ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣ| ಮೇಲ್ಸೇತುವೆ; ಸಮಸ್ಯೆಗಳದ್ದೇ ಮೇಲಾಟ!

ಪೂರ್ಣಗೊಳ್ಳದ ಭೂಸ್ವಾಧೀನ ಪ್ರಕ್ರಿಯೆ; ಕಾಮಗಾರಿ ತಾತ್ಕಾಲಿಕ ಸ್ಥಗಿತ
ನಾಗರಾಜ್‌ ಬಿ.ಎನ್‌
Published : 16 ಸೆಪ್ಟೆಂಬರ್ 2024, 4:25 IST
Last Updated : 16 ಸೆಪ್ಟೆಂಬರ್ 2024, 4:25 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಒಂದೆಡೆ ಕಬ್ಬಿಣದ ರಾಡ್‌ ಉರುಳಿ ಬೀಳುವ ಭಯ, ಇನ್ನೊಂದೆಡೆ ವಾಹನಗಳ ಸಂಚಾರ ದಟ್ಟಣೆ. ಕಾಮಗಾರಿ ಸ್ಥಳದ ಅಕ್ಕಪಕ್ಕ ಓಡಾಡಿದರೂ ಅಪಾಯದ ಭೀತಿ. ಒಟ್ಟಾರೆ ದಿಕ್ಕುಗಾಣದ ಸ್ಥಿತಿ. ತುಸು ಹೆಚ್ಚು ಕಡಿಮೆಯಾದರೂ ಪಾದಚಾರಿಗಳು ಕೆಸರಿನ ಹೊಂಡದಲ್ಲಿ ಬೀಳುವ ಅಥವಾ ಅಪಘಾತಕ್ಕೀಡಾಗುವ ಆತಂಕ. ಇದೆಲ್ಲವೂ ಪಾದಚಾರಿಗಳ ವ್ಯಥೆಯಾದರೆ, ಅಲ್ಲಿಯೇ ಇರುವ ಅಂಗಡಿ–ಮುಂಗಟ್ಟುಗಳ ವ್ಯಾಪಾರಸ್ಥರ ಗೋಳು ಹೇಳತೀರದು...

ಇದು ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮ ವೃತ್ತದ ಸುತ್ತಮುತ್ತಲಿನ ಸಮಸ್ಯೆ. ವೃತ್ತವನ್ನು ಕೇಂದ್ರವಾಗಿಟ್ಟುಕೊಂಡು ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಂದಾಜು 4 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ನಡೆದಿದೆ. ನಿಧಾನಗತಿಯ ಕಾಮಗಾರಿಯಿಂದ ಸಮಸ್ಯೆಗಳು ಹೆಚ್ಚುತ್ತಿದ್ದು, ಜನರು ವಾಹನ ಸವಾರರ ಸಮಸ್ಯೆ ಹೆಚ್ಚಾಗುತ್ತಿದೆ.

ಎರಡು ವರ್ಷದ ಹಿಂದಿನವರೆಗೆ ‘ರಾಣಿ ಚನ್ನಮ್ಮ ವೃತ್ತ’ ಎಂದರೆ ಹುಬ್ಬಳ್ಳಿಯ ಹೆಗ್ಗುರುತಾಗಿತ್ತು. ಎಲ್ಲೆಡೆ ಪ್ರಖ್ಯಾತಿ ಪಡೆದು, ಅನೇಕ ಚಲನಚಿತ್ರಗಳ ಚಿತ್ರೀಕರಣದ ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿತ್ತು. ಈಗ ರಾಣಿ ಚನ್ನಮ್ಮ ವೃತ್ತ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲ ಹೊಂಡಗಳು, ತೆಗ್ಗು ಬಿದ್ದ ರಸ್ತೆಗಳು, ಕಿತ್ತು ಹೋದ ನೀರಿನ ಪೈಪ್‌ ಲೈನ್‌ಗಳು, ಅಲ್ಲಲ್ಲೇ ರಾಶಿ ಬಿದ್ದ ಭೂಗತ ಕೇಬಲ್‌ಗಳು, ಕಲ್ಲು–ಮಣ್ಣಿನ ರಾಶಿ, ಅಲ್ಲಲ್ಲೇ ಪಾರ್ಕಿಂಗ್‌ ಆಗುವ ವಾಹನಗಳು... ಒಟ್ಟಾರೆ ಚನ್ನಮ್ಮ ವೃತ್ತ ಸಂಪೂರ್ಣ ಹಾಳಾಗಿದೆ. ಹೆಸರಿನ ಅಸ್ತಿತ್ವವೇ ಕಳೆದುಕೊಳ್ಳುವಂತಹ ಸ್ಥಿತಿಯಲ್ಲಿದೆ.

ಅಷ್ಟೇ ಅಲ್ಲ, ಚನ್ನಮ್ಮ ವೃತ್ತ ಸಂಪರ್ಕಿಸುವ ವಿಜಯಪುರ ರಸ್ತೆಯ ಕ್ಲಬ್‌ ರಸ್ತೆವರೆಗೆ ಮತ್ತು ಚನ್ನಮ್ಮ ವೃತ್ತದಿಂದ ಧಾರವಾಡದ ಕಡೆ ಹೊಸೂರು ಮಾರ್ಗ ಹಾಗೂ ಹೊಸೂರಿನಿಂದ ರಾಣಿವಿಲಾಸ ವೃತ್ತದವರೆಗಿನ ಕಥೆಯೂ ಭಿನ್ನವಾಗಿಲ್ಲ.

ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ, ಬಹುನಿರೀಕ್ಷಿತ ಈ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಆಗಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ತಾಂತ್ರಿಕ ಕಾರಣದಿಂದ ಇನ್ನೂ ಕುಂಟುತ್ತಲೇ ಸಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, 2025ರ ಜೂನ್‌ ಒಳಗೆ ಕಾಮಗಾರಿ ಮುಕ್ತಾಯವಾಗಲಿದೆ. ಶೇ 40ರಷ್ಟು ಕಾಮಗಾರಿ ಬಾಕಿಯಿದ್ದು, ಇನ್ನೂ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಇವೆಲ್ಲವನ್ನೂ ಗಮನಿಸಿದರೆ, ಇನ್ನೂ ಎರಡು–ಮೂರು ವರ್ಷ ವಿಳಂಬವಾದರೂ ಅಚ್ಚರಿಯಿಲ್ಲ!.

ಇನ್ನೂ ಮುಗಿಯದ ಭೂಸ್ವಾಧೀನ..!

2021ರ ಜನವರಿಯಲ್ಲಿ ₹349.49 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತೀನ್‌ ಗಡ್ಕರಿ ಅವರು ವರ್ಚ್ಯುವಲ್‌ ಮೂಲಕ ಚಾಲನೆ ನೀಡಿದ್ದರು. ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯ ಸರ್ಕಾರ ಅನುಷ್ಠಾನದ ಹೊಣೆ ಹೊತ್ತಿದೆ. ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ದೆಹಲಿ ಮೂಲದ ಜಂಡು ಕನ್‌ಸ್ಟ್ರಕ್ಸನ್‌ ಪ್ರೈ.ಲಿ. ಮತ್ತು ರಾಮಕುಮಾರ ಕಾಂಟ್ರೇಕ್ಟರ್‌ ಕಂಪನಿ ಗುತ್ತಿಗೆ ಪಡೆದಿದ್ದು, ಮೂರು ವರ್ಷದ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಒಪ್ಪಂದ ಮಾಡಿಕೊಂಡಿದ್ದವು. ಅದರನ್ವಯ, 2024ರ ಜೂನ್‌ 4ರಂದೇ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಸಮಸ್ಯೆ ಎದುರಾಗುತ್ತಿದೆ.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಲ್ಯಾಮಿಂಗ್ಟನ್‌ ರಸ್ತೆಯ ಅಶೋಕ ಟಾವರ್‌ ಹೋಟೆಲ್‌ವರೆಗಿನ ಅಕ್ಕಪಕ್ಕದ ಜಾಗ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಇಲ್ಲಿ ಖಾಸಗಿ ಹಾಗೂ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಜಾಗವಿದ್ದು, ಖಾಸಗಿಯವರಿಗೆ ನೋಟಿಸ್‌ ನೀಡಲಾಗಿದೆ. ಸರ್ಕಾರಿ ಇಲಾಖೆಗಳಿಗೂ ಮಾಹಿತಿ ನೀಡಲಾಗಿದೆ. ಶಿವಕೃಷ್ಣ ಮಂದಿರದ ಭಕ್ತರು ಕೋರ್ಟ್‌ನಲ್ಲಿ ತಡೆ ತರಲು ಚಿಂತಿಸಿದ್ದಾರೆ. ಇತ್ತ, ಈದ್ಗಾ ಮೈದಾನದ ಕಾಂಪೌಂಡ್‌ ತೆರವು ಕುರಿತು ಸಹ ವಿರೋಧ ವ್ಯಕ್ತವಾಗುತ್ತಿವೆ.

ಭೂಸ್ವಾಧೀನ ಪ್ರಕ್ರಿಯೆ ತಡವಾಗಿದ್ದಕ್ಕೆ ಕಾಮಗಾರಿ ವಿಳಂಬವಾಗಿದೆ. ಅಧಿಕಾರಿಗಳಿಗೆ ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ. ತುರ್ತು ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ

-ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಸುರಕ್ಷತಾ ಕ್ರಮವಹಿಸದೆ ಕಾಮಗಾರಿ ನಡೆಸುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕಂಪನಿಗೆ ಎಚ್ಚರಿಕೆ ನೀಡಬೇಕು

- ಪ್ರಸಾದ ಅಬ್ಬಯ್ಯ ಶಾಸಕ

ಅವಘಡ ನಡೆದ ಹಿನ್ನೆಲೆಯಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ

-ದಿವ್ಯಪ್ರಭು ಜಿಲ್ಲಾಧಿಕಾರಿ

ಕಾಮಗಾರಿಯಿಂದ ಚನ್ನಮ್ಮ ವೃತ್ತದ ಬಳಿ ವಾಹನ ಓಡಿಸುವುದೇ ದುಸ್ತರವಾಗಿದೆ. ಎಲ್ಲಿ ಬೀಳುತ್ತೇವೆಯೋ ಎಲ್ಲಿಂದ ವಾಹನ ಬಂದು ನುಗ್ಗುತ್ತವೆಯೋ ಎಂದು ತಿಳಿಯುವುದಿಲ್ಲ.

-ಮಂಜುನಾಥ ಅಥಣಿ ಮೊಬೈಲ್‌ ಫೋನ್‌ ವ್ಯಾಪಾರಸ್ಥ

ಕಾಮಗಾರಿಯಿಂದ ನೀಲಿಜಿನ್‌ ರಸ್ತೆಯ ಪ್ರವೇಶದಲ್ಲಿಯೇ ಬೇಂದ್ರೆ ಬಸ್‌ ಚಿಗರಿ ಬಸ್‌ ಹಾಗೂ ಸಾರಿಗೆ ಬಸ್‌ ನಿಲ್ಲುವುದರಿಂದ ಸಂಚಾರ ದಟ್ಟಣೆ ತೀವ್ರವಾಗಿದೆ.

-ಸತ್ಪಾಲ್‌ಸಿಂಗ್‌ ಕೋಹ್ಲಿ ಆಟೊಮೊಬೈಲ್‌ ವ್ಯಾಪಾರಸ್ಥ

ಕೊನೆಯಾಗದ ಅವಘಡಗಳು...

ಗುತ್ತಿಗೆ ಪಡೆಯುವಾಗ ವಿಧಿಸಿದ್ದ ಷರತ್ತುಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸಿದ ಪರಿಣಾಮ ಮೂರು ವರ್ಷಗಳಲ್ಲಿ ಮೂರು ಅವಘಡಗಳು ಸಂಭವಿಸಿವೆ. 2022 ಎಪ್ರಿಲ್‌ 13ರಂದು ವಾಣಿವಿಲಾಸ ವೃತ್ತದ ಬಳಿ ಮೇಲ್ಸೇತುವೆಯ ಪಿಲ್ಲರ್‌ನ ಸೆಂಟ್ರಿಂಗ್‌ ಕುಸಿದು ಬಿದ್ದು ಪಶ್ಚಿಮ ಬಂಗಾಳದ ಕಾರ್ಮಿಕ ದೇವರಾಯ ಗಾಯಗೊಂಡಿದ್ದರು. 2023ರ ಜೂನ್‌ 20ರಂದು ಕ್ಲಬ್‌ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಕ್ರೇನ್‌ ನಿಯಂತ್ರಣ ತಪ್ಪಿ ಉರುಳಿತ್ತು. ಪರಿಣಾಮ ಮೂರು ಬೈಕ್‌ ಆಂಬುಲೆನ್ಸ್‌ ಜಖಂಗೊಂಡು ರಸ್ತೆ ಪಕ್ಕದಲ್ಲಿರುವ ಐದು ವಿದ್ಯುತ್‌ ಕಂಬಗಳು ಉರುಳಿದ್ದವು. ಕೆಲದಿನಗಳ ಹಿಂದೆ ಹಳೇಕೋರ್ಟ್‌ ವೃತ್ತದ ಬಳಿ ಕಬ್ಬಿಣದ ಆ್ಯಂಗಲ್‌ ಪಟ್ಟಿ ಬಿದ್ದು ಎಎಸ್‌ಐ ನಭಿರಾಜ ಗಂಭೀರ ಗಾಯಗೊಂಡು ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪರಿಣಾಮ ಜಿಲ್ಲಾಡಳಿತ ‘ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಕುರಿತು ಸಂಬಂಧಿಸಿದ ಇಲಾಖೆ ಪರಿಶೀಲನಾ ವರದಿ ನೀಡುವವರೆಗೂ ಕಾಮಗಾರಿ ಮುಂದುವರಿಸಬಾರದು’ ಎಂದು ಸೂಚಿಸಿದೆ. ಇದೀಗ ಕಾಮಗಾರಿ ಸಂಪೂರ್ಣ ಸ್ತಬ್ಧಗೊಂಡಿದೆ.

ವ್ಯಾಪಾರ ವಹಿವಾಟಿಗೆ ಹಿನ್ನಡೆ

ಮೇಲ್ಸೇತುವೆ ಕಾಮಗಾರಿ ನಡೆಯುವ ನಾಲ್ಕು ಕಿ.ಮೀ. ಉದ್ದದ ಮಾರ್ಗದಲ್ಲಿ ಸಾಕಷ್ಟು ವಾಣಿಜ್ಯ ಕಟ್ಟಗಳು ವ್ಯಾಪಾರ ಮಳಿಗೆಗಳು ಸೇರಿದಂತೆ ಚಿಕ್ಕಪುಟ್ಟ ಅಂಗಡಿಗಳು ಇವೆ. ಪ್ರತಿನಿತ್ಯ ನೂರಾರು ಕೋಟಿ ವ್ಯವಹಾರಗಳು ಇಲ್ಲಿ ನಡೆಯುತ್ತಿದ್ದವು. ಮೇಲ್ಸೇತುವೆ ಕಾಮಗಾರಿ ಆರಂಭವಾದಂದಿನಿಂದ ಶೇ 70 ರಷ್ಟು ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಕೆಲವು ವಾಣಿಜ್ಯ ಕಟ್ಟಗಳ ಮಳಿಗೆಗಳನ್ನು ಬಾಡಿಗೆ ಪಡೆದು ವ್ಯಾಪಾರ ನಡೆಸುತ್ತಿದ್ದವರು ವ್ಯಾಪಾರವಿಲ್ಲದೆ ಬಿಟ್ಟು ಹೋಗಿದ್ದಾರೆ. ‘ಈ ಹಿಂದೆ ಪ್ರತಿದಿನ ₹20 ಸಾವಿರದಿಂದ ₹30 ಸಾವಿರ ಬಟ್ಟೆ ವ್ಯಾಪಾರ ಆಗುತ್ತಿತ್ತು. ಈಗ 41 ಸಾವಿರ ವ್ಯಾಪಾರವಾದರೆ ಹೆಚ್ಚು. ಕಾಮಗಾರಿ ಆರಂಭವಾದಂದಿನಿಂದ ಇಲ್ಲಿ ಜನರ ಓಡಾಟವೇ ಕಡಿಮೆಯಾಗಿದೆ. ಸರಿಯಾಗಿ ರಸ್ತೆಯಿಲ್ಲ ವಾಹನ ನಿಲ್ಲಿಸಲು ಸ್ಥಳವಿಲ್ಲ. ಮಳೆಗಾಲದಲ್ಲಿ ನೀರು ಒಳಗೆ ನುಗ್ಗುತ್ತದೆ ಬೇಸಿಗೆಯಲ್ಲಿ ದೂಳು ಬಟ್ಟೆಯೆಲ್ಲ ಆವರಿಸುತ್ತದೆ. ಯಾರಿಗೆ ದೂರು ನೀಡಬೇಕೆಂದೂ ತಿಳಿಯುತ್ತಿಲ್ಲ’ ಎಂದು ಹಳೇಬಸ್‌ ನಿಲ್ದಾಣದ ಬಳಿಯ ನವಲೆ ಬಟ್ಟೆ ಅಂಗಡಿ ಮಾಲೀಕ ಉಮೇಶ ನವಲೆ ಅಳಲು ತೋಡಿಕೊಂಡರು. ‘ತಿಂಗಳಿಗೆ ₹50 ಸಾವಿರ ಬಾಡಿಗೆ ನೀಡಿ ಬೇಕರಿ ಅಂಗಡಿ ನಡೆಸುತ್ತಿದ್ದೇನೆ. ಅಂಗಡಿ ಎದುರಿಗೇ ಮೇಲ್ಸೇತುವೆಯ ಬೃಹತ್‌ ಪಿಲ್ಲರ್‌ ನಿರ್ಮಾಣವಾಗುತ್ತಿದ್ದು ಗ್ರಾಹಕರ‍್ಯಾರೂ ಬರುತ್ತಿಲ್ಲ. ಅಂಗಡಿ ಬಾಡಿಗೆ ಕೊಡಲು ಸಹ ಹಣ ಇಲ್ಲದ ಪರಿಸ್ಥಿತಿ ಎದುರಾಗಿದೆ. ಅಭಿವೃದ್ಧಿ ಬೇಕು. ಆದರೆ ಕಾಲಮಿತಿಯಲ್ಲಿ ಕಾಮಗಾರಿ ಮುಗಿದರೆ ಉತ್ತಮ’ ಎಂದು ಚನ್ನಮ್ಮ ವೃತ್ತದ ಬಳಿಯ ಬೇಕರಿ ಅಂಗಡಿ ಮಾಲೀಕ ನಿಜಗುಣಸ್ವಾಮಿ ಹೇಳುತ್ತಾರೆ.

ನಿತ್ಯ 2.50 ಲಕ್ಷ ವಾಹನಗಳ ಸಂಚಾರ!

ನಗರದ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಿಸಿದ್ದರೂ ಚನ್ನಮ್ಮ ವೃತ್ತದ ಸುತ್ತಮುತ್ತ ಪ್ರತಿನಿತ್ಯ ನಾಲ್ಕು ಲಕ್ಷದಷ್ಟು ವಾಹನಗಳು ಸಂಚರಿಸುತ್ತವೆ. ನಗರದಲ್ಲಿಯೇ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರಗಳಿರುವುದರಿಂದ ಉತ್ತರಕನ್ನಡ ಹಾವೇರಿ ಗದಗ ಬೆಳಗಾವಿ ಭಾಗದಿಂದ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ನಾಲ್ಕು ಸಾವಿರದಷ್ಟು ಸರ್ಕಾರಿ ಮತ್ತು ಖಾಸಗಿ ಬಸ್‌ಗಳು 50 ಸಾವಿರದಷ್ಟು ದ್ವಿಚಕ್ರ ವಾಹನಗಳು 20 ಸಾವಿರ ಆಟೊಗಳು 1 ಲಕ್ಷದಷ್ಟು ಕಾರ್‌ ಲಾರಿ ಟ್ರಕ್‌ ಹಾಗೂ ಭಾರಿ ವಾಹನಗಳು ಸಂಚರಿಸುತ್ತವೆ. ಕಾಮಗಾರಿಯಿಂದಾಗಿ ಇವುಗಳ ಸಂಚಾರ ಅಸ್ತವ್ಯಸ್ತವಾಗಿವೆ. ಚನ್ನಮ್ಮ ವೃತ್ತದ ಮೂಲಕ ಹಾದು ಹೋಗುವ ವಾಹನಗಳೆಲ್ಲ ಒಳರಸ್ತೆ ಸಂಪರ್ಕಿಸಿ ಹಾದು ಹೋಗಬೇಕಿರುವುದರಿಂದ ನೀಲಿಜಿನ್‌ ರಸ್ತೆ ಕೊಪ್ಪಿಕರ್‌ ರಸ್ತೆಗಳು ಸಹ ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಅವುಗಳನ್ನು ಪಾರ್ಕ್‌ ಮಾಡಲು ಸಹ ಜಾಗವಿಲ್ಲದೆ ಪರದಾಡುವುದು ಸಾಮಾನ್ಯವಾಗಿದೆ.

ಹೀಗಿದೆ ಮೇಲ್ಸೇತುವೆ ಸಂಪರ್ಕ...

ಗೋಕುಲ ರಸ್ತೆಯ ಬನ್ನಿಗಿಡ ಬಸ್‌ ಸ್ಟಾಪ್‌ನಿಂದ ರಾಣಿವಿಲಾಸ ವೃತ್ತ ಹೊಸೂರು ವೃತ್ತ ಭಗತ ಸಿಂಗ್‌ ವೃತ್ತ ಐಟಿ ಪಾರ್ಕ್‌ ಬಸವವನ ಹಳೇ ಬಸ್‌ನಿಲ್ದಾಣದ ಮೂಲಕ ಚನ್ನಮ್ಮ ವೃತ್ತ ಹಾಗೂ ವಿಜಯಪುರ ರಸ್ತೆಯ ದೇಸಾಯಿ ವೃತ್ತದಿಂದ ಕ್ಲಬ್‌ ರಸ್ತೆ ಹಳೇಕೋರ್ಟ್‌ ವೃತ್ತದ ಮೂಲಕ ಚನ್ನಮ್ಮ ವೃತ್ತ ಮತ್ತು ಲ್ಯಾಮಿಂಗ್ಟನ್‌ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚನ್ನಮ್ಮ ವೃತ್ತ ಸಂಪರ್ಕಿಸುತ್ತದೆ. ಒಟ್ಟು 3.900 ಕಿ.ಮೀ. ಉದ್ದದ ಮೇಲ್ಸೇತುವೆಯು ಚನ್ನಮ್ಮ ವೃತ್ತದಲ್ಲಿ ಸಂಪರ್ಕಿಸಿ ಅಲ್ಲಿಂದ ಏಳು ರಸ್ತೆಗಳಾಗಿ ಇಕ್ಕೆಲಗಳಿಗೆ ಸಂಪರ್ಕಿಸುತ್ತವೆ. ಚನ್ನಮ್ಮ ವೃತ್ತದಿಂದ ಗೋಕುಲ ರಸ್ತೆಗೆ ಏಕಮುಖ ಸಂಚಾರ ಧಾರವಾಡದಿಂದ ಗೋಕುಲ ರಸ್ತೆಯಿಂದ ಬರುವ ವಾಹನಗಳು ಹೊಸೂರಿನ ಭಗತ್‌ ಸಿಂಗ್‌ ವೃತ್ತದ ಬಳಿ ಮೇಲ್ಸೇತುವೆ ಸಂಪರ್ಕಿಸಬೇಕು. ರಾಯಣ್ಣ ವೃತ್ತದಿಂದ ಲ್ಯಾಮಿಂಗ್ಟನ್‌ ರಸ್ತೆಯ ಟೈಟಾನ್‌ ಐ ಕೇರ್‌ ಸೆಂಟರ್‌ವರೆಗಿನ 350 ಮೀ. ಉದ್ದದ ಚತುಷ್ಪಥ ಮೇಲ್ಸೇತುವೆಯಲ್ಲಿ 300 ಮೀ. ಉದ್ದ ಸಾಲಿಡ್‌ ರ‍್ಯಾಂಪ್‌ ನಿರ್ಮಿಸಲಾಗುತ್ತದೆ. ಕಿತ್ತೂರ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ 50 ಮೀ. ಉದ್ದದ ಮಾರ್ಗದಲ್ಲಿ ನಾಲ್ಕು ಬೃಹತ್‌ ಪಿಲ್ಲರ್‌ ನಿರ್ಮಾಣವಾಗುವುದರಿಂದ ಈದ್ಗಾ ಮೈದಾನದ ಕಾಂಪೌಂಡ್‌ ಭಾಗಶಃ ತೆರವು ಆಗಲಿದೆ. ಈ ಫ್ಲೈಓವರ್‌ ಮಾರ್ಗದ ಇಕ್ಕೆಲಗಳಲ್ಲಿ ತಲಾ 7.50 ಮೀ. ಜಾಗದಲ್ಲಿ ಸರ್ವಿಸ್‌ ಹಾಗೂ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ.

ಮೇಲ್ಸೇತುವೆ ಅತ್ಯಗತ್ಯ

ಪ್ರತಿ ವರ್ಷ ಶೇ 7 ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತವೆ. ನಿತ್ಯ ಸಂಜೆ ಒಂದು ಗಂಟೆಯಲ್ಲಿ 18 ಸಾವಿರ ವಾಹನಗಳು ಚನ್ನಮ್ಮ ವೃತ್ತದ ಬಳಿ ಸಂಚರಿಸುತ್ತಿವೆ. ಶೇ 5 ರಂತೆ ಹೆಚ್ಚಳ ಹಿಡಿದರೂ 2027ರ ವೇಳೆಗೆ 21‌ ಸಾವಿರ 2037ರ ವೇಳೆಗೆ 40742 ಆಗಲಿದೆ. ಈ ಮಾರ್ಗಗಳ‌ಲ್ಲಿ ರಸ್ತೆ ವಿಸ್ತರಣೆ ಸಾಧ್ಯವಿಲ್ಲ. ಪರ್ಯಾಯ ರಸ್ತೆಗಳ ಬಳಸಿದರೆ ಮನೆ ವಾಣಿಜ್ಯ ಕಟ್ಟಡಗಳಿಗೆ ಧಕ್ಕೆ ಆಗುತ್ತದೆ. ಆದ್ದರಿಂದ ಮೇಲ್ಸೇತುವೆ ನಿರ್ಮಾಣ ಅನಿವಾರ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT