೌನ್‌ ಎಂಬ ಅನಿವಾರ್ಯ ಸ್ಥಿತಿ ಓದುಗರು ಹಾಗೂ ಓದಿನ ಪ್ರಮಾಣವನ್ನು ಹೆಚ್ಚಿಸಿರುವುದು ಮಾತ್ರವಲ್ಲ, ಓದುವ ಹವ್ಯಾಸವಿರುವವರಿಗೆ ಓದೆಂಬುದು ಮಾನಸಿಕ ತುಮುಲಕ್ಕೊಳಗಾಗದೆ ಸಮತೋಲನದಲ್ಲಿ ಬದುಕಲು ತುಂಬಾ ಸಹಾಯ ಮಾಡಿದೆ. ಲಾಕ್‌ಡೌನ್‌ ಅವಧಿ ಹೆಚ್ಚಾದಂತೆಲ್ಲ ಸಾಕಷ್ಟು ಮಂದಿ ಬೇಸರಗೊಂಡರು. ಆದರೆ, ಓದಿನ ಹವ್ಯಾಸ ಇರುವವರ ಮನಸ್ಸು ಸಮಚಿತ್ತವಾಗಿದೆ. ಓದಿಗೆ ಇಂತಹ ದೊಡ್ಡ ಶಕ್ತಿ ಇದೆ’ ಎನ್ನುತ್ತಾರೆ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು