ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ದಿನವಾದರೂ ಕರಗದ ಗಣೇಶ

ಬಾವಿಯ ನೀರು ಕಲುಷಿತ, ಪರಿಸರ ಮಾಲಿನ್ಯದ ಭೀತಿ
Last Updated 19 ಸೆಪ್ಟೆಂಬರ್ 2019, 10:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣೇಶ ಪ್ರತಿಷ್ಠಾಪನೆಯ 11ನೇ ದಿನ ಹೊಸೂರು ಬಾವಿಯಲ್ಲಿ ವಿಸರ್ಜನೆ ಮಾಡಿದ್ದ ಹುಬ್ಬಳ್ಳಿಯ ಪ್ರಮುಖ ಗಣಪತಿ ಮೂರ್ತಿಗಳು ಎಂಟು ದಿನವಾದರೂ ಕರಗಿಲ್ಲ. ಇದರಿಂದ ಬಾವಿಯಲ್ಲಿನ ನೀರು ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದೆ.

ವಿಸರ್ಜನೆ ಮಾಡುವಾಗ ಮೂರ್ತಿಗಳು ಯಾವ ರೀತಿ ಇದ್ದವೋ, ಈಗಲೂ ಹಾಗೆ ಇವೆ. ಇನ್ನೂ ಕೆಲವು ಮೂರ್ತಿಗಳನ್ನು ತಯಾರಿಸಲು ಬಳಸಿದ ಕಚ್ಚಾವಸ್ತುಗಳು ನೀರಿನ ಮೇಲೆ ತೇಲುತ್ತಿವೆ. ಕಟ್ಟಿಗೆ, ಹುಲ್ಲಿನಿಂದ ಮಾಡಿದ್ದ ಆಕೃತಿಗಳು ತೇಲಾಡುತ್ತಿವೆ. ಮೂರ್ತಿ ಬಿರುಕು ಬಿಡದಂತೆ ಎಚ್ಚರಿಕೆ ವಹಿಸಲು ಲಾಂಬಿ ಹಾಗೂ ಜಾಲಿ ಅಂಟು ಬಳಸುತ್ತಾರೆ. ಅದರ ಮೇಲೆ ಮಣ್ಣಿನ ಲೇಪನ ಮಾಡುತ್ತಾರೆ.

ವಿಸರ್ಜನೆಯಾಗಿ ಒಂದು ವಾರವಾದರೂ ಗಣಪತಿ ಕರಗದ ಕಾರಣ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲ್ಲು ಮತ್ತು ಹುಲ್ಲು ಬಳಸದೇ ಪೂರ್ಣ ಪ್ರಮಾಣದ ಮಣ್ಣಿನ ಗಣಪನನ್ನೇ ಪ್ರತಿಷ್ಠಾಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾಗಾಜಿನ ಮನೆಯ ಹಿಂಭಾಗದ ಬಾವಿಯಲ್ಲಿ ವಿಸರ್ಜಿಸಲಾಗಿದ್ದ ಅನೇಕ ಗಣಪತಿ ಮೂರ್ತಿಗಳ ತ್ಯಾಜಗಳನ್ನು ಬಾವಿಯಿಂದ ತೆಗೆದು ಹೊರಗೆ ಹಾಕಲಾಗಿದೆ. ಹೊಸೂರು ಬಾವಿ ಪೂರ್ತಿ ತ್ಯಾಜ್ಯವೇ ತುಂಬಿಕೊಂಡಿದೆ. ಮೂರ್ತಿ ಪ್ರತಿಷ್ಠಾಪನೆಗೆ ಬಳಸಿದ್ದ ಕಟ್ಟಿಗೆಗಳೂ ಕೂಡ ನೀರಿನಲ್ಲಿ ತೇಲಾಡುತ್ತಿವೆ.

ಈ ಬಗ್ಗೆ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ್ ಅವರನ್ನು ಪ್ರಶ್ನಿಸಿದಾಗ ‘ಬಾವಿಯಲ್ಲಿ ಗಣಪತಿ ಮೂರ್ತಿ ಕರಗದೇ ಇರುವ ವಿಷಯ ಗಮನಕ್ಕೆ ಬಂದಿಲ್ಲ. ನಾಳೆಯೇ (ಗುರುವಾರ) ಪರಿಸರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ’ ಎಂದರು.

ಪರಿಸದ ಪ್ರೇಮಿ ಶಂಕರ ಕುಂಬಿ ಮಾತನಾಡಿ ‘ಮೂರ್ತಿ ತಯಾರಿಸುವಾಗ ‌ಹುಲ್ಲಿನ ಮಿಶ್ರಣ ಮಾಡಿದರೆ ವಿಸರ್ಜನೆ ಬಳಿಕ ನೀರು ಕಲುಷಿತವಾಗುತ್ತದೆ. ಇದರಿಂದ ಪರಿಸರ ಹಾನಿಯಾಗುತ್ತದೆ. ಆದ್ದರಿಂದ ಪಾಲಿಕೆ ಸಿಬ್ಬಂದಿಯೇ ಬೇಗನೆ ಬಾವಿಯಲ್ಲಿರುವ ತ್ಯಾಜ್ಯ ಸ್ವಚ್ಛಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT