ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಓಲಾಡುವ ಹೋರ್ಡಿಂಗ್ಸ್‌; ಹಾರಾಡುವ ಬ್ಯಾನರ್ಸ್‌

Published 27 ಮೇ 2024, 4:52 IST
Last Updated 27 ಮೇ 2024, 4:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವಾರದ ಹಿಂದೆ ಮುಂಬೈನ ಘಾಟ್‌ಗೋಪುರದಲ್ಲಿ ಬೀಸಿದ ಗಾಳಿ ಮತ್ತು ಮಳೆಗೆ ಬೃಹತ್‌ ಹೋರ್ಡಿಂಗ್‌ ಬಿದ್ದು 16 ಮಂದಿ ಮೃತಪಟ್ಟು, 80 ಜನರು ಗಾಯಗೊಂಡ ಘಟನೆ ನಡೆಯಿತು. ಹೋರ್ಡಿಂಗ್‌ ಬೀಳುವ ದೃಶ್ಯ ಎಂಥವರ ಗುಂಡಿಗೆಯಲ್ಲಿ ಒಮ್ಮೆ ಝಲ್ ಅನ್ನಿಸದೇ ಇರದು. \

ಈ ವಿಡಿಯೊ ನೋಡಿದ ಹಲವರು ನಮ್ಮ ಹುಬ್ಬಳ್ಳಿಯಲ್ಲೂ ಕೆಲವೆಡೆ ಗಾಳಿಗೆ ಓಲಾಡುವ ಬೃಹತ್‌ ಹೋರ್ಡಿಂಗ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣನ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಹಂಚಿಕೊಂಡು ಸಂಭವಿಸಲಿರುವ ಅಪಾಯವನ್ನು ಬೊಟ್ಟುಮಾಡಿ ತೋರಿದರು. ಈ ನಿಟ್ಟಿನಲ್ಲಿ ಪಾಲಿಕೆಯವರು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂಬೈನ ಘಾಟ್‌ಗೋಪುರ ಅವಘಡ ಹುಬ್ಬಳ್ಳಿಯಲ್ಲೂ ಘಟಿಸುವುದು ದೂರವಿಲ್ಲ ಎಂಬ ಅಭಿಪ್ರಾಯಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಎರಡು ವಾರದಿಂದ ಹುಬ್ಬಳ್ಳಿ –ಧಾರವಾಡ ಮಹಾನಗರದಲ್ಲೂ ಮಳೆ ಆಗಾಗ ಅಬ್ಬರಿಸುತ್ತಿದೆ. ಮಂದಿಗೆ ಮಳೆ ಬಂತೆಂಬ ಖುಷಿ ಒಂದೆಡೆಯಾದರೆ ಮಳೆಯ ಆರಂಭದಲ್ಲಿ ಬೀಸುವ ಬಿರುಗಾಳಿ, ಸಿಡಿಲು ಭಯಹುಟ್ಟಿಸುತ್ತಿದೆ. ಏಕೆಂದರೆ ನಗರದೆಲ್ಲೆಡೆ ತಲೆಎತ್ತಿರುವ ಬೃಹತ್‌ ಹೋರ್ಡಿಂಗ್ಸ್‌ಗಳು ಗಾಳಿಗೆ ಓಲಾಡಿ ಬಿದ್ದರೆ ಎನ್ನುವ ಆತಂಕ ಅವರದ್ದು. 

ಇತ್ತೀಚೆಗೆ ಸುರಿದ ಗಾಳಿ–ಮಳೆಯ ವೇಳೆ ಗೋಕುಲ ರಸ್ತೆಯಲ್ಲಿ ಇರುವ ಪಬ್ಲಿಕ್‌ ಸಿಂಗಲ್‌ ಪೋಲ್‌ ಹೋರ್ಡಿಂಗ್‌ವೊಂದು ಗಾಳಿಗೆ ಓಲಾಡಿ ರಸ್ತೆಗೆ ಮುಖಮಾಡಿ ನಿಂತಿದೆ. ಭಾರತ್‌ ಮಿಲ್‌ ಸಮೀಪ ಹಾಗೂ ಇಸ್ಕಾನ್‌ ಟೆಂಪಲ್‌ ಸಮೀಪ ಪಬ್ಲಿಕ್‌ ಸಿಂಗಲ್‌ ಪೋಲ್‌ ಕುಸಿದು ಬಿದ್ದಿದೆ. ಅದೆಷ್ಟೋ ಬ್ಯಾನರ್‌ಗಳು ಗಾಳಿಯ ಹೊಡೆತಕ್ಕೆ ಸಿಕ್ಕಿ ಚಿಂದಿಯಾಗಿ ರಸ್ತೆ ಮೇಲೆಲ್ಲ ಹಾರಾಡುತ್ತಲೇ ಇವೆ. ಹೀಗೆ ಹರಿದು ರಸ್ತೆ ಮೇಲೆ ಹೋಗುವ ಬೈಕ್ ಸವಾರದ ಮುಖಕ್ಕೊ, ವಾಹನಗಳ ಎದುರಿನ ಗಾಜಿಗೋ ಮುಚ್ಚಿಕೊಂಡು, ಅಪಘಾತಗಳು ಘಟಿಸಿದ ಉದಾಹರಣೆಗಳು ಈಗಾಗಲೇ ಸಾಕಷ್ಟಿವೆ. ಈ ರೀತಿ ಹರಿದು ರಸ್ತೆ ಆವರಿಸುವ ಬ್ಯಾನರ್‌ಗಳನ್ನು ತಕ್ಷಣಕ್ಕೆ ತೆರವುಗೊಳಿಸದಿರುವುದರಿಂದ ಅವು ವಾಹನಗಳ ಚಕ್ರಗಳಿಗೆ ಸಿಕ್ಕಿಕೊಳ್ಳುವುದು ಸಾಮಾನ್ಯವಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಟ್ರಾಫಿಕ್‌ ಐಲ್ಯಾಂಡ್‌, ಕಿತ್ತೂರ ಚನ್ನಮ್ಮ ವೃತ್ತ ಹಾಗೂ ಸುತ್ತಲಿನ ರಸ್ತೆ ಮತ್ತು ಟ್ರ್ಯಾಂಗ್ಯುಲರ್‌ ಭಾಗ ಪೂರ್ಣ ಮತ್ತು ಸುತ್ತಮುತ್ತಲಿನ ಫುಟ್‌ಪಾತ್‌ಗಳಲ್ಲಿ ಕನಿಷ್ಠ 8 ಅಡಿ ಎತ್ತರದವರೆಗೆ ಜಾಹೀರಾತು ಫಲಕಗಳ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ ಎಂಬ ಅಂಶ ಪಾಲಿಕೆ ನೀಡಿದ  ಮಾಹಿತಿಯಲ್ಲಿದೆ. ಆದರೆ ಈ ಪ್ರದೇಶದಲ್ಲೇ ಬೃಹತ್‌ ಹೋರ್ಡಿಂಗ್ಸ್‌ ಹೆಚ್ಚು ಹೆಚ್ಚು ರಾರಾಜಿಸುತ್ತಿವೆ. ಹರಿದ ಬ್ಯಾನರ್‌ಗಳು ಹಾರಾಡುತ್ತಿವೆ. ಈ ಹರಿದ ಬ್ಯಾನರ್‌ಗಳು ನಗರದ ಸೌಂದರ್ಯವನ್ನು ಹಾಳುಗೆಡುವುತ್ತಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ಅಧಿಕೃತ ಜಾಹೀರಾತು ಏಜೆನ್ಸಿದಾರರು ಇರುವುದಾಗಿ ಪಾಲಿಕೆ ಮೂಲ ತಿಳಿಸಿದೆ. ಎಷ್ಟು ಜಾಹೀರಾತು ಫಲಕಗಳಿವೆ ಎಂಬುದು ಪಾಲಿಕೆಯ ಅಂಕೆಗೂ ಸಿಕ್ಕಿಲ್ಲ. ಅನಧಿಕೃತ ಜಾಹೀರಾತು ಏಜೆನ್ಸಿದಾರರೂ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಬೃಹತ್‌ ಜಾಹೀರಾತು ಹೋರ್ಡಿಂಗ್‌ ಅಳವಡಿಸುವ ಪೂರ್ವ ಪಾಲಿಕೆ ರಚಿಸಿದ ಕಾನೂನುಗಳ ಪಾಲನೆ ಜೊತೆಗೆ ಕ್ಷೇತ್ರ ವ್ಯಾಪ್ತಿಯ ಪೊಲೀಸ್‌ ಸಹಾಯಕ ಆಯುಕ್ತರ  ಗಮನಕ್ಕೆ ತಂದು, ನಿರಪೇಕ್ಷಣಾ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಕಟ್ಟಡ ಹೋರ್ಡಿಂಗ್‌ ಹೊರತುವ ಸಾಮರ್ಥ್ಯ ಹೊಂದಿದೆಯೇ ಎಂಬುದನ್ನೂ ಲಗತ್ತಿಸಬೇಕು. ಆದರೆ ಹೆಚ್ಚಿನೆಡೆ ಒಂದೇ ಕಟ್ಟಡದ ಮೇಲೆ ಹೋರ್ಡಿಂಗ್‌ ಹಾಗೂ ಟವರ್‌ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ರಾಜನಾಲಾಕ್ಕೆ ಹೊಂದಿಕೊಂಡು ಕಟ್ಟಲಾದ ಫಿಲ್ಲರ್‌ ಮೇಲೆ ನಿಂತ ಕಟ್ಟಡಗಳ ಮೇಲೂ ಅಳವಡಿಸಿರುವುದು ಅವಘಡಕ್ಕೆ ಆಹ್ವಾನ ನೀಡುವಂತಿದೆ ಎಂಬುದನ್ನು ಸಾರ್ವಜನಿಕರು ದೂರಿದ್ದಾರೆ.

ಉರುಳಾಗುವ ಕೇಬಲ್‌ವೈರ್‌: ಬಿಆರ್‌ಟಿಸಿ ಕಾರಿಡಾರ್‌ನಲ್ಲಿ ಕೂಡ ಕೇಬಲ್‌ಗಳು ಕುತ್ತಿಗೆ ಮಟ್ಟಕ್ಕೆ ಇಳಿಬಿದ್ದಿರುವುದು, ತುಂಡಾಗಿ ರಸ್ತೆಗೆ ಹರಡಿಕೊಂಡಿರುವುದು, ಪಾದಚಾರಿಗಳ ಕಾಲಿಗೆ ಉರುಳಾಗುವುದು ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇದ್ದರೂ ಅದರ ಬಗ್ಗೆ ನಿಗಾ ವಹಿಸಬೇಕಾದವರು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ನೂತನ ಕಾನೂನು ಜಾರಿ: ಹೆದ್ದಾರಿ ಬದಿಯ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಬರುವ ನಿಯಮಗಳು ಪಾಲಿಕೆಗೆ ಒಳಪಡದೆ ಜಾಹೀರಾತುದಾರ ಏಜೆನ್ಸಿ ಹಾಗೂ ಹೋರ್ಡಿಂಗ್‌ ಸ್ಥಾಪಿಸುವ ಕಟ್ಟಡಗಳ ಮಾಲೀಕರ ನಡುವೆ ಇರಲಿದೆ. ಅವುಗಳ ನಿರ್ವಹಣೆ ಕೂಡ ಏಜೆನ್ಸಿಯವರದ್ದಾಗಿರಲಿ‌ದೆ. ಅವಘಡಗಳು ಸಂಭವಿಸಿದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಒಳಪಡಲಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ನಿರ್ವಹಣೆ ಕಾಣದ ಹೋರ್ಡಿಂಗ್ಸ್‌ನ ರಾಡ್‌ಗಳು ಜೀರ್ಣಗೊಂಡು ಬಿದ್ದಲ್ಲಿ ಅಪಾಯಕಟ್ಟಿಟ್ಟ ಬುತ್ತಿ. ಅದರಲ್ಲೂ ವಿದ್ಯುತ್‌ ತಂತಿಗಳ ಮೇಲೆ ಬಿದ್ದು ತಂತಿ ಹರಿದು, ಮಳೆ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡಗಳು ಘಟಿಸಬಹುದು. ಈ ಎಲ್ಲ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿ ಪಾಲಿಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹ.

ಹುಬ್ಬಳ್ಳಿ ನಗರದ ಹೊಸೂರ ಸರ್ಕಲ್‌ನಲ್ಲಿ ಹಾರಾಡುತ್ತಿರುವ ಹೋರ್ಡಿಂಗ್‌ಗೆ ಅಳವಡಿಸಿರುವ ಜಾಹೀರಾತು ಬ್ಯಾನರ್‌

ಹುಬ್ಬಳ್ಳಿ ನಗರದ ಹೊಸೂರ ಸರ್ಕಲ್‌ನಲ್ಲಿ ಹಾರಾಡುತ್ತಿರುವ ಹೋರ್ಡಿಂಗ್‌ಗೆ ಅಳವಡಿಸಿರುವ ಜಾಹೀರಾತು ಬ್ಯಾನರ್‌

–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿಯ ಭಾರತ್‌ಮಿಲ್‌ ಸಮೀಪ ರಸ್ತೆ ಪಕ್ಕದಲ್ಲಿನ ಸಿಂಗಲ್‌ ಪೋಲ್‌ ಹೋರ್ಡಿಂಗ್‌ ಬಿದ್ದಿರುವುದು

ಹುಬ್ಬಳ್ಳಿಯ ಭಾರತ್‌ಮಿಲ್‌ ಸಮೀಪ ರಸ್ತೆ ಪಕ್ಕದಲ್ಲಿನ ಸಿಂಗಲ್‌ ಪೋಲ್‌ ಹೋರ್ಡಿಂಗ್‌ ಬಿದ್ದಿರುವುದು

ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಫುಟ್‌ಪಾತ್‌ಅನ್ನೇ ಆವರಿಸಿರುವ ಜಾಹೀರಾತು

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಫುಟ್‌ಪಾತ್‌ಅನ್ನೇ ಆವರಿಸಿರುವ ಜಾಹೀರಾತು

ಫಲಕ ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿ–ಧಾರವಾಡ ನಗರ ವ್ಯಾಪ್ತಿಯಲ್ಲಿ ದೊಡ್ಡದೊಡ್ಡ ಹೋರ್ಡಿಂಗ್‌ ನಿರ್ವಹಣೆ ಇಲ್ಲದೆ ಜಂಗು ತಿಂದು ಶಿಥಿಲಗೊಂಡಿವೆ. ಅವು ಬಿದ್ದು ಅವಘಡ ಸಂಭವಿಸಿದಲ್ಲಿ ಪ್ರಾಣಹಾನಿಯಾದಲ್ಲಿ ಯಾರು ಜವಾಬ್ದಾರರು?
ಗುರುವ ನಾಗರಿಕ ಹುಬ್ಬಳ್ಳಿ
ಮಹಾನಗರದಲ್ಲಿ ದೊಡ್ಡದೊಡ್ಡ ಜಾಹೀರಾತು ಹೋರ್ಡಿಂಗ್‌ ಏರಿಸುವ ಮೊದಲು ಕಟ್ಟಡ ಅದನ್ನು ತಡೆದುಕೊಳ್ಳುವ ಶಕ್ತಿಯುಳ್ಳದ್ದೇ ಅನ್ನೊದನ್ನು ದೃಢಪಡಿಸಿಕೊಳ್ಳಲಿ. ಅದರಲ್ಲೂ ನಾಲಾ ಮೇಲಿರುವ ಕಟ್ಟಡಕ್ಕೆ ಪರವಾನಗಿ ನೀಡಲೇಬಾರದು
- ಮೀನಾಕ್ಷಿ ವಂಟಮೂರಿ ಪಾಲಿಕೆ ಸದಸ್ಯೆ
- ಈಗಾಗಲೇ ಈ ಕುರಿತು ಅಧಿಕಾರಿಗಳ ಮಟದಲ್ಲಿ ಸಭೆ ನಡೆಸಿದ್ದು ಹೋರ್ಡಿಂಗ್ಸ್‌ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ. ಈಗಿರುವ ಜಾಹಿರಾತುಗಳು ಸಕ್ರಮವಾಗಿರುವುದರ ಜತೆಗೆ ಪಬ್ಲಿಕ್‌ ಜಾಹೀರಾತುಗಳೂ ಇವೆ
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಸಕ್ರಮ ಯಾವುದು? ಅಕ್ರಮ ಯಾವುದು? 

ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿರುದೆಲ್ಲವೂ ಸಕ್ರಮವೇ ಎನ್ನುತ್ತಾರೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ. ಪಾಲಿಕೆಯ ಸಿಬ್ಬಂದಿ ಹೇಳುವ ಪ್ರಕಾರ ಹು–ಧಾ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಸುವವರು ಪಾಲಿಕೆಯ ಮಾರುಕಟ್ಟೆ ವಿಭಾಗದಲ್ಲಿ ನೋಂದಣಿ ಮಾಡಿಸಿಕೊಂಡು ಪರವಾನಗಿ ಹೊಂದಿರಬೇಕು.

ಆದರೆ ಹುಬ್ಬಳ್ಳಿಯ ಗೋಕುಲ ರಸ್ತೆ ಕೇಶ್ವಾಪುರ ರಸ್ತೆ ಧಾರವಾಡದಲ್ಲಿ 144ರಷ್ಟು ಸಿಂಗಲ್‌ ಪೋಲ್‌ ಪಬ್ಲಿಕ್ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಕೆಲವು ಜೋರಾದ ಗಾಳಿ ಬೀಸಿದಾಗ ಓಲಾಡುತ್ತವೆ. ಈಗಾಗಲೇ ಇಂಥ ಎರಡು ಫಲಕಗಳು ನೆಲಕ್ಕುರುಳಿವೆ. ಈ ಕುರಿತು ಮಹಾನಗರ ಪಾಲಿಕೆಯ ಮಾರುಕಟ್ಟೆ ವಿಭಾಗದ ಸಿಬ್ಬಂದಿ ಹೇಳಿದ್ದಿಷ್ಟು. ‘ಮಹಾನಗರ ವ್ಯಾಪ್ತಿಯಲ್ಲಿ ಅಳವಡಿಸಲಾದ ಸಿಂಗಲ್‌ ಫೋಲ್‌  ಜಾಹೀರಾತುಗಳನ್ನು ಅಳವಡಿಕೆಗೆ ಜಾಹೀರಾತು ಪ್ರತಿನಿಧಿಯೊಬ್ಬರು ವಲಯ ಕಚೇರಿ ಅಂದರೆ ಬೆಳಗಾವಿ ವಲಯ ಕಚೇರಿಯಿಂದ ಪರವಾನಗಿ ತಂದು ಅಳವಡಿದ್ದಾರೆ.

ಈ ಜಾಹೀರಾತಿಗಳಿಗೆ ಪಾಲಿಕೆಗೂ ಸಂಬಂಧವೇ ಇಲ್ಲ. ಆದರೆ ಅದಕ್ಕೆ ಸಂಬಂಧಪಟ್ಟ ಚಲನ್‌ಗಳನ್ನು ತುಂಬಿಸಿಕೊಳ್ಳುವುದು ಮಾತ್ರ ಪಾಲಿಕೆ ವ್ಯಾಪ್ತಿಗೆ ಬರಲಿದೆ. ಎಲ್ಲವೂ ಸುಸೂತ್ರವಾಗಿದ್ದರೆ ಏನು ಸಮಸ್ಯೆಯಿರದು. ನಮ್ಮ ಪಾಲಿಕೆ ವ್ಯಾಪ್ತಿಯಲ್ಲಿ ಏನಾದರು ಅವಘಡ ಸಂಭವಿಸಿದಲ್ಲಿ ಮಾತ್ರ ಸ್ಥಳೀಯ ಪಾಲಿಕೆ ಗುರಿಯಾಗಬೇಕಾಗಿದೆ. ಆದರೆ ಇದುವರೆಗೂ ಅಂಥ ಹೋರ್ಡಿಂಗ್‌ ಅನಾಹುತಗಳು ನಡೆದಿಲ್ಲ’. ಹೋರ್ಡಿಂಗ್‌ನಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಗೆ ಹಾನಿಗಳಾದಲ್ಲಿ ಅದಕ್ಕೆ ಜಾಹೀರಾತು ಏಜೆನ್ಸಿದಾರರೇ ನೇರ ಹೊಣೆಯಾಗಲಿದ್ದಾರೆ. ಅಂಥ ಸಂದರ್ಭದಲ್ಲಿ ಏಜೆನ್ಸಿದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಸಿಬ್ಬಂದಿ ಹೇಳುತ್ತಾರೆ.

ಫುಟ್‌ಪಾತ್‌ ಮೇಲೆ ಜಾಹೀರಾತು; ರಸ್ತೆ ಮೇಲೆ ಪಾದಚಾರಿ!

ಮಹಾನಗರ ವ್ಯಾಪ್ತಿಯಲ್ಲಿ ಫುಟ್‌ಪಾತ್‌ ಮೇಲೆ ಎಲ್ಲಿಯೂ ಜಾಹೀರಾತು ಫಲಕಗಳನ್ನು ಅಳವಡಿಸಬಾರದು ಎಂಬ ಅಂಶ ಪಾಲಿಕೆಯ ನಿಯಮಪತ್ರದಲ್ಲಿದೆ. ಆದರೆ ಅದನ್ನು ಧಿಕ್ಕರಿಸಿ ಫುಟ್‌ಪಾತ್‌ ಮೇಲೆ ಹೋಟೆಲ್‌ ಅಕಾಡೆಮಿಗಳು ಝೆರಾಕ್ಸ್‌ ಶಾಪ್‌ನವರು ತಮ್ಮ ಜಾಹೀರಾತು ಫಲಕಗಳನ್ನು ಅಳವಡಿಸಿದ್ದಾರೆ. ಇದರಿಂದ ಪಾದಚಾರಿಗಳು ಫುಟ್‌ಪಾತ್‌ ಬಿಟ್ಟು ಹೆದ್ದಾರಿಗಿಳಿದು ಮುಂದೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಹುಬ್ಬಳ್ಳಿ–ಧಾರವಾಡ ಬಿಆರ್‌ಟಿಎಸ್‌ ಮಾರ್ಗದುದ್ದಕ್ಕೂ ಕಂಡುಬರುವ ಸಾಮಾನ್ಯದೃಶ್ಯವಾಗಿದೆ. ಮರಗಳ ಮೇಲೆ ಜಾಹೀರಾತುಗಳನ್ನು ಅಳವಡಿಸಬಾರದು ಎಂಬ ನಿಯಮವಿದ್ದರೂ ಮರಕ್ಕೆ ಮೊಳೆ ಹೊಡೆದು ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಎಲ್ಲೆಡೆ ಕಾಣಸಿಗುತ್ತವೆ.  ಜಾಹೀರಾತು ಅಳವಡಿಕೆಗೆ ಸಂಬಂಧಪಟ್ಟ ಇಷ್ಟೆಲ್ಲ ಅಧ್ವಾನಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ನಿರ್ವಹಣೆ ಇಲ್ಲದ ಹೋರ್ಡಿಂಗ್ಸ್‌

ಜಾಹೀರಾತು ಏಜೆನ್ಸಿಯವರು ಬೃಹತ್‌ ಹೋರ್ಡಿಂಗ್ಸ್‌ ಸ್ಥಾಪಿಸಲು ಆಯ್ದುಕೊಳ್ಳುವ ಕಟ್ಟಡದ ಮಾಲೀಕರೊಂದಿಗೆ ಒಮ್ಮೆ ಒಡಂಬಡಿಕೆ ಮಾಡಿಕೊಂಡು ಹೋರ್ಡಿಂಗ್ಸ್‌ ಸ್ಥಾಪಿಸಿದ ಮೇಲೆ ಅವುಗಳ ನಿರ್ವಹಣೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕೆಲವರು ದೂರಿದರು. ಹೋರ್ಡಿಂಗ್ಸ್‌ ಸ್ಥಾಪಿಸುವಾಗ ಬಳಿಯುವ ಪ್ರೈಮರ್‌ ಹೊರತಾಗಿ ಮುಂದೆ ಅವುಗಳಿಗೆ ಪೇಂಟ್‌ ಮಾಡುವುದೇ ಇಲ್ಲ. ಇದರಿಂದ ಕಬ್ಬಿಣದ ಪಿಲ್ಲರ್‌ ರಾಡ್‌ ಜಂಗು ಹಿಡಿದು ಸವಕಳಿಯುಂತಾಗಿ ಯಾವ ಹೊತ್ತಿಗೆ ಉರುಳುವುದೋ ಎಂಬ ಭಯ ಕಾಡಲಿದೆ ಎಂದು ಆತಂಕವನ್ನು ಭಾರಿ ಹೋರ್ಡಿಂಗ್ಸ್‌ ಕೆಳಭಾಗದಲ್ಲಿರುವ ಶಾಪ್‌ನವರು ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT