ಮಂಗಳವಾರ, ಸೆಪ್ಟೆಂಬರ್ 17, 2019
21 °C
ಕಾರ್ಮಿಕರಿಗೆ ಅರಿವಿನ ಕೊರತೆ: ರೋಹಿಣಿ ಸಿಂಧೂರಿ ಬೇಸರ

ಸೌಲಭ್ಯಗಳ ಜಾಗೃತಿ ಮೂಡಿಸಲು ತಾಕೀತು

Published:
Updated:
Prajavani

ಹುಬ್ಬಳ್ಳಿ: ಕಟ್ಟಡ ಹಾಗೂ ಇನ್ನಿತರ ಯಾವುದೇ ಕಾರ್ಮಿಕರಿಗೆ ನೆರವಾಗಲು ಮಂಡಳಿಯಿದ್ದು, ಅವರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳಿವೆ. ಇದರ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ. ಆದ್ದರಿಂದ ಅಧಿಕಾರಿಗಳು ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೂಚಿಸಿದರು.

ನಗರದಲ್ಲಿ ಬುಧವಾರ ಬಿಲ್ಡರ್ಸ್‌ ಮತ್ತು ಗುತ್ತಿಗೆದಾರರ ಜೊತೆ ಸಂವಾದ ನಡೆಸಿದ ಅವರು ‘ಮಂಡಳಿಯಲ್ಲಿ 20 ಲಕ್ಷ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಐದು ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಡಲು ಸಾಧ್ಯವಾಗಿದೆ. ಬಹುತೇಕರಲ್ಲಿ ದಾಖಲೆಗಳ ಕೊರತೆಯಿದೆ. ಗುತ್ತಿಗೆದಾರರ ಬಳಿ 20ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, ಆ ಗುತ್ತಿಗೆದಾರ ಕಾರ್ಮಿಕರ ಹೆಸರುಗಳನ್ನು ನೋಂದಾಯಿಸುವುದು ಕಡ್ಡಾಯ’ ಎಂದರು.

‘ವರ್ಷದಲ್ಲಿ 90 ದಿನ ಕೆಲಸ ಮಾಡಿದ ಯಾವುದೇ ಕಾರ್ಮಿಕ ನೇರವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಸೇವಾ ಸಿಂಧು ಕೇಂದ್ರವಿದೆ’ ಎಂದರು.

₹ 8,000 ಸಾವಿರ ಕೋಟಿ ಸಂಗ್ರಹ:

ಕಟ್ಟಡ ನಿರ್ಮಾಣ ಮಾಡುವವರಿಂದ ₹ 8,000 ಕೋಟಿ ಕಟ್ಟಡ ಕಾರ್ಮಿಕರ ಉಪಕರ ಸಂಗ್ರಹಿಸಲಾಗಿದ್ದು, ಸಮಾಜದ ವಿವಿಧ ಭದ್ರತಾ ಯೋಜನೆಯಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುವುದು. ಮಹಾರಾಷ್ಟ್ರದ ನಂತರ, ಕರ್ನಾಟಕದಲ್ಲಿಯೇ ಹೆಚ್ಚು ಉಪಕರ ಸಂಗ್ರಹವಾಗಿದೆ ಎಂದು ರೋಹಿಣಿ ತಿಳಿಸಿದರು.

ಚೆಕ್‌ ವಿತರಣೆ:

ಧಾರವಾಡದ ಕಟ್ಟಡ ದುರಂತದಲ್ಲಿ ಮೃತಪಟ್ಟ ಸಲೀಂ ಶಾ ಮಕಂದಾರ್‌, ಮೆಹಬೂಬ್‌ ಸಾಬ್‌ ದೇಸಾಯಿ, ಮೆಹಬೂಬ ಸಾಬ್‌ ಬಡೇಸಾಬ ರಾಯಚೂರು, ವಾಘು ವಿಠ್ಠಲ ರೋಖೆ, ಜಹಾಂಗೀರಸಾಬ್ ಹರಿಹರ, ನವಲುದಾಡು ಅವರ ಕುಟುಂಬದವರಿಗೆ ರೋಹಿಣಿ ₹ 2 ಲಕ್ಷದ ಪರಿಹಾರದ ಚೆಕ್‌ ನೀಡಿದರು.

ಕಡಾಯ್ ಅಧ್ಯಕ್ಷ ಸುರೇಶ್, ಬೆಳಗಾವಿ ವಲಯದ ಉಪ ಆಯುಕ್ತ ವೆಂಕಟೇಶ್, ಸಹಾಯಕ ಕಾರ್ಮಿಕ ಆಯುಕ್ತರಾದ ಮೀನಾ ಪಾಟೀಲ್, ಅನುರಾಧಾ, ಗೋವಿಂದರಾಜ ಕುಲಕರ್ಣಿ, ರಾಮು ಮೋಹನ್‌ ಅಯ್ಯರ್‌ ಇದ್ದರು.

**

‘ಕರ್ನಾಟಕದವರನ್ನೇ ಮದುವೆ ಆಗಬೇಕಾ’

ಕಾರ್ಮಿಕರು ಕರ್ನಾಟಕದವರನ್ನು ಮದುವೆಯಾದರಷ್ಟೇ ಮಂಡಳಿಯಿಂದ ಸಹಾಯಧನ ಸಿಗುತ್ತದೆ. ಗಡಿ ಭಾಗದ ಜಿಲ್ಲೆಗಳ ಕಾರ್ಮಿಕರು ಸಮೀಪದ ಹೊರ ರಾಜ್ಯದವರನ್ನು ಮದುವೆಯಾದರೆ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ; ಸೌಲಭ್ಯಕ್ಕಾಗಿ ಕರ್ನಾಟಕದವರನ್ನೇ ಮದುವೆ ಆಗಬೇಕಾ? ಈ ನಿಯಮ ಸರಿಯೇ? ಎಂದು ಎಐಟಿಯುಸಿ ಪದಾಧಿಕಾರಿ ಎ.ಎಸ್‌. ಫಿರ್ಜಾದಿ, ರೋಹಿಣಿ ಅವರನ್ನು ಪ್ರಶ್ನಿಸಿದರು. ‘ಈ ಕುರಿತು ಚರ್ಚಿಸಲಾಗುವುದು’ ಎಂದು ರೋಹಿಣಿ ಭರವಸೆ ನೀಡಿದರು.

Post Comments (+)