ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಟ್ಟ ಗುಣಧರ ನಂದಿ; ಸಿಎಂ ವಿರುದ್ಧ ಆಕ್ರೋಶ

'ನಾಳೆ ಸಂಜೆ 5.30 ಗಡುವು; ದೇಹತ್ಯಾಗಕ್ಕೂ‌ಸಿದ್ಧ'
Published 9 ಜುಲೈ 2023, 12:45 IST
Last Updated 9 ಜುಲೈ 2023, 12:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಿಕ್ಕೋಡಿ‌ಯ ಜೈನ ಮುನಿ ಹತ್ಯೆ ಖಂಡಿಸಿ, ಮುನಿಗಳ ರಕ್ಷಣೆಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಇಲ್ಲಿಯ ವರೂರಿನ ಗುಣಧರ ನಂದಿ ಮಹಾರಾಜರು, ರಾಜ್ಯದ ಗೃಹ ಸಚಿವರು ನೀಡಿರುವ ಭರವಸೆ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಗೃಹ ಸಚಿವ ಜಿ.‌ ಪರಮೇಶ್ವರ ಅವರು ಸೋಮವಾರ ಕ್ಷೇತ್ರಕ್ಕೆ ಬಂದು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ನಾಳೆ(ಸೋಮವಾರ) ಸಂಜೆ 5.30ರ ಒಳಗೆ ಸರ್ಕಾರ ಮುನಿಗಳ ರಕ್ಷಣೆ ಕುರಿತು ಲಿಖಿತವಾಗಿ ಹೇಳಿಕೆ ನೀಡಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮುಂದುವರಿಸಿ, ದೇಹ ತ್ಯಾಗಕ್ಕೂ ಸಿದ್ಧನಿದ್ದೇನೆ' ಎಂದರು.

'ಉಗ್ರವಾದಿ ಕಸಬ್'ಗೆ ಗಲ್ಲುಶಿಕ್ಷೆ ನೀಡಿ, ದೇಹವನ್ನು ಮಣ್ಣು ಮಾಡಲಾಗಿದೆ. ಆದರೆ, ಸಮಾಜದ ಹಿತ ಕಾಯುತ್ತಿದ್ದ ಮುನಿಗಳ ದೇಹಕ್ಕೆ ವಿದ್ಯುತ್ ಶಾಕ್ ನೀಡಿ, ದೇಹವನ್ನು ತುಂಡು-ತುಂಡು ಮಾಡಿ, ಬೋರ್'ವೆಲ್'ನಲ್ಲಿ ಹಾಕಿದ್ದಾರೆ. ಇದೊಂದು ಅಮಾನುಷ ಹತ್ಯೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಮುನಿಗಳ ನಾಪತ್ತೆ ಪ್ರಕರಣ ದಾಖಲಾಗಿ ಮೂರು ದಿನವಾದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮುಖ್ಯಮಂತ್ರಿ ಸಹ ಸ್ಪಂದಿಸಿರಲಿಲ್ಲ. ಅಲ್ಪಸಂಖ್ಯಾತ ಸಮುದಾಯದವರ ಮತಗಳು ಕಡಿಮೆ ಇರುತ್ತವೆ ಎಂದು ನಿರ್ಲಕ್ಷ್ಯ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುದಾಯದವರಿಗೆ ಹೀಗೆ ಆಗಿದ್ದರೆ‌ ಸುಮ್ಮನಿರುತ್ತಿದ್ದರೇ' ಎಂದು ಪ್ರಶ್ನಿಸಿದರು.

'ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಉಪವಾಸ ಕೈಬಿಡುವಂತೆ ವಿನಂತಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ದೂರವಾಣಿ ಮೂಲಕ ಕರೆ ಮಾಡಿ, ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಸಹ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮನವಿ ಪತ್ರ ನೀಡಲಾಗಿದೆ' ಎಂದು ಮುನಿ ಗುಣಧರ ನಂದಿ ಹೇಳಿದರು.

ಬೇಡಿಕೆಗಳು: ಜೈನ ಸಾಧು, ಸಂತರು ಕಾಲ್ನಡಿಗೆಯಲ್ಲಿ ವಿಹಾರ ಮಾಡುವ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು. ವಿಹಾರ ಸಂದರ್ಭದಲ್ಲಿ ಶಾಲಾ, ಕಾಲೇಜು, ಪ್ರವಾಸಿ ಮಂದಿರಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕು. ಜೈನ ಮಂದಿರಗಳಲ್ಲಿ ನಡೆಯುವ ಅತಿಕ್ರಮಣ, ದಬ್ಬಾಳಿಕೆ ತಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT