ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಧನ ದರ ಏರಿಕೆ ಜನಸಾಮಾನ್ಯರಿಗೆ ಹೊರೆ: ವಾಣಿಜ್ಯೋದ್ಯಮ ಸಂಸ್ಥೆ

Published 17 ಜೂನ್ 2024, 15:54 IST
Last Updated 17 ಜೂನ್ 2024, 15:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದಕ್ಕೆ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಘಾತ ವ್ಯಕ್ತಪಡಿಸಿದೆ.

‘ಈಗಾಗಲೇ ವಿದ್ಯುತ್, ಆಸ್ತಿ ತೆರಿಗೆ, ಮುದ್ರಾಂಕ ಶುಲ್ಕ, ಅಬಕಾರಿ ಸುಂಕ ಹಾಗೂ ವಾಣಿಜ್ಯ ತೆರಿಗೆ ಹೆಚ್ಚಿಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈಗ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿರುವುದರಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳವಾಗಿ ನೇರವಾಗಿ ಜನಸಾಮಾನ್ಯರಿಗೆ ಬಿಸಿ ತಟ್ಟುತ್ತದೆ’ ಎಂದು ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳ ಬಳಕೆ ಮಾಡುತ್ತಾರೆ. ಅವರಿಗೆ ಇದು ಹೊರೆಯಾಗಲಿದೆ. ರಾಜ್ಯ ಸರ್ಕಾರವು ಮಾರಾಟ ತೆರಿಗೆ ದರವನ್ನು ಕಡಿಮೆ ಮಾಡಿದಲ್ಲಿ ಜನಸಾಮಾನ್ಯರಿಗೆ ಸ್ವಲ್ಪ ಅನುಕೂಲವಾಗಲಿದೆ’ ಎಂದು ಉಲ್ಲೇಖಿಸಿದ್ದಾರೆ.

ಪ್ರತಿಭಟನೆ: ಸಮತಾ ಸೇನಾ ಖಂಡನೆ

‘ರಾಜ್ಯ ಮತ್ತು ಕೇಂದ್ರ ಎರಡೂ ಕಡೆಗಳಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಅಡುಗೆ ಅನಿಲ, ಅಡುಗೆ ಎಣ್ಣೆ, ಅಕ್ಕಿ, ಆಹಾರ ಧಾನ್ಯದ ಬೆಲೆ ಗಗನಕ್ಕೇರಿದೆ. ಆಗ ಪ್ರತಿಭಟಿಸದ ಬಿಜೆಪಿ ಮುಖಂಡರು ಈಗ ರಾಜ್ಯದ ಜನರು ಕಷ್ಟದಲ್ಲಿದ್ದಾರೆ ಎಂದು ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಸಮತಾ ಸೇನಾದ ಮುಖಂಡ ಗುರುನಾಥ ಉಳ್ಳಿಕಾಶಿ ಕುಟುಕಿದ್ದಾರೆ.

‘ಬೆಲೆ ಏರಿಕೆ ಕುರಿತು ಕೇಂದ್ರದ ವಿರುದ್ಧ ಧ್ವನಿ ಎತ್ತಲು ಬಿಜೆಪಿ ಬೀದಿಗಿಳಿದರೆ ನಾವೂ ನಿಮ್ಮೊಂದಿಗೆ ಹೆಜ್ಜೆ ಹಾಕಲು ಸಿದ್ಧರಿದ್ದೇವೆ. ಕೇವಲ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ, ನಿಮ್ಮವರ ತಪ್ಪು ಮರೆಮಾಚಲು ಸಾಧ್ಯವಿಲ್ಲ’ ಎಂದು ಕಿಡಿ ಕಾರಿದ್ದಾರೆ.

‘ಭೂತದ ಬಾಯಲ್ಲಿ ಭಗವದ್ಗೀತೆ’

‘ಪೆಟ್ರೋಲ್, ಡೀಸೆಲ್ ದರ ಏರಿಕೆಯ ವಿರುದ್ಧ ಬಿಜೆಪಿ ‍ಪ್ರತಿಭಟನೆ ಮಾಡುತ್ತಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ’ ಎಂದು ಕಾಂಗ್ರೆಸ್ ಮುಖಂಡ ವೇದವ್ಯಾಸ ಕೌಲಗಿ ಟೀಕಿಸಿದ್ದಾರೆ.

‘ಹತ್ತು ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಬಾರಿ ಇಂಧನ ದರ ಹೆಚ್ಚಳ ಮಾಡಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ. ಅಡುಗೆ ಎಣ್ಣೆ ದರ ₹200 ಆದಾಗ ಇವರು ಮಲಗಿಕೊಂಡಿದ್ದರೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡಿದ ಗ್ಯಾರಂಟಿಗಳನ್ನು ವಿರೋಧಿಸುವ ಮೂಲಕ ಬಿಜೆಪಿ ಬಡವರ ವಿರೋಧಿ ಎಂಬುದನ್ನು ಅವರೇ ತೋರಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT