ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಮನೆ ಮನೆಯಲ್ಲೂ ಹಿಟ್ಟಿನ ಗಿರಣಿ...

ಗಿರಣಿಗೆ ಅಲೆದಾಡುವುದನ್ನು ತಪ್ಪಿಸುವ ಪೋರ್ಟೆಬಲ್ ಯಂತ್ರ
Last Updated 19 ಸೆಪ್ಟೆಂಬರ್ 2022, 11:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಗೋಧಿ, ಜೋಳವನ್ನು ಗಿರಣಿಗೆ ಹಾಕಿಸಿಕೊಂಡು ಬರುವುದು ಸಾಕಾಗಿದ್ದರೆ, ನಿಮಗಾಗಿಯೇ ಬಂದಿದೆ ಹೊಸದೊಂದು ಪೋರ್ಟೆಬಲ್ ಗಿರಣಿ. ಇದು ಧಾರವಾಡದ ಕೃಷಿ ಮೇಳದಲ್ಲಿನ ಒಂದು ಆಕರ್ಷಣೆ.

ಪ್ರತಿ ಬಾರಿ ಗಿರಣಿಗೆ ಕಾಳು ಒಯ್ದು ಕೊಡುವುದು, ಅಲ್ಲಿ ಕಾಯುವುದು ಇಂಥ ಜಂಜಾಟಗಳಿಂದ ತಪ್ಪಿಸಲು ಮನೆಯಲ್ಲೇ ಎಲ್ಲ ರೀತಿಯ ಕಾಳುಗಳನ್ನು ಹಿಟ್ಟು ಮಾಡಲು ‘ಗ್ರೈಂಡ್‌ಮಾ’ ಕಂಪನಿಯು ಸಂಪೂರ್ಣ ಸ್ವಯಂ ಚಾಲಿತ ‘ಹೈಟೆಕ್’ ಯಂತ್ರವೊಂದನ್ನು ಪ‍ರಿಚಯಿಸಿದೆ.

ಇದು ನಿಮ್ಮ ಮನೆಯ ಏರ್ ಕೂಲರ್ ಅಥವಾ ಡಿಶ್ ವಾಷರ್‌ಗೆ ಬೇಕಾಗುವಷ್ಟು ಜಾಗವನ್ನು ಮಾತ್ರ ಆಕ್ರಮಿಸುತ್ತದೆ. ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕದಲ್ಲೇ ಕಾಳುಗಳನ್ನು ರುಬ್ಬುತ್ತದೆ. ಒಂದು ಎಚ್‌.ಪಿ. ಯಂತ್ರವು ಗಂಟೆಗೆ 10 ಕೆ.ಜಿ. ಮತ್ತು ಎರಡು ಎಚ್‌.ಪಿ. ಯಂತ್ರವು ಗಂಟೆಗೆ 20 ಕೆ.ಜಿ. ಕಾಳುಗಳನ್ನು ಹಿಟ್ಟು ಮಾಡುತ್ತದೆ.

ಸಾಮಾನ್ಯವಾಗಿ ಗಿರಣಿಯಲ್ಲಿ ಒಂದು ಕೆ.ಜಿ. ಜೋಳ, ಗೋಧಿಯನ್ನು ಹಿಟ್ಟು ಮಾಡಿಸಲು ₹5ರಿಂದ ₹6 ತಗುಲುತ್ತದೆ. ಆದರೆ, ಒಂದು ಕೆ.ಜಿ. ಹಿಟ್ಟು ರುಬ್ಬಲು ತಗುಲುವುದು ಕೇವಲ 35 ಪೈಸೆ ವೆಚ್ಚವಾಗುತ್ತದೆ ಎಂಬುದೇ ಈ ಯಂತ್ರದ ವಿಶೇಷ. ಹೋಟೆಲ್‌ಗಳಿಗೆ ಈ ಯಂತ್ರ ಹೇಳಿ ಮಾಡಿಸಿದಂತಿದೆ.

ಒಮ್ಮೆಲೇ ಜಾಸ್ತಿ ಹಿಟ್ಟು ಮಾಡಿಸಿಟ್ಟರೆ ಹಾಳಾಗುವ ಚಿಂತೆ ಇದ್ದವರು ಮನೆಯಲ್ಲೇ ಈ ಯಂತ್ರವನ್ನು ಇಟ್ಟುಕೊಂಡು, ತಮ್ಮ ಸಮಯಕ್ಕೆ ಅನುಸಾರವಾಗಿ ಅಗತ್ಯವಿದ್ದಷ್ಟೇ ಕಾಳು ರುಬ್ಬಿಕೊಳ್ಳಬಹುದು.

ಯಾವೆಲ್ಲ ಕಾಳು?: ಗೋಧಿ, ಜೋಳ, ಸಜ್ಜೆ, ಮೆಕ್ಕೆಜೋಳ, ಅಕ್ಕಿ, ಹೆಸರುಕಾಳು, ರಾಗಿ, ಕಡಲೆ ಬೇಳೆ, ಕಾಫಿ ಬೀಜ, ಸಕ್ಕರೆ, ಉದ್ದಿನ ಬೇಳೆ, ಅರಿಸಿಣ, ಕೋತಂಬರಿ ಕಾಳು, ಒಣ ಮಸಾಲೆ, ಆಯುರ್ವೇದ ಪದಾರ್ಥ, ಒಣ ನೆಲ್ಲಿ, ಮೆಹಂದಿ, ಉಪ್ಪು ಹೀಗೆ ವಿವಿಧ ರೀತಿಯ ಪದಾರ್ಥಗಳನ್ನು ಪುಡಿ ಮಾಡಬಹುದು. ಹಿಟ್ಟು ಮಾತ್ರವಲ್ಲದೆ ನುಚ್ಚು, ರವೆ, ಪಶು ಖಾದ್ಯವನ್ನು ಹದ ಮಾಡಿ ಸಿದ್ಧಪಡಿಸುವ ಸೌಲಭ್ಯವಿದೆ. ಹಿಟ್ಟಿನಲ್ಲಿ ತೌಡು, ನುಚ್ಚು ಸೋಸಬೇಕೆಂಬ ತಲೆಬಿಸಿಯೂ ಇಲ್ಲ.

ಯಂತ್ರದಲ್ಲಿ ಕಲ್ಲಿನ ಬದಲಾಗಿ ತುಕ್ಕು ಹಿಡಿಯಲಾರದ ಉಕ್ಕಿನ ಚೇಂಬರ್ ಬಳಸಲಾಗಿದೆ. ಇದರಲ್ಲಿ ಬಳಸಲಾದ ಎಲೆಕ್ಟ್ರಿಕ್ ಮೋಟಾರ್‌ಗೆ 5 ವರ್ಷ ಮತ್ತು ಗ್ರೈಂಡಿಂಗ್ ಚೇಂಬರ್‌ಗೆ 35 ವರ್ಷಗಳ ಗ್ಯಾರಂಟಿ ಇದೆ. ಗಮನ ಸೆಳೆಯುವ ವಿನ್ಯಾಸವನ್ನೂ ಹೊಂದಿದೆ.

ಸಂಪೂರ್ಣ ಸುರಕ್ಷಿತ: ಯಂತ್ರವು ಸಂಪೂರ್ಣ ಸ್ವಯಂಚಾಲಿತ ಆಗಿರುವ ಕಾರಣ ಸುರಕ್ಷತೆ ದೃಷ್ಟಿಯಿಂದಲೂ ಆತಂಕ ಇಲ್ಲ. ವಿದ್ಯುತ್ ಸಂಪರ್ಕದ ಸ್ವಿಚ್ ಹಾಕಿದ ತಕ್ಷಣ ಯಂತ್ರ ತಿರುಗಲು ಆರಂಭಿಸುವುದಿಲ್ಲ. ಬದಲಾಗಿ, ಯಂತ್ರದಲ್ಲಿ ಕಾಳುಗಳನ್ನು ಹಾಕಿದಾಗ ಮಾತ್ರ ಕಾರ್ಯಾಚರಣೆ ಆರಂಭಿಸುತ್ತದೆ. ಕಾಳು ಖಾಲಿ ಆದ ತಕ್ಷಣ ಕಾರ್ಯ ನಿಲ್ಲಿಸುತ್ತದೆ. ಮುಂದುವರಿದು, ಮಕ್ಕಳು ಆಕಸ್ಮಿಕವಾಗಿ ಬಾಗಿಲು ತೆರೆದರೆ ಯಂತ್ರ ತಿರುಗುವುದನ್ನು ತಕ್ಷಣ ನಿಲ್ಲಿಸುತ್ತದೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಓಂ ಸಾಯಿ ಎಂಟರ್‌ಪ್ರೈಸಸ್ ಕರ್ನಾಟಕದಾದ್ಯಂತ ಇದರ ವಿತರಣೆಯ ಹಕ್ಕು ಪಡೆದಿದೆ. 1 ಎಚ್.ಪಿ ಯಂತ್ರದ ಬೆಲೆ ₹24,000 ಮತ್ತು 2 ಎಚ್.ಪಿ ಯಂತ್ರದ ಬೆಲೆ ₹31,500 ಇದೆ. ಕೃಷಿ ಮೇಳದಲ್ಲಿಯೇ ಯಂತ್ರ ಬುಕ್ ಮಾಡಿದರೆ ತಲಾ ₹6,000 ರಿಯಾಯಿತಿ ನೀಡಲಾಗುತ್ತದೆ. ಮಾಹಿತಿಗಾಗಿ ಮೊ: 99452 52294 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT