ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ‘ಕಸ ವಿಂಗಡಣೆ; ಸಾರ್ವಜನಿಕರಿಗೆ ಶುಲ್ಕ ವಿನಾಯಿತಿ ನೀಡಿ’

ಹು–ಧಾ ಮಹಾನಗರ ಪಾಲಿಕೆಯ ಸ್ವಚ್ಛತಾ ರಾಯಭಾರಿ ನಟ ಅನಿರುದ್ಧ
Last Updated 26 ಜೂನ್ 2022, 7:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮನೆಯಿಂದಲೇ ಸಮರ್ಪಕವಾಗಿ ಕಸ ವಿಂಗಡಣೆ ಮಾಡಿ ಕೊಡುವ ಸಾರ್ವಜನಿಕರಿಗೆ ವಿದ್ಯುತ್‌ ಮತ್ತು ನೀರಿನ ಶುಲ್ಕದಲ್ಲಿ ವಿನಾಯಿತಿ ನೀಡಬೇಕು’ ಎಂದು ಮಹಾನಗರ ಪಾಲಿಕೆಯ ಸ್ವಚ್ಛತಾ ರಾಯಭಾರಿ, ನಟ ಅನಿರುದ್ಧ ಜತ್ಕರ್‌ ಸಲಹೆ ನೀಡಿದರು.

ಇಲ್ಲಿನ ಜೆಸಿ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದಸ್ವಚ್ಛ ಸರ್ವೇಕ್ಷಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಕೆಯಿಂದ ಮೂರು ದಿನಗಳ ಕಾಲ ನಡೆದ ‘ನಮ್ಮ ನಗರ ಸ್ವಚ್ಛ ನಗರ’ ಸಮಾರೋಪ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಸ ವಿಂಗಡಣೆ ಮತ್ತು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವವರಿಗೆ ಪ್ರೋತ್ಸಾಹ ನೀಡುವುದರಿಂದ ಕಸದ ಸಮಸ್ಯೆ ಬಗೆಹರಿಯಲಿದೆ. ಪ್ರತಿ ಮನೆಗೂ ಕಡ್ಡಾಯವಾಗಿ ನಾಲ್ಕು ಕಸದ ಡಬ್ಬಿಗಳನ್ನು ವಿತರಿಸಬೇಕು. ಕಸದ ಡಬ್ಬಿ ಇದ್ದರೆ ಅಲ್ಲಿಯೇ ಕಸ ಹಾಕುವುದು ರೂಢಿಯಾಗಲಿದೆ. ಪಾಲಿಕೆಯಿಂದ ನಿತ್ಯ ಕನಿಷ್ಠ ಮೂರು ಬಾರಿಯಾದರೂ ಕಸ ಸಂಗ್ರಹಿಸಬೇಕು’ ಎಂದರು.

‘ನಮ್ಮ ಜನ ಲಾಭ ಇದೆ ಎನ್ನುವ ಯಾವುದನ್ನೂ ವ್ಯರ್ಥ ಮಾಡುವುದಿಲ್ಲ. ಇದಕ್ಕೆ ಪೇಪರ್‌ಗಳನ್ನು ತಿಂಗಳು ಗಟ್ಟಲೆ ಸಂಗ್ರಹಿಸಿ ಮಾರಾಟ ಮಾಡುವುದೇ ಉದಾಹರಣೆ. ಅದೇ ರೀತಿ ಕಸದಿಂದಲೂ ಲಾಭ ಗಳಿಸಬಹುದು ಎನ್ನುವುದನ್ನು ಜನರಿಗೆ ಮನವರಿಕೆ ಮಾಡ‌ಬೇಕು. ಆಗ ರಸ್ತೆಯಲ್ಲಿ ಯಾರೂ ಕಸ ಎಸೆಯುವುದಿಲ್ಲ’ ಎಂದರು.

‘ಜಾಹೀರಾತು ಹೋರ್ಡಿಂಗ್ಸ್‌ ವ್ಯವಸ್ಥೆ ಹಾಳಾಗಿದ್ದು, ಇದನ್ನು ಸರಿಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಪ್ರಕರಣ ಇತ್ಯಾರ್ಥ ಆಗುವವರೆಗೆ ಹೋರ್ಡಿಂಗ್ಸ್‌ನಲ್ಲಿ ಹುಬ್ಬಳ್ಳಿ– ಧಾರವಾಡದ ಇತಿಹಾಸದ ಪರಂಪರೆ ಪರಿಚಯಿಸಬಹುದು. ಕೇಬಲ್‌ ತಂತಿಗಳನ್ನು ಸರಿಪಡಿಸಿ, ಭೂಗತವಾಗಿ ಅಳವಡಿಸಬೇಕು. ಗೌಳಿಗಲ್ಲಿ ಮೇಲ್ಸೇತುವೆ ಕುಸಿಯುವ ಹಂತದಲ್ಲಿದ್ದು, ಇದನ್ನು ಸರಿಪಡಿಸಬೇಕು. ಎಮ್ಮೆಗಳಿಗೆ ಒಂದು ಕೆರೆ ಅಭಿವೃದ್ಧಿಪಡಿಸಬೇಕು’ ಎಂದರು.

‘ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣೆ ಅಭಿಯಾನ ಪ್ರಾರಂಭವಾದ ನಂತರ ಅವಳಿನಗರದಲ್ಲಿ ಕಸ ಸಂಗ್ರಹಣೆ ಹಾಗೂ ಕಸ ವಿಲೇವಾರಿಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಕಸ ವಿಂಗಡಣೆ ಪ್ರಮಾಣ ಒಟ್ಟಾರೆ ಶೇ 80ರಷ್ಟಿದೆ’ ಎಂದು ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಹೇಳಿದರು.

ಈಗಾಗಲೇ ಸಂಗ್ರಹವಾಗಿರುವ ಬೃಹತ್‌ ಪ್ರಮಾಣದ ಮಿಶ್ರಕಸವನ್ನುಬಯೋಮೈನಿಂಗ್ ಮೂಲಕ ಸಂಸ್ಕರಣೆ ಮಾಡಲು ₹30 ಕೋಟಿಯ ಯೋಜನೆಗೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 2023ರ ವೇಳೆಗೆ ಕೇಂದ್ರ ಸರ್ಕಾರದಿಂದ ಜಾರ್‌ಕೋಲ್‌ ಒಣಕಸ ನಿರ್ವಹಣೆ ಕೇಂದ್ರ ಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ ಎಂದರು.

ಮೇಯರ್ಈರೇಶ ಅಂಚಟಗೇರಿ, ಉಪಮೇಯರ್‌ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ, ತಿಪ್ಪಣ್ಣ ಮಜ್ಜಿಗಿ ಇದ್ದರು.

ತಪ್ಪುಗಳನ್ನೂ ತಿದ್ದಿಕೊಳ್ಳುತ್ತೇವೆ: ಆಯುಕ್ತ
ಜನ ಕಸ ವಿಂಗಡಣೆ ಮಾಡಿ ನೀಡಿದರೂ ಒಂದೇ ವಾಹನದಲ್ಲಿ ಮಿಶ್ರ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆಯುಕ್ತರು, ‘ನಮ್ಮ ತಪ್ಪುಗಳನ್ನೂ ನಾವು ತಿದ್ದಿಕೊಳ್ಳುತ್ತೇವೆ. ಕಸ ಮಿಶ್ರ ಮಾಡುವುದು ಹಾಗೂ ಕಸಕ್ಕೆ ಬೆಂಕಿ ಹಾಕುವ ಕಾನೂನು ಬಾಹಿರ ಕೆಲಸಗಳು ನಡೆದಿವೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಸಿಬ್ಬಂದಿಗೆ ಜಾಗೃತಿ ಮೂಡಿಸಿ, ನಮ್ಮ ಕಡೆಯಿಂದ ಆಗಿರುವ ತಪ್ಪುಗಳನ್ನೂ ತಿದ್ದಿಕೊಳ್ಳುತ್ತೇವೆ. ಪೌರಕಾರ್ಮಿಕರಿಗೆ ಉತ್ತಮ ಸಾಧನ ನೀಡಲಾಗುವುದು ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT