ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಿ ಸೂತ್ರಕ್ಕೆ ಗಮನಹರಿಸಿ’

ಮಂಟೂರು ಗ್ರಾಮದಲ್ಲಿ ಕಾನೂನು ಸೇವೆಗಳ ಶಿಬಿರ
Last Updated 27 ಆಗಸ್ಟ್ 2022, 3:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಲೋಕ ಅದಾಲತ್ ಪ್ರಕ್ರಿಯೆಯಲ್ಲಿ ಪ್ರಕರಣಗಳನ್ನು ರಾಜಿ ಮಾಡಲಾಗುತ್ತಿದೆ. ರಾಜಿ ಸೂತ್ರಕ್ಕೆ ಎಲ್ಲರೂ ಮೊದಲು ಗಮನ ಹರಿಸುವ ಜೊತೆಗೆ, ಕಾನೂನು ಸೇವೆಗಳ ಪ್ರಾಧಿಕಾರದ ಪ್ರಯೋಜನವನ್ನು ಪಡೆಯಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಂ ಹೇಳಿದರು.

ನಗರದ ಮಂಟೂರು ಗ್ರಾಮದ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಸೇವೆಗಳ ಬೃಹತ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಸ್ಯೆ ಪರಿಹಾರಕ್ಕಾಗಿ ಶಿಬಿರದ ಮೂಲಕ ನ್ಯಾಯಾಲಯವೇ ಗ್ರಾಮಕ್ಕೆ ಬಂದಿದೆ.ಅಗತ್ಯ ಕಾನೂನು ಸೌಲಭ್ಯ ಒದಗಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿ, ‘ಇಂದು ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು. ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು’ ಎಂದು ಹೇಳಿದರು.

ಆದೇಶ ಪತ್ರ, ಪ್ರಮಾಣಪತ್ರ ವಿತರಣೆ

ಶಿಬಿರದಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ‌ನೋಂದಣಿ ಪ್ರಮಾಣಪತ್ರ, ಮದುವೆ ಧನಸಹಾಯ ಆದೇಶದ ಪ್ರಮಾಣಪತ್ರ ಹಾಗೂ ನ್ಯೂಟ್ರಿಷನ್ ಕಿಟ್ ವಿತರಿಸಲಾಯಿತು. ಕಂದಾಯ ಇಲಾಖೆಯಿಂದ ಫಲಾನುಭವಿಗಳಿಗೆ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ವೃದ್ಧಾಪ್ಯ ವೇತನ ಪತ್ರಗಳನ್ನು ನೀಡಲಾಯಿತು.

ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಎರಡು ಗಾಲಿ ಕುರ್ಚಿ ವಿತರಿಸಲಾಯಿತು. ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಹಾಗೂ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ಶಾಲಾ ಮಕ್ಕಳು ಬಾಲ್ಯ ವಿವಾಹ ನಿಷೇಧ ಕುರಿತ ನಾಟಕ ಪ್ರದರ್ಶಿಸಿದರು. ವಸ್ತು ಪ್ರದರ್ಶನ ಗಮನ ಸೆಳೆಯಿತು.

ಕಾನೂನು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಸರ್ಕಾರ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ.ಸಿ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.ಸಹಾಯಕ ಕಾನೂನು ಪ್ರಾಧ್ಯಾಪಕ ಡಾ. ರಂಗಸ್ವಾಮಿ ಡಿ.,ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಕುಮಾರ ಇಟ್ಟಣಗಿ‌,ಡಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಭಜಂತ್ರಿ ಮಾತನಾಡಿದರು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ಅಂಗವಿಕಲರ ಇಲಾಖೆಯ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ, ಸಹಾಯಕ ಕಾರ್ಮಿಕ ಆಯುಕ್ತೆ ಎಸ್. ಶ್ವೇತಾ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಆರ್. ಅಂಬಿಗೇರ, ಮಂಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ ಚಂದ್ರಕಾಂತ ಹಂಚಾಟೆ, ಉಪಾಧ್ಯಕ್ಷ ಮಲ್ಲಪ್ಪ ಹಡಪದ,ಸಾಮಾಜಿಕ ಕಾರ್ಯಕರ್ತ ಅಶೋಕ ಕೋರಿ, ಆರ್.ಎಂ. ತಿಮ್ಮಾಪೂರ, ಶ್ವೇತಾ ಮಣ್ಣೂರುಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT