ಕಳವು ಪ್ರಕರಣದ ಚಿನ್ನಾಭರಣ ಜಪ್ತಿ ಮಾಡುವ ನೆಪದಲ್ಲಿ ದೌರ್ಜನ್ಯ ಆರೋಪ: ಪ್ರತಿಭಟನೆ

7
ಚಿನ್ನಾಭರಣ ಅಂಗಡಿ ಮಾಲೀಕರು, ಕೆಲಸಗಾರರಿಂದ ಮೆರವಣಿಗೆ

ಕಳವು ಪ್ರಕರಣದ ಚಿನ್ನಾಭರಣ ಜಪ್ತಿ ಮಾಡುವ ನೆಪದಲ್ಲಿ ದೌರ್ಜನ್ಯ ಆರೋಪ: ಪ್ರತಿಭಟನೆ

Published:
Updated:
Deccan Herald

ಹುಬ್ಬಳ್ಳಿ: ಕಳವು ಪ್ರಕರಣದ ಚಿನ್ನಾಭರಣ ಜಪ್ತಿ ನೆಪದಲ್ಲಿ ಪೊಲೀಸರು ಚಿನ್ನಾಭರಣ ಅಂಗಡಿ, ರಿಫೈನರಿ ವರ್ಕ್ಸ್‌ ಅಂಗಡಿ ಮಾಲೀಕರು ಹಾಗೂ ಕೆಲಸಗಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ, ಸರಾಫ ಸಂಘ (ಚಿನ್ನಾಭರಣ ಅಂಗಡಿ ಮಾಲೀಕರು) ಹಾಗೂ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಸದಸ್ಯರು ಮಂಗಳವಾರ ಅಂಗಡಿಗಳ ಬಾಗಿಲು ಮುಚ್ಚಿ, ಇಲ್ಲಿನ ಸರಾಫ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

200ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ, ಬಳಿಕ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ತಯಾರಿ ನಡೆಸುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಘಂಟಿಕೇರಿ ಠಾಣೆ ಇನ್‌ಸ್ಪೆಕ್ಟರ್‌ ಜಿ.ಆರ್‌. ನಿಕ್ಕಂ, ‘ಪೂರ್ವಾನುಮತಿ ಪಡೆಯದೆ ಮೆರವಣಿಗೆ ನಡೆಸುವಂತಿಲ್ಲ. ಇದರಿಂದಾಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದರು. ಈ ವೇಳೆ ಸಂಘದ ಸದಸ್ಯರು ಮತ್ತು ಅವರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ, ಎಸಿಪಿ ಅನುಮತಿ ಪಡೆದು ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಸಂಘದ ಸದಸ್ಯರು ಹೇಳಿದರು.

ಚಿನ್ನಾಭರಣ, ನಗದು ಒಯ್ಯುತ್ತಾರೆ

ರಾಜ್ಯದ ವಿವಿಧ ಭಾಗಗಳ ಪೊಲೀಸರು, ಕಳ್ಳರು ಕದ್ದ ಚಿನ್ನಾಭರಣವನ್ನು ನಮ್ಮ ಅಂಗಡಿಗಳಲ್ಲಿ ತಂದು ಮಾರಾಟ ಮಾಡಿದ್ದಾರೆ ಅಥವಾ ಚಿನ್ನಾಭರಣ ತಯಾರಿಸಲು ಕೊಟ್ಟಿದ್ದಾರೆ ಎಂದು ಹೇಳಿ, ನಮ್ಮನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸುತ್ತಾರೆ. ಜತೆಗೆ ಅಂಗಡಿಯಲ್ಲಿದ್ದ ಚಿನ್ನಾಭರಣದ ಜತೆಗೆ, ನಗದು ಸಹ ಒಯ್ಯುತ್ತಾರೆ ಎಂದು ಪ್ರತಿಭಟನೆಗಾಗಿ ಸೇರಿದ್ದ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ತಿಂಗಳ ಹಿಂದೆ ಮುಧೋಳ, ವಿಜಯಪುರ, ಗದಗ, ಹೈದರಾಬಾದ್‌ ಸೇರಿದಂತೆ ವಿವಿಧ ಭಾಗದ ಪೊಲೀಸರು ಇಲ್ಲಿಗೆ ಅಂಗಡಿ ಮಾಲೀಕರು ಮತ್ತು ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳೀಯ ಠಾಣೆಗೆ ಯಾವುದೇ ಮಾಹಿತಿ ನೀಡದೆ, ವಾರಂಟ್‌ ಸಹ ತೋರಿಸದೆ ಕರೆದೊಯ್ದಿದ್ದಾರೆ. ಕಳ್ಳತನದ ಕೃತ್ಯದಲ್ಲಿ ಭಾಗಿಯಾಗದಿದ್ದರೂ, ನಮಗೆ ಹಿಂಸೆ ನೀಡುತ್ತಾರೆ ಎಂದು ದೂರಿದರು.

‘ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಲು ಮಂಗಳವಾರ ಎಲ್ಲರೂ ಸೇರಿದ್ದೆವು. ಆದರೆ, ಪೂರ್ವಾನುಮತಿ ಪಡೆಯದಿದ್ದರಿಂದ ಸಾಧ್ಯವಾಗಲಿಲ್ಲ. ಬಳಿಕ ಸಂಘದ ಸದಸ್ಯರೆಲ್ಲರೂ ಚರ್ಚಿಸಿ, ಬೇರೆ ದಿನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಷ್ಣು ರಾಯ್ಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !