ಬುಧವಾರ, ಆಗಸ್ಟ್ 21, 2019
28 °C
ಭಂಡಿವಾಡ: 150ಕ್ಕೂ ಹೆಚ್ಚು ಮನೆಗಳು ಭಾಗಶಃ ನೆಲಸಮ

ಪರಿಹಾರ ‘ದಾಖಲೆ’ಗೆ ಮಾಲೀಕರ ಪರದಾಟ

Published:
Updated:
Prajavani

ಹುಬ್ಬಳ್ಳಿ: ‘ಮನೆಯೊಳಗೇ ಜೀವಂತ ಸಮಾಧಿಯಾಗಬೇಕಿದ್ದ ನಾವು ಉಳಿದಿದ್ದೇ ಹೆಚ್ಚು. ಹುಟ್ಟಿ ಬೆಳೆದ ಮನೆ ಕಣ್ಣೇದುರಿಗೇ ನೆಲಸಮವಾಗಿದೆ. ಇದಕ್ಕೆ ನಾನೇ ಜೀವಂತ ಸಾಕ್ಷಿ. ಮನೆ ಕಳೆದುಕೊಂಡಿರುವ ನಮಗೆ ಪರಿಹಾರ ನೀಡಲು ಇನ್ನೇನು ದಾಖಲೆ ಬೇಕು...?’ ಎಂದು ಭಂಡಿವಾಡದ ಫಕ್ಕೀರಪ್ಪ ಬಸಪ್ಪ ನಾಯ್ಕರ ಸಿಟ್ಟಿನಿಂದ ಪ್ರಶ್ನಿಸಿದರು.

ಕುಸಿದಿರುವ ನಾಯ್ಕರ ಮನೆಗೆ ಪರಿಹಾರ ನೀಡಲು ಗ್ರಾಮ ಪಂಚಾಯ್ತಿಯವರು ಕೇಳುತ್ತಿರುವ ದಾಖಲೆಗಳೆಲ್ಲವೂ, ಮಣ್ಣೊಳಗೆ ಒಂದಾಗಿವೆ. ಎಷ್ಟೇ ಹುಡುಕಾಡಿದರೂ ಆಧಾರ್ ಕಾರ್ಡು, ಜಮೀನು ಪತ್ರಗಳು, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಎಲ್ಲಾ ದಾಖಲೆಗಳ ಕುರುಹು ಸಿಗುತ್ತಿಲ್ಲ.

‘ಉಟ್ಟ ಬಟ್ಟೆಯಲ್ಲೇ ರಾತ್ರೋರಾತ್ರಿ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿದ್ದೇವೆ. ಕೂಡಿಟ್ಟಿದ್ದ ದವಸ–ಧಾನ್ಯ, ದಾಖಲೆ ಪತ್ರ, ಪಾತ್ರೆ, ಪೀಠೋಪಕರಣ ಸೇರಿದಂತೆ ಎಲ್ಲವೂ ಮಣ್ಣು ಪಾಲಾಗಿವೆ. ಅಧಿಕಾರಿಗಳು ಕೇಳುವ ದಾಖಲೆಗಳು ನನ್ನಲ್ಲಿ ಇಲ್ಲ. ಹೀಗಾದರೆ, ನಾನು ಪರಿಹಾರ ಪಡೆದು ಮತ್ತೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ?’ ಎಂದು ನಾಯ್ಕರ ಕಣ್ಣೀರಿಟ್ಟರು.

ನಾಯ್ಕರ ಅವರಂತಹ ಅನೇಕ ಮಂದಿ ಭಂಡಿವಾಡದಲ್ಲಿದ್ದಾರೆ. ಧಾರಾಕಾರ ಮಳೆಗೆ ಕುಸಿದಿರುವ ಗ್ರಾಮದ 150ಕ್ಕೂ ಹೆಚ್ಚು ಮನೆಗಳ ಮಾಲೀಕರ ಪೈಕಿ, ಹಲವರ ಬಳಿ ಸರ್ಕಾರದ ಪರಿಹಾರ ಪಡೆಯಲು ಅಗತ್ಯವಿರುವ ದಾಖಲೆಗಳು ಇಲ್ಲ. ಕಣ್ಣೇದುರಿಗೆ ಸಕಲವನ್ನು ಕಳೆದುಕೊಂಡಿರುವ ಸಾಕ್ಷಿ ಇವರಾಗಿದ್ದರೂ, ಪರಿಹಾರ ಸಿಗುತ್ತದೆಯೊ ಇಲ್ಲವೋ ಎಂಬ ಆತಂಕ ಇವರನ್ನು ಆವರಿಸಿದೆ.

