ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿಷಯದಲ್ಲೂ ಕುಮಾರಸ್ವಾಮಿ ವಚನಭ್ರಷ್ಟ: ಜಗದೀಶ ಶೆಟ್ಟರ್ ಟೀಕೆ

ಮುಖ್ಯಮಂತ್ರಿ ವಿರುದ್ಧ ಶಾಸಕ ಜಗದೀಶ ಶೆಟ್ಟರ್ ಟೀಕೆ
Last Updated 8 ಜುಲೈ 2018, 9:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವಾಗ ವಚನಭ್ರಷ್ಟರಾಗಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಇದೀಗ ರೈತರ ಸಂಪೂರ್ಣ ಸಾಲ ಮನ್ನಾ ವಿಷಯದಲ್ಲೂ ವಚನಭ್ರಷ್ಟರಾಗಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.

ಕೇಂದ್ರ ಸರ್ಕಾರದ ಸಾಧನೆಯನ್ನೊಳಗೊಂಡ ಪುಸ್ತಕವನ್ನು ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಎಂ. ಜೋಶಿ ಅವರಿಗೆ ಭಾನುವಾರ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರ ಸಾಲ ಮನ್ನಾ ಪ್ರಕಟಣೆ ಅತ್ಯಂತ ಗೋಜಲಿನಿಂದ ಕೂಡಿದೆ. ಇದರ ಲಾಭ ನಿಜವಾಗಿಯೂ ರೈತರಿಗೆ ಸಿಗಲಿದೆಯೇ ಎಂಬ ಸಂಶಯ ಕಾಡುತ್ತಿದೆ. ನ್ಯಾಯಯುತವಾಗಿ ಸಾಲ ಪಾವತಿಸಿದ ರೈತರಿಗೆ ಕೇವಲ ₹ 25 ಸಾವಿರ ನೀಡುವುದಾಗಿ ಹೇಳುವ ಮೂಲಕ ತಾರತಮ್ಯ ತೋರಿದ್ದಾರೆ’ ಎಂದರು.

‘ಹಿಂದೆ ಅವರೇ ಹೇಳಿದಂತೆ ಸಾಲ ಮನ್ನಾ ಮಾಡಲು ₹54 ಸಾವಿರ ಕೋಟಿ ಅಗತ್ಯವಿತ್ತು. ಇದೀಗ ₹ 34 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಹಾಗಾದರೆ, ಉಳಿದ ಸಾಲವನ್ನು ಯಾರು ಮನ್ನಾ ಮಾಡುತ್ತಾರೆ? ಲಾಭದಾಯಕವಲ್ಲದ ಸಾಲ ಮನ್ನಾ ಬಗ್ಗೆ ರೈತರು ಕೂಡ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ದನಿ ಎತ್ತಲಾಗುವುದು’ ಎಂದು ಹೇಳಿದರು.

ಎಲ್ಲರಿಗೂ ಬರೆ:

’ಸಾಲ ಮನ್ನಾ ನೆಪದಲ್ಲಿ ಪೆಟ್ರೋಲ್, ವಿದ್ಯುತ್ ಹಾಗೂ ಮದ್ಯದ ದರವನ್ನು ಏರಿಸುವ ಮೂಲಕ ರೈತರಾದಿಯಾಗಿ ಎಲ್ಲರಿಗೂ ಕುಮಾರಸ್ವಾಮಿ ಬರೆ ಎಳೆದಿದ್ದಾರೆ. ಹಿರಿಯ ನಾಗರಿಕರ ಪಿಂಚಣಿಯನ್ನು ₹6 ಸಾವಿರಕ್ಕೆ ಹೆಚ್ಚಿಸುವುದಾಗಿ ಹೇಳಿದ್ದವರು, ಕೇವಲ ₹ 1 ಸಾವಿರ ಏರಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಬಜೆಟ್ ಬಗ್ಗೆ ವಿರೋಧ ಪಕ್ಷಕ್ಕಿಂತ ಆಡಳಿತ ಪಕ್ಷದಲ್ಲೇ ಹೆಚ್ಚಿನ ಆಕ್ಷೇಪ ವ್ಯಕ್ತವಾಗಿದೆ. ಈ ಸರ್ಕಾರ ಅನಿಶ್ಚಿತತೆಯಿಂದ ಕೂಡಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ 5 ಸಾವಿರದಷ್ಟು ಸರ್ಕಾರಿ ಶಾಲೆಗಳ ವಿಲೀನ ಪ್ರಸ್ತಾವವಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, ಇದೀಗ 28 ಸಾವಿರ ಶಾಲೆಗಳ ವಿಲೀನಗೊಳಿಸಲು ಮುಂದಾಗಿದ್ದಾರೆ. ಇವರ ಆಡಳಿತ ವರಸೆಗೆ ಏನೆನ್ನಬೇಕು’ ಎಂದು ಪ್ರಶ್ನಿಸಿದರು.

‘ಉಚಿತ ಬಸ್ ಪಾಸ್‌ಗಾಗಿ ತುಮಕೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ದರ್ಪ ತೋರಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲು ಯಾರ ವಿರೋಧವೂ ಇಲ್ಲ. ಆದರೂ, ಈ ವಿಷಯದಲ್ಲಿ ಮುಖ್ಯಮಂತ್ರಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ಸಾಧನೆ ತಲುಪಿಸುವ ಅಭಿಯಾನ:

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಾಮಾಣಿಕ ಮತ್ತು ಸುಭದ್ರ ಆಡಳಿತ ನೀಡುವ ಮೂಲಕ, ವಿಶ್ವದಲ್ಲೇ ಬಲಾಢ್ಯ ರಾಷ್ಟ್ರವಾಗುವತ್ತ ಭಾರತ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖರನ್ನು ಭೇಟಿ ಮಾಡಿ, ಸರ್ಕಾರದ ಸಾಧನೆ ಪುಸ್ತಕವನ್ನು ನೀಡಲಾಗುವುದು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಉಪ ಮೇಯರ್ ಮೇನಕಾ ಹುರಳಿ ಹಾಗೂ ಜಿಲ್ಲಾ ವಕ್ತಾರ ಹನುಮಂತಪ್ಪ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT