ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲವ್ಯಾಧಿಗೆ ಆರಂಭದಲ್ಲೇ ಚಿಕಿತ್ಸೆ ಪಡೆಯಿರಿ: ಡಾ. ಪ್ರದೀಪ ಅಗ್ನಿಹೋತ್ರಿ

Last Updated 27 ನವೆಂಬರ್ 2022, 2:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರೇಳು ಗಂಟೆ ನಿರಂತರವಾಗಿ ಕೂತಲ್ಲೇ ಕೂತು ಕೆಲಸ ಮಾಡುವವರು ಅರ್ಧ ಗಂಟೆಗೊಮ್ಮೆ ಕನಿಷ್ಠ ಐದು ನಿಮಿಷವಾದರೂ ಎದ್ದು ಓಡಾಡುವ ಮೂಲಕ ವಿಶ್ರಾಂತಿ ಪಡೆಯಬೇಕು. ಇದರಿಂದ ಮೂಲವ್ಯಾಧಿಗೆ ತುತ್ತಾಗದಂತೆ ಎಚ್ಚರವಹಿಸಬಹುದು ಎಂದು ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಡಾ.ಪ್ರದೀಪ ಅಗ್ನಿಹೋತ್ರಿ ಸಲಹೆ ನೀಡಿದರು.

ಮೂಲವ್ಯಾಧಿಗೆ ಆಯುರ್ವೇದ ಚಿಕಿತ್ಸೆ ಮತ್ತು ಉಪಚಾರದ ಕುರಿತು ಶುಕ್ರವಾರ ‘ಪ್ರಜಾವಾಣಿ’ ಫೇಸ್‌ಬುಕ್‌ ಸಂವಾದದಲ್ಲಿ ಮಾತನಾಡಿದರು.

ಗುದದ್ವಾರದಲ್ಲಿ ಗಾಯ ಅಥವಾ ಗುಳ್ಳೆ, ಹುಣ್ಣುಗಳಾಗುವುದು, ಮಲವಿರ್ಸಜನೆ ವೇಳೆ ಉರಿ ಕಾಣಿಸಿಕೊಳ್ಳುವುದು, ರಕ್ತಸ್ರಾವವಾಗುವುದು. ಮಲವಿಸರ್ಜನೆ ಸುಲಭವಾಗಿ ಮಾಡಲು ಸಾಧ್ಯವಾಗದಿರುವುದು ಮೂಲವ್ಯಾಧಿಯ ಪ್ರಮುಖ ಲಕ್ಷಣಗಳು. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ವ್ಯಾಧಿಗೆ ಬದಲಾದ, ಧಾವಂತದ ಜೀವನ ಶೈಲಿಯೇ ಕಾರಣ. ಫಾಸ್ಟ್‌ಫುಡ್‌, ಬೇಕರಿ ಪದಾರ್ಥಗಳ ಸೇವನೆಯೂ ಇದಕ್ಕೆ ಮುಖ್ಯ ಕಾರಣ. ಸಮಸ್ಯೆಯ ಆರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಗಾಯ ಉಲ್ಬಣವಾದಂತೆ ಬೇರೆ ಸಮಸ್ಯೆಗಳೂ ಜೊತೆಗೂಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನುತ್ತಾರೆ ಅವರು.

ಲಕ್ಷಣಗಳು ಕಂಡಾಗಲೂ, 3ನೇ, 4ನೇ ಹಂತ ತಲುಪುವವರೆಗೂ ಸುಮ್ಮನೆ ಕೂರಬಾರದು. ಕೂಡಲೇ ವೈದ್ಯರನ್ನು ಕಂಡು, ಮುಜುಗರವಿಲ್ಲದೇ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ಮೂಲವ್ಯಾಧಿಯಲ್ಲಿ ಮೊಳಕೆ, ಗೆಡ್ಡೆ ಕಾಣಿಸಿಕೊಂಡು ಸಮಸ್ಯೆಗಳಾದಾಗ ಆಹಾರದಲ್ಲಿ ಪಥ್ಯೆ ಮಾಡಬೇಕಾಗುತ್ತದೆ. ಜೊತೆಗೆ ‘ಕ್ಷಾರಸೂತ್ರ’ (ವಯಸ್ಕರಿಗೆ) ‘ಕ್ಷಾರಲೇಪ’ (ಮಕ್ಕಳಿಗೆ) ಚಿಕಿತ್ಸೆ ಪಡೆಯಬೇಕಾಗುತ್ತದೆ.ಒಮ್ಮೆ ಈ ಚಿಕಿತ್ಸೆ ಪಡೆದರೆ ಗುದದ್ವಾರದಲ್ಲಿ ಪುನ ಮೊಳಕೆ, ಗೆಡ್ಡೆಗಳಾಗುವ ಸಂಭವ ತೀರ ಕಡಿಮೆ ಎಂದು ಡಾ.ಪ್ರದೀಪ ತಿಳಿಸಿದರು.

ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಇರುವವರೂ ಈ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಗೂ ಮುನ್ನ ಪರೀಕ್ಷೆ ನಡೆಸಿ, ಅವೆಲ್ಲವೂ ನಿಯಂತ್ರಣದಲ್ಲಿದ್ದರೆ ಮಾತ್ರ ಔಷಧೋಪಚಾರ ಮುಂದುವರಿಸಲಾಗುತ್ತದೆ. ಮೂಲವ್ಯಾಧಿ ಸಮಸ್ಯೆ ಕಾನ್ಸರ್‌ಗೆ ಪರಿವರ್ತನೆ ಆಗುವ ಸಾಧ್ಯತೆ ತೀರ ಕಡಿಮೆ. ಶಸ್ತ್ರಚಿಕಿತ್ಸೆಯಿಂದ ತಾತಾಲ್ಕಿಕ ಪರಿಹಾರ ಸಿಗಬಹುದು. ಹಾಗಾಗಿ ಆಯುರ್ವೇದ ಪದ್ಧತಿಯನ್ನು ರೋಗ ಉಲ್ಬಣಗೊಳ್ಳುವ ಮುನ್ನವೇ ಅನುಸರಿಸಿದರೆ ಆರೋಗ್ಯಪೂರ್ಣ ಬದುಕನ್ನು ನಡೆಸಬಹುದು ಎನ್ನುವುದು ಅವರ ಸಲಹೆ.

ಏನು ಮಾಡಬೇಕು

* ತರಕಾರಿ, ಮೊಳಕೆ ಕಾಳು ಸೇರಿದಂತೆ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಬೇಕು

* ಮೂಲವ್ಯಾಧಿ ಲಕ್ಷಣ ಇರುವವರು ಮಜ್ಜಿಗೆ ಸೇವನೆ ಮತ್ತು ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದು ಸೇರಿದಂತೆ ದ್ರವ ರೂಪದ ಆಹಾರ ಸೇವನೆಗೆ ಆದ್ಯತೆ ನೀಡಬೇಕು

* ದಿನಕ್ಕೆ ಐದಾರು ಲೀಟರ್‌ ನೀರು ಕುಡಿಯಬೇಕು

* ನಿಯಮಿತವಾಗಿ ಯೋಗ, ಧ್ಯಾನ (ವಜ್ರಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಕಪಾಲಭಾತಿ) ಮಾಡಬೇಕು

* ಭಾರತೀಯ ಶೈಲಿಯ ಶೌಚಾಲಯ ಬಳಕೆ ಮಾಡಬೇಕು

ಏನು ಮಾಡಬಾರದು
* ಫಾಸ್ಟ್‌ ಫುಡ್‌, ಬೇಕರಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರ ಇರಬೇಕು

* ಗೋಧಿ ಪದಾರ್ಥ, ಮಾಂಸಾಹಾರ ಸೇವನೆ ಬೇಡ

* ನಿರಂತರವಾಗಿ ದೀರ್ಘ ಸಮಯದವರೆಗೆ ಒಂದೇ ಕಡೆ ಕೂರಬಾರದು

* ಕಮೋಡ್‌ ಬಳಸಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT