ಬುಧವಾರ, ಡಿಸೆಂಬರ್ 7, 2022
23 °C

ಹುಬ್ಬಳ್ಳಿ | ತುಂಡಾದ ಹೆಬ್ಬೆರಳು ಪತ್ತೆ; ಊಹಾಪೋಹಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸೊಪ್ಪು ಕಡಿಯುವಾಗ ಆಕಸ್ಮಿಕವಾಗಿ ಹೆಬ್ಬೆರಳನ್ನು ತುಂಡರಿಸಿಕೊಂಡಿದ್ದ ತಡಸ ಗ್ರಾಮದ ಸಿದ್ದಪ್ಪ ಪೂಜಾರ ಅವರು, ಅದನ್ನು ಜೋಡಿಸಲು ಬರುತ್ತದೆ ಅಂದುಕೊಂಡು ಕಿಮ್ಸ್‌ ಆಸ್ಪತ್ರೆಗೆ ತಂದಿದ್ದರು. ವೈದ್ಯರು ಮರು ಜೋಡಣೆ ಅಸಾಧ್ಯ ಎಂದಾಗ ಆಸ್ಪತ್ರೆ ಎದುರು ಬಿಸಾಡಿ ಹೋಗಿದ್ದಾರೆ. ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡಬಾರದು’ ಎಂದು ವಿದ್ಯಾನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ ಪವಾರ್‌ ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ ಕಿಮ್ಸ್‌ ಆವರಣದ ಹೊರ ಪೊಲೀಸ್‌ ಠಾಣೆ ಎದುರು ತುಂಡಾದ ಹೆಬ್ಬೆರಳು ಪತ್ತೆಯಾಗಿತ್ತು. ಆಸ್ಪತ್ರೆಗೆ ಬಂದ ರೋಗಿಯ ತುಂಡಾದ ಬೆರಳೇ? ವೈದ್ಯರ ಅಚಾತುರ್ಯದಿಂದ ನಡೆದ ಘಟನೆಯೇ? ಅಥವಾ ಕೊಲೆಯಾದ ವ್ಯಕ್ತಿಯ ಬೆರಳು ತುಂಡು ಮಾಡಿ ಕಿಮ್ಸ್‌ ಆವರಣದಲ್ಲಿ ಎಸೆದು ಹೋಗಿದ್ದಾರೆಯೇ? ಎನ್ನುವ ಹತ್ತಾರು ಪ್ರಶ್ನೆಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದ್ದವು. ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಇನ್‌ಸ್ಪೆಕ್ಟರ್‌ ಪವಾರ್‌, ವೈದ್ಯರಿಂದ ಮಾಹಿತಿ ಸಂಗ್ರಹಿಸಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ತುಂಡಾದ ಬೆರಳು ಜೋಡಿಸಲು ಬರುತ್ತದೆ ಎಂದು ಸಿದ್ದಪ್ಪ ಅವರು ನೀರಿನ ಡಬ್ಬಿಯಲ್ಲಿ ಹಾಕಿಕೊಂಡು ಶನಿವಾರ ರಾತ್ರಿ ಕಿಮ್ಸ್‌ಗೆ ಬಂದಿದ್ದರು. ಬೆರಳು ಜೋಡಿಸಲು ಸಾಧ್ಯವಿಲ್ಲ ಎಂದಿದ್ದ ವೈದ್ಯರು, ಕಸದ ಬುಟ್ಟಿಯಲ್ಲಿ ಎಸೆಯಲು ತಿಳಿಸಿದ್ದರು. ಆದರೆ, ಅವರು ಠಾಣೆ ಹೊರಭಾಗ ಬಿಸಾಡಿದ್ದಾರೆ. ಬೆಳಿಗ್ಗೆ ಅದನ್ನು ಸಾರ್ವಜನಿಕರು ನೋಡಿದ್ದು, ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ. ತಡಸ ಪೊಲೀಸ್‌ ಠಾಣೆಯಲ್ಲಿ ಎಂಎಲ್‌ಸಿ ಮಾಡಲು ಸಿದ್ದಪ್ಪ ಅವರಿಗೆ ಸೂಚಿಸಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.