ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಬಿಲ್‌ ಬಾಕಿ: ಸಿಆರ್‌ಎಫ್ ಕಾಮಗಾರಿಗೆ ಗ್ರಹಣ

Last Updated 15 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದ ವಿವಿಧೆಡೆ ಕೇಂದ್ರ ರಸ್ತೆ ನಿಧಿ(ಸಿಆರ್‌ಎಫ್‌) ಅನುದಾನದಡಿ ಆರಂಭಿಸಿರುವ ಕಾಮಗಾರಿಗಳು ಕೆಲವೆಡೆ ಅರ್ಧಕ್ಕೆ ನಿಂತಿದ್ದರೆ, ಉಳಿದೆಡೆ ತೆವಳುತ್ತಾ ಸಾಗುತ್ತಿವೆ. ಹದಗೆಟ್ಟಿದ್ದ ಡಾಂಬರು ರಸ್ತೆಗಳು ಕಾಂಕ್ರೀಟ್ ರೂಪ ಪಡೆದು ಉತ್ತಮ ರಸ್ತೆಗಳಾಗಲಿವೆ ಅಂದು ಕೊಂಡಿದ್ದ ನಾಗರಿಕರು, ಅರೆಬರೆ ಕಾಮಗಾರಿಗಳಿಂದಾಗಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹165 ಕೋಟಿ ವೆಚ್ಚದಲ್ಲಿ, 28.85 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಸಿಆರ್‌ಎಫ್‌ನಡಿ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ, ಹುಬ್ಬಳ್ಳಿಯಲ್ಲಿ ನಾಲ್ಕು ಮತ್ತು ಧಾರವಾಡ ದಲ್ಲಿ ಎರಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೂರೂವರೆ ವರ್ಷದ ಹಿಂದೆಯೇ ಆರಂಭಗೊಂಡ ಕೆಲ ಕಾಮಗಾರಿಗಳು, ಕಾಲಮಿತಿ ಮುಗಿದರೂ ಪೂರ್ಣಗೊಂಡಿಲ್ಲ.

ಹೊಸೂರು, ನೀಲಿಜಿನ್ ರಸ್ತೆ, ಸುಚಿರಾಯು ಆಸ್ಪತ್ರೆ, ಬಸ್ ಡಿಪೊ, ಹೆಗ್ಗೇರಿ, ಉಣಕಲ್, ಕಾಟನ್ ಮಾರ್ಕೆಟ್, ಶಾರದಾ ಹೋಟೆಲ್ ಬಳಿ ಕಾಮಗಾರಿ ಅಪೂರ್ಣಗೊಂಡಿದೆ. ಸುಚಿರಾಯು ಆಸ್ಪತ್ರೆ ಮತ್ತು ಬಸ್ ಡಿಪೊ ಬಳಿ ಒಂದು ಭಾಗದಲ್ಲಷ್ಟೇ ರಸ್ತೆ ಪೂರ್ಣಗೊಂಡಿದೆ. ಉಳಿದ ಭಾಗ ಹಾಗೆಯೇ ಇದೆ. ನೀಲಿಜಿನ್ ರಸ್ತೆಯಿಂದ ಕಾಟನ್ ಮಾರ್ಕೆಟ್ ಮಾರ್ಗದಲ್ಲಿ, ಸಂಚಾರ ಪೊಲೀಸ್ ಠಾಣೆವರೆಗೆ ಮಾತ್ರ ಕಾಮಗಾರಿ ನಡೆದಿದೆ. ಶಾರದಾ ಹೋಟೆಲ್‌ ಕಡೆಗೆ ಹೋಗುವ ರಸ್ತೆ ಈಗಲೂ ಹದಗೆಟ್ಟ ಸ್ಥಿತಿಯಲ್ಲಿದೆ.