ಐದು ದಾಖಲೆ ಕಡ್ಡಾಯ:

ಮನೆಗಳ ಭಾಗಶಃ ಹಾಗೂ ಪೂರ್ಣ ಕುಸಿತಕ್ಕೆ ಪರಿಹಾರ ಪಡೆಯಲು ತಾಲ್ಲೂಕು ಆಡಳಿತವು ಐದು ದಾಖಲೆಗಳನ್ನು ಒದಗಿಸುವಂತೆ ಮನೆ ಮಾಲೀಕರಿಗೆ ಸೂಚಿಸಿದೆ. ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿ, ಮನೆಯ ಉತಾರ ಹಾಗೂ ಕುಸಿತದ ಚಿತ್ರವನ್ನು ಒದಗಿಸಿದವರಷ್ಟೇ ಪರಿಹಾರಕ್ಕೆ ಅರ್ಹರು.

‘ಕುಸಿದಿರುವ ಎಲ್ಲಾ ಮನೆಗಳಿಗೂ ಭೇಟಿ ನೀಡಿ, ಮಾಹಿತಿ ದಾಖಲಿಸಿಕೊಂಡು ಫೋಟೊ ತೆಗೆದುಕೊಂಡು ಬರುತ್ತಿದ್ದೇವೆ.  ಭಾಗಶಃ ಮನೆ ಕುಸಿದಿರುವವ ಬಳಿ ದಾಖಲೆಗಳಿದ್ದರೆ, ಪೂರ್ಣ ಕುಸಿದ ಮನೆ ಮಾಲೀಕರ ಬಳಿ ಕೆಲ ದಾಖಲೆಗಳಿಲ್ಲ. ಅಂತಹವರಿಗೆ ಪರಿಹಾರ ನೀಡುವ ಸಂಬಂಧ ಏನು ಮಾಡಬೇಕೆಂದು ಮೇಲಾಧಿಕಾರಿಗಳಿಂದ ನಮಗಿನ್ನೂ ಸೂಚನೆ ಬಂದಿಲ್ಲ’ ಎಂದು ಭಂಡಿವಾಡ ಗ್ರಾಮ ಪಂಚಾಯ್ತಿ ಅಧಿಕಾರಿ ಅಶ್ವಿನಿ ರಾಠೋಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾವು ಒದಗಿಸುವ ದಾಖಲೆ ಹಾಗೂ ಫೋಟೊ ಪರಿಶೀಲಿಸಿ ಸಿವಿಲ್ ಎಂಜಿನಿಯರ್ ಪರಿಹಾರದ ಮೊತ್ತವನ್ನು ನಿರ್ಧರಿಸುತ್ತಾರೆ. ಇದುವರೆಗೆ ಸೂಕ್ತ ದಾಖಲೆ ಒದಗಿಸಿದ 40 ಸಂತ್ರಸ್ತರಿಗೆ ಕನಿಷ್ಠ ₹5 ಸಾವಿರದಿಂದ ₹33 ಸಾವಿರದವರೆಗೆ ಪರಿಹಾರದ ಚೆಕ್ ವಿತರಿಸಿದ್ದೇವೆ’ ಎಂದು ಹೇಳಿದರು.

ಪರಿಹಾರ ಕೇಂದ್ರದಲ್ಲಿ 600 ಮಂದಿ

ಗ್ರಾಮದಲ್ಲಿರುವ ವಿಶಾಲವಾದ ಮಾರುತಿ ಮಂದಿರದಲ್ಲೇ ಹತ್ತು ದಿನದ ಹಿಂದೆ ತಾಲ್ಲೂಕು ಆಡಳಿತವು ಪರಿಹಾರ ಕೇಂದ್ರವನ್ನು ತೆರೆದಿದೆ. ಆರಂಭದಲ್ಲಿ 900 ಮಂದಿ ಇದ್ದ ಸಂತ್ರಸ್ತರ ಸಂಖ್ಯೆ ಇದೀಗ 500ಕ್ಕೆ ಇಳಿಕೆಯಾಗಿದೆ. ಕೇಂದ್ರಕ್ಕೆ ಇಸ್ಕಾನ್‌ನಿಂದ ಆಹಾರ ಪೂರೈಸಲಾಗುತ್ತಿದೆ.

‘ಕನಿಷ್ಠ 45ರಿಂದ 50 ವರ್ಷಗಳಷ್ಟು ಹಳೆಯದಾದ ಬಹುತೇಕ ಮಡ್ಡಿ ಮನೆಗಳು ಕುಸಿದಿವೆ. ಮನೆಯ ಮೇಲ್ಭಾಗವು ಮಣ್ಣಿನಿಂದ ಕೂಡಿದ್ದರಿಂದ, ಮಳೆ ನೀರು ನಿಂತು ಚಾವಣಿ ಶಿಥಿಲಗೊಂಡು ಮನೆಗಳು ಕುಸಿದಿವೆ. 150ಕ್ಕೂ ಹೆಚ್ಚು ಮನೆಗಳು ಕುಸಿದಿರುವ ವರದಿಯಾಗಿದೆ’ ಎಂದು ಭಂಡಿವಾಡ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ರಾಠೋಠ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)