ಮಂಗಳವಾರ, ನವೆಂಬರ್ 19, 2019
27 °C

ಮಡಿವಾಳ ಸಂಘದ ಅಧ್ಯಕ್ಷರ ವಿರುದ್ದ ಸುಳ್ಳು ಆರೋಪ: ಖಂಡನೆ

Published:
Updated:

ಹುಬ್ಬಳ್ಳಿ: ‘ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ ಅವರ ವಿರುದ್ಧ ಕೆಲ ಪಟ್ಟಭದ್ರರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಾಟೀಲ ಬೇಸರ ವ್ಯಕ್ತಪಡಿಸಿದರು.

‘ನಿವೃತ್ತ ಎಸ್ಪಿ ಎಚ್‌. ವೆಂಕಟೇಶ, ರಂಗಸ್ವಾಮಯ್ಯ. ಎಚ್‌.ಡಿ. ಬಸವರಾಜು ಹಾಗೂ ಹಿಂದೆ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಕೆಲವರು, ಸ್ವಾರ್ಥಕ್ಕಾಗಿ ನಂಜಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಧಿಕಾರ ದುರುಪಯೋಗದ ಆರೋಪ ಮಾಡುತ್ತಿರುವ ಈ ಮೂವರೂ, ನಂಜಪ್ಪ ಅವರ ಬದಲಿಗೆ ಉತ್ತರ ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆ ಮೂಲಕ ಸಂಘವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ನಂಜಪ್ಪ ಅವರ ನೇತೃತ್ವದಲ್ಲಿ ಸಂಘ ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ. ಬೆಂಗಳೂರು ಕೇಂದ್ರಿಕೃತವಾಗಿದ್ದ ಸಂಘ, ಇದೀಗ ರಾಜ್ಯವ್ಯಾಪಿಯಾಗಿದೆ. 1,500 ಸದಸ್ಯರ ಬಲ 11 ಸಾವಿರಕ್ಕೆ ಏರಿಕೆಯಾಗಿದೆ. ಅವರ ಶ್ರಮದಿಂದ ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಮಾಚಿದೇವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ’ ಎಂದರು.

ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಾಳಪ್ಪ ಮಡಿವಾಳರ ಮಾತನಾಡಿ, ‘ಸಂಘವನ್ನು ಅಭಿವೃದ್ಧಿಯ ನಿಟ್ಟಿನಲ್ಲಿ ಕೊಂಡೊಯ್ಯುತ್ತಿರುವ ನಂಜಪ್ಪ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳ ಅಧ್ಯಕ್ಷರು ತೀರ್ಮಾನಿಸಿದ್ದೇವೆ. ಹಾಗಾಗಿ, ಸಂಘದ ಸದಸ್ಯರು ಸುಳ್ಳು ಆರೋಪಗಳಿಗೆ ಕಿವಿ ಕೊಡಬಾರದು’ ಎಂದು ಮನವಿ ಮಾಡಿದರು.

ಸಂಘದ ಧಾರವಾಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಮಡಿವಾಳರ, ರಾಜ್ಯ ಕಾರ್ಯಕಾರಿಣಿ ಸದಸ್ಯ ದೇವರಾಜ ಮಡಿವಾಳರ, ರುದ್ರಪ್ಪ ಮಡಿವಾಳರ ಹಾಗೂ ಆನಂದ ಶೇಖಪ್ಪ ಮಡಿವಾಳರ ಇದ್ದರು.

ಪ್ರತಿಕ್ರಿಯಿಸಿ (+)