‘ಸಿಮೆಂಟ್ ರಸ್ತೆ ನಿರ್ಮಾಣವಾಗಿ ದೂಳಿನಿಂದ ಮುಕ್ತಿ ಸಿಗುತ್ತದೆ ಅಂದುಕೊಂಡಿದ್ದೆವು. ಆದರೆ, ಮೂರು ವರ್ಷಗಳಾದರೂ ರಸ್ತೆ ಕೆಲಸ ಪೂರ್ಣಗೊಂಡಿಲ್ಲ. ಯಾವುದೇ ಕಾಮಗಾರಿಯನ್ನು ಕಾಲಮಿತಿಯಲ್ಲಿ ಕಡ್ಡಾಯವಾಗಿ ಮುಗಿಸಬೇಕು. ಇಲ್ಲದಿದ್ದರೆ, ಅದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕಾಟನ್‌ ಮಾರ್ಕೆಟ್‌ನ ವಾಹನ ಚಾಲಕ ಸಿರಾಜುದ್ದೀನ್ ಅಸಮಾಧಾನ ವ್ಯಕ್ತಪಡಿಸಿದರು.

ಶೇ 60ರಷ್ಟು ಬಿಲ್ ಬಾಕಿ: ‘ನಗರದ ವಿವಿಧೆಡೆ ನಡೆಯುತ್ತಿರುವ ಬಹುತೇಕ ಕಾಮಗಾರಿಗಳ ಶೇ 60ರಷ್ಟು ಬಿಲ್‌ ಬಾಕಿ ಉಳಿದಿದೆ. ಸಕಾಲದಲ್ಲಿ ಬಿಲ್ ಪಾವತಿಸಿದರೆ, ಕೆಲಸಗಳೂ ಬೇಗನೆ ಮುಗಿಯುತ್ತವೆ. ಹಣ ಬಿಡುಗಡೆಯಾಗದಿದ್ದರೆ, ನಾವು ಕೆಲಸ ಮಾಡಿಸುವುದಾದರೂ ಹೇಗೆ’ ಎಂದು ಗುತ್ತಿಗೆದಾರ ಎಂ.ಬಿ. ಕಲ್ಲೂರ ಪ್ರಶ್ನಿಸಿದರು.

‘ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕು ಎಂದು ಹೇಳುವ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳು, ಬಿಲ್ ಪಾವತಿಯತ್ತಲೂ ಗಮನ ಹರಿಸಬೇಕು’ ಎಂದು ಇತರ ಗುತ್ತಿಗೆದಾರರು ಒತ್ತಾಯಿಸಿದರು.

ಅಸಮರ್ಪಕ ಕಾಮಗಾರಿ: ‘ಕೆಲವೆಡೆ ಅಸಮರ್ಪಕವಾಗಿ ರಸ್ತೆ ನಿರ್ಮಿಸಲಾಗಿದೆ. ಕಮರಿಪೇಟೆಯಿಂದ –ಉಣಕಲ್ ಕ್ರಾಸ್‌ ಮಾರ್ಗದ ರಸ್ತೆಯ ಅಂಚಿನಲ್ಲಿ ಕಂದಕಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಸಮೇತ ಕೆಳಕ್ಕೆ ಬೀಳುತ್ತಾರೆ. ರಸ್ತೆ ಜೊತೆಗೆ ಪಾದಚಾರಿ ಮಾರ್ಗ ಹಾಗೂ ಚರಂಡಿ ನಿರ್ಮಾಣವಾಗಬೇಕು. ಆದರೆ, ಬಹುತೇಕ ಕಡೆ ಆ ರೀತಿ ಆಗಿಲ್ಲ. ಗುತ್ತಿಗೆದಾರರು ಮನಬಂದಂತೆ ಕೆಲಸ ಮಾಡಿದ್ದಾರೆ. ಅವರನ್ನು ಕೇಳುವವರೇ ಇಲ್ಲ’ ಎಂದು ಹಳೇ ಹುಬ್ಬಳ್ಳಿಯ ಪ್ರಸನ್ನ ಹಿರೇಮಠ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT